ನನ್ನ ನೋಡಿ ನಕ್ಕವರು ಇಂದು ಗಪ್ಚುಪ್... ಕೊಹ್ಲಿ ಹೆಸರು ಉಲ್ಲೇಖಿಸಿ ಅಚ್ಚರಿ ಹೇಳಿಕೆ ನೀಡಿದ ವಿಜಯ್ ಮಲ್ಯ! RCB
- ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಮಾರಾಟ ಪ್ರಕ್ರಿಯೆ ಮುಗಿದಿದೆ
- ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ
- ಬಿರ್ಲಾ ಗ್ರೂಪ್ ಜೊತೆಗೆ ಇತರೆ ಮೂರು ಕಂಪನಿಗಳು 16,706 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ
- ಆರ್‌ಸಿಬಿ ಮಾರಾಟವಾದ ಬೆನ್ನಲ್ಲೇ ಮಾಜಿ ಮಾಲೀಕ ವಿಜಯ್ ಮಲ್ಯ ಮಾಡಿರುವ ಟ್ವೀಟ್ ವೈರಲ್ ಆಗಿದೆ
RCB : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಮಾರಾಟ ಪ್ರಕ್ರಿಯೆ ಮುಗಿದಿದೆ. ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಸ್ವಾಧೀನಪಡಿಸಿಕೊಂಡಿದ್ದು, ಬರೋಬ್ಬರಿ 16,706 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಬಿರ್ಲಾ ಗ್ರೂಪ್ ಜೊತೆಗೆ, ಇತರೆ ಮೂರು ಕಂಪನಿಗಳು ಕೂಡ ಆರ್‌ಸಿಬಿ ತಂಡದ ಷೇರುಗಳನ್ನು ಖರೀದಿ ಮಾಡಿವೆ. ಇನ್ನು ಮುಂದೆ ಆರ್ಸಿಬಿಗೆ ಹೊಸ ಮಾಲೀಕತ್ವದಲ್ಲಿ ತನ್ನ ಐಪಿಎಲ್ ಪ್ರಯಾಣವನ್ನು ಆರಂಭಿಸಲಿದೆ. ಆರ್‌ಸಿಬಿ ತಂಡ ದಾಖಲೆ ಬೆಲೆಗೆ ಮಾರಾಟವಾಗುತ್ತಿದ್ದಂತೆ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ, ಬಿರ್ಲಾ ಗ್ರೂಪ್ ಜೊತೆಗೆ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲಾಕ್‌ಸ್ಟೋನ್ ಮತ್ತು ಡೇವಿಡ್ ಬ್ಲಿಟ್ಜರ್ ಎಂಬ ಮೂರು ಕಂಪನಿಗಳು ಆರ್ಸಿಬಿಗೆ ಸಂಬಂಧಿಸಿದ ಷೇರುಗಳನ್ನು ಖರೀದಿಸಿವೆ. ಈ ನಾಲ್ಕು ಕಂಪನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 1.78 ಬಿಲಿಯನ್ ಡಾಲರ್‌ಗಳಿಗೆ ಸ್ವಾಧೀನಪಡಿಸಿಕೊಂಡಿವೆ. 2008 ರಲ್ಲಿ ವಿಜಯ್ ಮಲ್ಯ ಅವರು 446 ಕೋಟಿ ರೂ.ಗೆ ಆರ್‌ಸಿಬಿ ತಂಡವನ್ನು ಖರೀದಿ ಮಾಡಿದ್ದರು. ಅದರ ಮೌಲ್ಯ ಇಂದು 1,500 ರಷ್ಟು ಹೆಚ್ಚಳವಾಗಿದ್ದು, 16 ಸಾವಿರ ಕೋಟಿಗೆ ಮಾರಾಟವಾಗಿದೆ. ಇದರ ಬೆನ್ನಲ್ಲೇ ವಿಜಯ್ ಮಲ್ಯ ಅವರು ಆರ್‌ಸಿಬಿ ಖರೀದಿ ಮಾಡಿದ ಸಂದರ್ಭದಲ್ಲಾದ ಕೆಲವು ಘಟನೆಗಳನ್ನು ಮೆಲಕು ಹಾಕಿದ್ದಾರೆ.
