ಶುಭಮನ್ ಗಿಲ್, ವಿರಾಟ್ ಕೊಹ್ಲಿ
- ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿ
- ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಸರಣಿ ಗೆಲ್ಲುವ ತವಕ ಟೀಮ್ ಇಂಡಿಯಾಗೆ
- ನೀರಿನ ಬಾಟಲಿಗಳನ್ನು ಕೊಂಡೊಯ್ಯುತ್ತಿರುವ ವಿರಾಟ್ ವಿಡಿಯೋ ವೈರಲ್
- ಶುಭಮನ್ ಗಿಲ್ ವಾಟರ್ ಪ್ಯೂರಿಫೈಯರ್, ಕೊಹ್ಲಿ ನೀರಿನ ಬಾಟಲಿಗಳು
ಇಂದೋರ್: ಆತಿಥೇಯ ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿದೆ. ಇನ್ನೊಂದು ನಿರ್ಣಾಯಕ ಪಂದ್ಯ ಬಾಕಿ ಉಳಿದಿದ್ದು, ಅದು ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು (ಜ.18) ನಡೆಯಲಿದೆ. ಈ ಪಂದ್ಯಕ್ಕಾಗಿ ಇಂದೋರ್ಗೆ ಬಂದಿಳಿದಿರುವ ಟೀಮ್ ಇಂಡಿಯಾ ಆಟಗಾರರು, ಅದೊಂದು ಘಟನೆಯಿಂದ ಭಯಭೀತಿಗೆ ಒಳಗಾಗಿರುವುದು ಸದ್ಯ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಈಗಾಗಲೇ ಟೀಮ್ ಇಂಡಿಯಾ ಇಂದೋರ್ನಲ್ಲಿ ಬೀಡುಬಿಟ್ಟಿದ್ದು, ಅಭ್ಯಾಸವೆಲ್ಲ ಮುಗಿಸಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿರುವ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಬೀಗಲು ಟೀಮ್ ಇಂಡಿಯಾ ಎದುರುನೋಡುತ್ತಿದೆ. ಇನ್ನು ನಿನ್ನೆಯಷ್ಟೇ ಭಾರತ ತಂಡದ ಕ್ಯಾಪ್ಟನ್ ಶುಭಮನ್ ಗಿಲ್, 3 ಲಕ್ಷ ರೂ. ಮೌಲ್ಯದ ನೀರು ಶುದ್ಧೀಕರಣ (ವಾಟರ್ ಪ್ಯೂರಿಫಿಕೇಶನ್) ಯಂತ್ರವನ್ನು ತಂಗಿದ್ದ ಹೋಟೆಲ್ ರೂಮಿನಲ್ಲಿ ಅಳವಡಿಸಿಕೊಂಡಿದ್ದಾಗಿ 'ಎನ್ಡಿಟಿವಿ' ತನ್ನ ವರದಿಯಲ್ಲಿ ಉಲ್ಲೇಖಿಸಿತು.
ಇತ್ತೀಚೆಗೆ ಕಲುಷಿತ ನೀರಿನ ವಿಚಾರಕ್ಕೆ ಇಂದೋರ್ ದೇಶಾದ್ಯಂತ ಟೀಕೆಗೆ ಗುರಿಯಾಯಿತು. ಮಕ್ಕಳು ಸೇರಿ ಅನೇಕರ ಸಾವುಗಳು ಕಲುಷಿತ ನೀರಿನ ಕಾರಣಕ್ಕೆ ಸಂಭವಿಸಿವೆ ಎಂಬುದು ದೃಢಪಟ್ಟಿತು. ಇದರ ಪರಿಣಾಮ ಟೀಮ್ ಇಂಡಿಯಾ ಮೇಲೂ ಆಗಬಾರದು ಎಂದು ಬಿಸಿಸಿಐ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ ಎಂಬುದು ವರದಿ. ಗಿಲ್ ವಾಟರ್ ಪ್ಯೂರಿಫೈಯರ್ ಹಾಕಿಸಿಕೊಂಡರೆ, ವಿರಾಟ್ ಕೊಹ್ಲಿ ತಮ್ಮ ರೂಮಿಗೆ ಹೋಗುವ ಸಮಯದಲ್ಲಿ ಒಂದು ಬ್ಯಾಗ್ ಪೂರ ನೀರಿನ ಬಾಟಲಿಗಳನ್ನು ಕೊಂಡೊಯ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).