ವಿರಾಟ್​ ಕೊಹ್ಲಿ  
ಕ್ರಿಕೆಟ್

14,000, 400+ ರನ್​... ಗೇಲ್, ಧೋನಿ ಹೆಸರಿನಲ್ಲಿದ್ದ ದಾಖಲೆಗಳು ಪುಡಿ!​ ಶತಕ ಬಾರಿಸಿದ 'ಕಿಂಗ್​'ಗೆ ತಲೆಬಾಗಿದ ಫ್ಯಾನ್ಸ್

ಪ್ರಮುಖ ಮುಖ್ಯಾಂಶಗಳು

  • ಟಿ20 ಕ್ರಿಕೆಟ್​ನಲ್ಲಿ 14,000 ರನ್ ಗಳಿಸಿದ ವಿರಾಟ್ ಕೊಹ್ಲಿ
  • ಅತ್ಯಂತ ವೇಗವಾಗಿ ಈ ಸಾಧನೆಗೈದ ಏಕೈಕ ಭಾರತೀಯ ಆಟಗಾರ
  • 19ನೇ ಆವೃತ್ತಿಯಲ್ಲಿ 400ಕ್ಕೂ ಅಧಿಕ ರನ್​
Virat Kohli: 'ದಾಖಲೆಗಳ ಸರದಾರ', 'ರನ್​ ಮಷಿನ್'​, ಅಭಿಮಾನಿಗಳ ನೆಚ್ಚಿನ 'ಕಿಂಗ್​', ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್​ ಕೊಹ್ಲಿ ಸದ್ಯ 19ನೇ ಐಪಿಎಲ್​ ಆವೃತ್ತಿಯಲ್ಲಿ ಆರ್​ಸಿಬಿ ಪರ ಅಧ್ಬುತ, ಅಮೋಘ ಪ್ರದರ್ಶನ ನೀಡುತ್ತಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳನ್ನು ಮೈದಾನದಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದಕ್ಕೆ ಜ್ವಲಂತ ಸಾಕ್ಷಿ, ನಿನ್ನೆಯ ಕೆಕೆಆರ್​ ವಿರುದ್ಧದ ಪಂದ್ಯ.
ಬುಧವಾರ (ಮೇ.13) ರಾಯ್‌ಪುರದಲ್ಲಿ ನಡೆದ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ದಾಖಲೆಗಳಿಗೆ ಕೊಹ್ಲಿ ಸಾಕ್ಷಿಯಾದರು. 60 ಎಸೆತಗಳಲ್ಲಿ 105 ರನ್ ಬಾರಿಸುವ ಮೂಲಕ ಶತಕ ದಾಖಲಿಸಿದ ವಿರಾಟ್​ ಕೊಹ್ಲಿ, ಅಜೇಯರಾಗಿ ಉಳಿದು ಆರ್​ಸಿಬಿಗೆ ಭರ್ಜರಿ ಗೆಲುವು ತಂದುಕೊಟ್ಟರು. ಇದೊಂದು ಸೆಂಚುರಿಯಿಂದ (ಅಂತಾರಾಷ್ಟ್ರೀಯ, ಐಪಿಎಲ್, ಲಿಸ್ಟ್-ಎ ಪಂದ್ಯಗಳು) 14,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್​ ಪಾತ್ರರಾಗಿದ್ದಾರೆ.
78 ರನ್‌ಗಳ ವೈಯಕ್ತಿಕ ಸ್ಕೋರ್‌ನಿಂದ ಟಿ20 ಇತಿಹಾಸದಲ್ಲಿ ಬರೋಬ್ಬರಿ 14,000 ರನ್‌ಗಳನ್ನು ಪೂರೈಸಿದ ಆಟಗಾರ ಎಂಬ ವಿಶೇಷ ದಾಖಲೆ ಕೊಹ್ಲಿ ಮುಡಿಗೇರಿತು. ಈ ಚೇಸ್​ನಲ್ಲಿ, ಅವರು ವೆಸ್ಟ್​ ಇಂಡೀಸ್​ನ ದೈತ್ಯ ಕ್ರಿಸ್ ಗೇಲ್ ಅವರನ್ನು ಮೀರಿಸಿದ್ದಾರೆ. ಗೇಲ್ 423 ಇನ್ನಿಂಗ್ಸ್‌ಗಳಲ್ಲಿ ಟಿ20 ಪಂದ್ಯಗಳಲ್ಲಿ 14,000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದರೆ, ಕೊಹ್ಲಿ ಕೇವಲ 409 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದರೊಟ್ಟಿಗೆ ಈ ಸೀಸನ್​ನಲ್ಲಿ 484 ರನ್​ಗಳನ್ನು ಗಳಿಸಿ, ಅತ್ಯಧಿಕ ರನ್​ಸ್ಕೋರರ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮೊದಲ ಭಾರತೀಯ