ಆರ್ಸಿಬಿಯ ಹೊಸ ಮಾಲೀಕರಿಗೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅತ್ಯಂತ ಅಮೂಲ್ಯವಾದ ಐಪಿಎಲ್ ಫ್ರಾಂಚೈಸಿಯೊಂದಿಗೆ ದೇವರು ನಿಮಗೆ ಶುಭ ಹಾರೈಸುತ್ತಾನೆ. 2008ರಲ್ಲಿ ನಾನು 450 ಕೋಟಿ ರೂ.ಗಳಿಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿ ಮಾಡಿದಾಗ ಅನೇಕ ಮಂದಿ ನನ್ನ ನೋಡಿ ನಕ್ಕರು ಮತ್ತು ನನ್ನ ಹೂಡಿಕೆಯನ್ನು ವ್ಯರ್ಥ ಯೋಜನೆ ಎಂದು ಟೀಕಿಸಿದರು. ನನ್ನ ಪ್ರಚಾರದ ಹುಚ್ಚುತನದ ಹಿಂದೆ ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸುವುದು ಗುರಿಯಾಗಿತ್ತು. ಅದಕ್ಕಾಗಿಯೇ ನಾನು ಫ್ರಾಂಚೈಸಿಗೆ RCB ಎಂದು ಹೆಸರಿಸಿದೆ. ನಾನು ಅಂದು ಹೂಡಿಕೆ ಮಾಡಿದ್ದ 450 ಕೋಟಿ ರೂ. ಬಂಡವಾಳ ಇಂದು 16,500 ಕೋಟಿ ರೂ.ವರೆಗೆ ಬೆಳೆದಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುವುದು ಸೇರಿದಂತೆ ಅಳಿಸಲಾಗದ ನೆನಪುಗಳೊಂದಿಗೆ ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ. ನನ್ನ ನಾಯಕತ್ವದ ಸಮಯದಲ್ಲಿ ಮತ್ತು ನಂತರವೂ ಸಹಕಾರ ನೀಡಿದ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು ಮತ್ತು ದಯವಿಟ್ಟು ಬೆಂಗಳೂರಿನ ಸಿಂಹ ಆರ್ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ. ನಮಸ್ಕಾರ ಎಂದು ವಿಜಯ್ ಮಲ್ಯ ಬರೆದುಕೊಂಡಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ, ಆರ್‌ಸಿಬಿ ಮಾರಾಟವಾದರೂ ವಿಜಯ್ ಮಲ್ಯಗೆ ಒಂದೇ ಒಂದು ರೂಪಾಯಿ ಸಿಗುವುದಿಲ್ಲ. ಏಕೆಂದರೆ, ಮಾಜಿ ಮಾಲೀಕ ಅನ್ನೋದು ಬಿಟ್ಟರೆ ವಿಜಯ್ ಮಲ್ಯಗೂ ಆರ್ಸಿಬಿಗೂ ಪ್ರಸ್ತುತ ಯಾವುದೇ ಸಂಬಂಧವಿಲ್ಲ. 2016 ರಲ್ಲಿ ಹಣಕಾಸಿನ ಹಗರಣದಲ್ಲಿ ಸಿಲುಕಿದ ವಿಜಯ್ ಮಲ್ಯ ದೇಶವನ್ನು ತೊರೆದರು. ಅಲ್ಲದೆ, ಆರ್‌ಸಿಬಿ ಮಾಲೀಕತ್ವವನ್ನು ಯುನೈಟೆಡ್ ಕಿಂಗ್ಡಮ್ ಮೂಲದ ಡಿಯಾಜಿಯೊ ಕಂಪನಿಯ ಅಂಗಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ಗೆ ವರ್ಗಾವಣೆ ಮಾಡಿದರು. ಅಲ್ಲಿಂದಾಚೆಗೆ ಅವರು ತಂಡದ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡರು.
ಪೂರ್ಣ ಷೇರು ಮಾರಿದ ಡಿಯಾಜಿಯೊ
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಆರ್‌ಸಿಬಿ ಫ್ರಾಂಚೈಸಿಯ 100 ರಷ್ಟು ಷೇರನ್ನು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ನೇತೃತ್ವದ ಒಕ್ಕೂಟಕ್ಕೆ $1.78 ಬಿಲಿಯನ್ (ಸುಮಾರು 16,660 ಕೋಟಿ) ಗೆ ಮಾರಾಟ ಮಾಡಿದೆ. 2008 ರಲ್ಲಿ ಮಲ್ಯ ಅವರು 446 ಕೋಟಿ ರೂ.ಗೆ ಆರ್‌ಸಿಬಿ ತಂಡವನ್ನು ಖರೀದಿ ಮಾಡಿದ್ದರು. ಅದರ ಮೌಲ್ಯ ಇಂದು 1,500 ರಷ್ಟು ಹೆಚ್ಚಳವಾಗಿದ್ದು, 16 ಸಾವಿರ ಕೋಟಿಗೆ ಮಾರಾಟವಾಗಿದೆ. ಆದರೆ, ಆರ್ಥಿಕ ಲಾಭವು ಸಂಪೂರ್ಣ ಯುನೈಟೆಡ್ ಸ್ಪಿರಿಟ್ಸ್/ಡಿಯಾಜಿಯೊಗೆ ಹೋಗಿದೆ. ಮಾ.28 ರಿಂದ ಆರಂಭವಾಗಲಿರುವ 19ನೇ ಐಪಿಎಲ್ ಆವೃತ್ತಿಗೆ ಡಿಯಾಜಿಯೋ ಕಂಪನಿಯೇ ಆರ್‌ಸಿಬಿ ಮಾಲೀಕತ್ವ ಇರಲಿದೆ. ಮುಂದಿನ ಸೀಸನ್ನಿಂದ ಆದಿತ್ಯ ಬಿರ್ಲಾ ಗ್ರೂಪ್ಗೆ ಮಾಲೀಕತ್ವ ಹಸ್ತಾಂತರಗೊಳ್ಳಲಿದೆ.
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್).