ವಿರಾಟ್​ ಕೊಹ್ಲಿ 
ಕ್ರಿಕೆಟ್

ಇಂಗ್ಲೆಂಡ್​ ಸರಣಿಗೂ ಕೊಹ್ಲಿ ಅಲಭ್ಯ​? 'ರನ್​ ಮಷಿನ್'​ ಎಂಟ್ರಿ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್​! | Virat Kohli

ಪ್ರಮುಖ ಮುಖ್ಯಾಂಶಗಳು

  • ಇಂಜುರಿಯಿಂದ ಆಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದ ವಿರಾಟ್​ ಕೊಹ್ಲಿ
  • ಚೇತರಿಕೆಯ ಬೆನ್ನಲ್ಲೇ ಇಂಗ್ಲೆಂಡ್​ ಸರಣಿಗೆ ಕೊಹ್ಲಿ ಮರಳುವ ಸಾಧ್ಯತೆ
Virat Kohli: ತೊಡೆಯ ಭಾಗದಲ್ಲಿ ಉಂಟಾದ ಇಂಜುರಿಯಿಂದ ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್​ ಕೊಹ್ಲಿ ಹೊರಗುಳಿದರು. ಸದ್ಯ ಚೇತರಿಕೆಯತ್ತ ಸಾಗಿರುವ ಕೊಹ್ಲಿ, ಜು.16ರಿಂದ ಆರಂಭವಾಗಲಿರುವ ಇಂಗ್ಲೆಂಡ್​ ಸರಣಿಗೆ ತಂಡಕ್ಕೆ ಮರಳಲಿದ್ದಾರೋ ಅಥವಾ ಅಲಭ್ಯತೆ ಕಾಡಲಿದೆಯೋ? ಎಂಬ ಅಭಿಮಾನಿಗಳ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.
ಪ್ರಸ್ತುತ, ವಿರಾಟ್ ಅವರು ಹ್ಯಾಮ್​ಸ್ಟ್ರಿಂಗ್​ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ಕಮ್​ಬ್ಯಾಕ್​ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಶುರುವಿಗೂ ಮುನ್ನವೇ ವಿರಾಟ್​ ತಂಡ ಸೇರುವ ಎಲ್ಲ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆಂಗ್ಲರ ನಾಡಿನಲ್ಲಿ ವಿರಾಟ್​ ಅವರ ಆಟವನ್ನು ನೋಡಲು ಕ್ರಿಕೆಟ್​ ಅಭಿಮಾನಿಗಳು ಭಾರಿ ಉತ್ಸಾಹದಲ್ಲಿದ್ದಾರೆ.

ವೇಗ ಗುಣಮುಖ

ಈಗಾಗಲೇ ಚೇತರಿಕೆಯತ್ತ ಸಾಗಿರುವ ಕೊಹ್ಲಿ, ಇಂಜುರಿಯಿಂದ ವೇಗವಾಗಿ ಗುಣಮುಖರಾಗುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಫಿಟ್‌ನೆಸ್ ಪರೀಕ್ಷೆ ಮತ್ತು ಕ್ಲಿಯರೆನ್ಸ್ ಸರ್ಟಿಫಿಕೆಟ್​ ಪಡೆಯಲು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್'ಗೆ ವರದಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ವಿರಾಟ್​ ಕೊಹ್ಲಿ ಅವರನ್ನು ಮೈದಾನದಲ್ಲಿ ನೋಡಬಹುದು ಎಂದು ಬಿಸಿಸಿಐ ತಿಳಿಸಿದೆ.

ಶೀಘ್ರವೇ ಟೀಮ್ ಇಂಡಿಯಾ ಆಯ್ಕೆ

ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಏಕದಿನ ತಂಡವನ್ನು ಈ ವಾರದ ಅಂತ್ಯದೊಳಗೆ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ಇಂಗ್ಲೆಂಡ್ ಪ್ರವಾಸದ ಏಕದಿನ ತಂಡವನ್ನು ಆಯ್ಕೆ ಮಾಡಲು ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಇಲ್ಲಿ ಯಾರಿಗೆಲ್ಲ ತಂಡದಲ್ಲಿ ಸ್ಥಾನ ಕೊಡಬೇಕು ಎಂದು ನಿರ್ಧರಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜು.14ರಿಂದ 19 ರವರೆಗೆ ನಡೆಯಲಿದ್ದು, ಪಂದ್ಯಗಳು ಬರ್ಮಿಂಗ್ಹ್ಯಾಮ್, ಕಾರ್ಡಿಫ್ ಮತ್ತು ಲಾರ್ಡ್ಸ್ ಮೈದಾನದಲ್ಲಿ ಜರುಗಲಿವೆ. ಕೊಹ್ಲಿ ಅವರ ಎಂಟ್ರಿಯ ಮೇಲೆ ಅಪಾರ ನಿರೀಕ್ಷೆಯಿಟ್ಟಿರುವ ಕ್ರಿಕೆಟ್​ ಅಭಿಮಾನಿಗಳು, ಅವರ ಆಗಮನದಿಂದ ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಬಲವಾಗಿ ನಂಬಿದ್ದಾರೆ,(ಏಜೆನ್ಸೀಸ್).