ಟಿ20 ಕ್ರಿಕೆಟ್‌ನಲ್ಲಿ 14,000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್​ ನಂತರ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಇದ್ದಾರೆ. ಅವರು 456 ಇನ್ನಿಂಗ್ಸ್‌ಗಳಲ್ಲಿ 12,491 ರನ್ ಗಳಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 14,000 ರನ್ ಗಳಿಸಿದ ಆಟಗಾರರಿವರು

  • ವಿರಾಟ್ ಕೊಹ್ಲಿ - 409 ಇನ್ನಿಂಗ್ಸ್ (ಭಾರತ)
  • ಕ್ರಿಸ್ ಗೇಲ್ - 423 ಇನ್ನಿಂಗ್ಸ್ (ವೆಸ್ಟ್ ಇಂಡೀಸ್​)
  • ಡೇವಿಡ್ ವಾರ್ನರ್ - 431 ಇನ್ನಿಂಗ್ಸ್ (ಆಸ್ಟ್ರೇಲಿಯಾ)
  • ಅಲೆಕ್ಸ್ ಹೇಲ್ಸ್ - 505 ಇನ್ನಿಂಗ್ಸ್ (ಇಂಗ್ಲೆಂಡ್​)
  • ಕೀರನ್ ಪೊಲಾರ್ಡ್ - 633 ಇನ್ನಿಂಗ್ಸ್ (ವೆಸ್ಟ್​ ಇಂಡೀಸ್​)
ಐಪಿಎಲ್​ ಇತಿಹಾಸದಲ್ಲಿ ಕಳೆದ 19 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ವಿರಾಟ್ ಕೊಹ್ಲಿ, ಆರ್‌ಸಿಬಿ ಜೆರ್ಸಿಯನ್ನು ಧರಿಸಿ ತಮ್ಮ 279ನೇ ಐಪಿಎಲ್ ಪಂದ್ಯವನ್ನು ಆಡಿದ್ದು ವಿಶೇಷ. ಕೆಕೆಆರ್​ ವಿರುದ್ಧದ ಶತಕದ ಮೂಲಕ ಭಾರತೀಯ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಧೋನಿ ಮತ್ತು ರೋಹಿತ್ ತಲಾ 278 ಪಂದ್ಯಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ಈಗ ಅವರಿಬ್ಬರ ದಾಖಲೆಯನ್ನು ಮುರಿದಿದ್ದಾರೆ.
ಇಲ್ಲಿಯವರೆಗೆ 279 ಪಂದ್ಯಗಳಲ್ಲಿ 9,040 ರನ್ ಗಳಿಸಿರುವ ವಿರಾಟ್​, ಐಪಿಎಲ್‌ನಲ್ಲಿ ಅಗ್ರ ಸ್ಕೋರರ್ ಆಗಿ ಉಳಿದಿದ್ದಾರೆ. ರೋಹಿತ್ ಶರ್ಮಾ 7,289 ರನ್‌ಗಳೊಂದಿಗೆ ಎರಡನೇ ಸ್ಥಾನ ಮತ್ತು ಎಂ.ಎಸ್. ಧೋನಿ 5,439 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ವಿರಾಟ್ ಐಪಿಎಲ್‌ನಲ್ಲಿ 9 ಶತಕಗಳನ್ನು ಬಾರಿಸಿದ್ದಾರೆ. ಈ ಲೀಗ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ ಆಗಿದ್ದಾರೆ. ಮೈದಾನದಲ್ಲಿ ರನ್​ಗಳ ಹೊಳೆ ಹರಿಸುವ ಮೂಲಕ ಎಲ್ಲಾ ವಿಭಾಗಗಳಲ್ಲಿಯೂ 'ಕಿಂಗ್​' ದಾಖಲೆಗಳನ್ನು ಮುರಿಯುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕೊನೆಯೇ ಇಲ್ಲ ಎನ್ನುವಂತೆ ಮಾಡಿದೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರಿವರು

  • ವಿರಾಟ್ ಕೊಹ್ಲಿ - 14,027 ರನ್​
  • ರೋಹಿತ್ ಶರ್ಮಾ - 12,491 ರನ್​
  • ಶಿಖರ್ ಧವನ್ - 9797 ರನ್​
  • ಸೂರ್ಯಕುಮಾರ್ ಯಾದವ್ - 9654 ರನ್​
  • ಸಂಜು ಸ್ಯಾಮ್ಸನ್ - 8830 ರನ್​