ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಕೊಹ್ಲಿ, ಕುಲದೀಪ್ 
ಕ್ರಿಕೆಟ್

ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಕೊಹ್ಲಿ, ಕುಲದೀಪ್​; ಭಸ್ಮ ಆರತಿ ಪೂಜೆಯಲ್ಲಿ ಸ್ಟಾರ್​ ಕ್ರಿಕೆಟಿಗರು ಭಾಗಿ

ಪ್ರಮುಖ ಮುಖ್ಯಾಂಶಗಳು

  • ಉಜ್ಜಯಿನಿ ಮಹಾಕಾಳೇಶ್ವರನ ಸನ್ನಧಿಯಲ್ಲಿ ಕೊಹ್ಲಿ, ಕುಲದೀಪ್ ಯಾದವ್
  • ಭಸ್ಮಾರತಿ ಪೂಜೆಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರು ಭಾಗಿ
  • ಇಂದೋರ್‌ನಲ್ಲಿ ಕಿವೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ ದೇವರ ದರ್ಶನ
ಇಂದೋರ್​: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರ ಕಾಯ್ದುಕೊಂಡಿರುವ ಎರಡೂ ತಂಡಗಳು ಇದೀಗ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಗೆದ್ದು ಬೀಗಲು ಎದುರುನೋಡುತ್ತಿವೆ. ಈ ಮ್ಯಾಚ್​ಗೂ ಮುನ್ನ ಟೀಮ್ ಇಂಡಿಯಾದ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ಕುಲದೀಪ್ ಯಾದವ್,​ ಉಜ್ಜಯಿನಿ ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.

ಕೊನೆಯ ಏಕದಿನ ಪಂದ್ಯಕ್ಕೂ ಮುನ್ನ ದೇವರಿಗೆ ನಮನ

ಆಗಿರುವ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಸರಣಿಯ ಕೊನೆಯ (ಮೂರನೇ) ಪಂದ್ಯ ಭಾನುವಾರ (ಜ.18) ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಂದೋರ್‌ನಲ್ಲಿ ಪ್ರಾರಂಭವಾಗಲಿದೆ. ಕೊನೆಯ ಪಂದ್ಯಕ್ಕಾಗಿ ಈಗಾಗಲೇ ಟೀಮ್ ಇಂಡಿಯಾ ಇಂದೋರ್‌ಗೆ ತಲುಪಿದೆ. ಈ ಸಂದರ್ಭದಲ್ಲಿ, ಬಿಡುವಿನ ಸಮಯ ನೋಡಿಕೊಂಡು ವಿರಾಟ್ ಕೊಹ್ಲಿ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಸೇರಿ ಒಂದಷ್ಟು ಕ್ರಿಕೆಟಿಗರು ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ 4 ಗಂಟೆಗೆ ಕ್ರಿಕೆಟಿಗರು ಭಸ್ಮ ಆರತಿ ಪೂಜೆಯಲ್ಲಿ ಭಾಗವಹಿಸಿ, ಶಿವನ ದರ್ಶನ ಪಡೆದಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಕೂಡ ಹಾಜರಿದ್ದರು. ಮಹಾಕಾಳೇಶ್ವರ ದೇವಾಲಯಕ್ಕೆ ಆಗಮಿಸಿದ ಕ್ರಿಕೆಟಿಗರಿಗೆ ಅರ್ಚಕರು ಭವ್ಯಸ್ವಾಗತ ಕೋರಿದರು. ಇದಾದ ಬಳಿಕ, ಅರಿಶಿನ ತಿಲಕ ನೀಡಲಾಯಿತು. ಕೊಹ್ಲಿ ಮತ್ತು ಕುಲದೀಪ್ ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಸ್ಮ ಆರತಿಯಲ್ಲಿ ಭಾಗವಹಿಸಿ, ದೇವರಿಗೆ ಭಕ್ತಪೂರ್ವಕ ನಮನ ಸಲ್ಲಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ,(ಏಜೆನ್ಸೀಸ್).