Virat Kohli: ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಉತ್ತರ ಪ್ರದೇಶದ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಜಿ ಮಹಾರಾಜ್ ಅವರ ಆಶ್ರಮ ವರಾಹ ಘಾಟ್ಗೆ ಇಂದು (ಡಿ.16) ಭೇಟಿ ನೀಡಿದ್ದಾರೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆಲುವಿನ ನಂತರ ಭಾರತಕ್ಕೆ ಮರಳಿದ ದಂಪತಿಗಳು ಈ ಕ್ಷೇತ್ರಕ್ಕೆ ಪ್ರಯಾಣ ಬೆಳಿಸಿದ್ದು, ಇದು ಈ ವರ್ಷದಲ್ಲಿ ಅವರ ಮೂರನೇ ಭೇಟಿಯಾಗಿದೆ ಎಂದು ವರದಿಯಾಗಿದೆ.
ವೈರಲ್ ಆದ ವಿಡಿಯೋದಲ್ಲಿ ದಂಪತಿ ಪ್ರೇಮಾನಂದ್ ಜಿ ಮಹಾರಾಜ್ ಅವರೊಂದಿಗೆ ಆಧ್ಯಾತ್ಮಿಕ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪ್ರೇಮಾನಂದ್ ಅವರು ಕೊಹ್ಲಿ ಹಾಗೂ ಅನುಷ್ಕಾಗೆ ನಿಮ್ಮ ಕೆಲಸವನ್ನು ದೇವರ ಸೇವೆ ಎಂದು ಪರಿಗಣಿಸಿ, ಗಂಭೀರವಾಗಿ ಮತ್ತು ವಿನಮ್ರವಾಗಿರಿ ಎಂದು ಹೇಳಿದ್ದಾರೆ.
ಜನವರಿಯಲ್ಲಿ, ವಿರಾಟ್, ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಪ್ರೇಮಾನಂದ್ ಅವರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮೇ ತಿಂಗಳಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಒಂದು ದಿನದ ನಂತರ, ದಂಪತಿ ವರಾಹ ಘಾಟ್ಗೆ ಭೇಟಿ ನೀಡಿ ಅವರಿಂದ ಆಶೀರ್ವಾದವನ್ನು ಪಡೆದರು.
ಸಧ್ಯ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಮಾತ್ರ ಸಕ್ರೀಯರಾಗಿದ್ದಾರೆ. ಡಿಸೆಂಬರ್ 24 ರಿಂದ ಪ್ರಾರಂಭವಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಟವನ್ನು ಆಡಲಿದ್ದಾರೆ.
ಡಿಸೆಂಬರ್ 6 ರಂದು ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ ನಂತರ ಅವರು ಯುಕೆಗೆ ಮರಳಿದರು. ತಮಗೆ ಮಕ್ಕಳಾದ ನಂತರ ಈ ದಂಪತಿ ಯುಕೆಯಲ್ಲಿ ವಾಸಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಅವರು 15 ವರ್ಷಗಳ ನಂತರ ದೆಹಲಿ ಪರ ವಿಜಯ್ ಹಜಾರೆ ಟ್ರೋಫಿ 2025-26 ಯಲ್ಲಿ ಆಡಲಿದ್ದಾರೆ. ಆದರೆ ಜನವರಿ 11ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿಂದ ಕೊಹ್ಲಿ ಕೇವಲ ಆರಂಭಿಕ 4-5 ಪಂದ್ಯಗಳಲ್ಲಿ ದೆಹಲಿ ಪರ ಆಡಲಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ (ಏಜೆನ್ಸೀಸ್).