ಮುಂಬೈ ಆಟಗಾರರಾದ ಹಾರ್ದಿಕ್​ ತಮೋರೆ ಮತ್ತು ರೋಹಿತ್​ ಶರ್ಮ 
ಕ್ರಿಕೆಟ್

2ನೇ ಪಂದ್ಯದಲ್ಲಿ ರೋಹಿತ್ ಫ್ಲಾಪ್ ಆದ್ರೆ ತದ್ರೂಪಿ ತಮೋರೆಯಿಂದ ಭರ್ಜರಿ ಪ್ರದರ್ಶನ​: ಮತ್ತೆ ಮಿಂಚಿದ ವಿರಾಟ್​ ಕೊಹ್ಲಿ! Rohit Sharma

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
  • ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ರೋಹಿತ್​ ಶರ್ಮ ಎಲ್ಲರ ಗಮನ ಸೆಳೆದರು
  • ಆದ್ರೆ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್​ ಡಕ್​ ಆಗಿ ನಿರಾಸೆ ಮೂಡಿಸಿದರು
  • ಮುಂಬೈ ತಂಡದಲ್ಲೇ ಇರುವ ರೋಹಿತ್​ ಅವರ ತದ್ರೂಪಿ ಹಾರ್ದಿಕ್​ ತಮೋರೆ ಅದ್ಭುತ ಪ್ರದರ್ಶನ ನೀಡಿದರು
ನವದೆಹಲಿ : ಪ್ರಸ್ತುತ 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ ಟೀಮ್ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ( Rohit Sharma ), ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.
ಶುಕ್ರವಾರ ಜೈಪುರದಲ್ಲಿ ನಡೆದ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಮೈದಾನಕ್ಕೆ ಇಳಿದ ಹಿಟ್‌ಮ್ಯಾನ್ ಗೋಲ್ಡನ್ ಡಕ್‌ಗೆ ಔಟಾದರು. ಅವರು ಕೇವಲ ಒಂದು ಎಸೆತ ಎದುರಿಸಿ ಪೆವಿಲಿಯನ್ ತಲುಪಬೇಕಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಜಗಮೋಹನ್ ನಾಗರಕೋಟಿ ಅವರಿಗೆ ಕ್ಯಾಚ್ ನೀಡಿದರು. ಇದು ರೋಹಿತ್ ಅಭಿಮಾನಿಗಳನ್ನು ತೀವ್ರ ನಿರಾಶೆಗೊಳಿಸಿತು. ಮೊದಲ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಹಿಟ್‌ಮ್ಯಾನ್ ಶತಕ ಗಳಿಸಿದ್ದರು.
ಆದರೆ, ಮುಂಬೈ ತಂಡದಲ್ಲೇ ಇರುವ ರೋಹಿತ್​ ಅವರ ತದ್ರೂಪಿ ಹಾರ್ದಿಕ್​ ತಮೋರೆ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದರು. ವಿಕೆಟ್​ ಕೀಪರ್​ ಆಗಿರುವ ತಮೋರೆ, ಕೇವಲ 82 ಎಸೆತಗಳಲ್ಲಿ 93 ರನ್​ ಬಾರಿಸಿ, ಶತಕದ ಹೊಸ್ತಿಲಲ್ಲಿ ಎಡವಿದರು. ತಮ್ಮ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಮುಂಬೈ ತಂಡ 300 ರನ್​ ಗಡಿ ದಾಟಲು ನೆರವಾದರು.

ಥೇಟ್​ ರೋಹಿತ್​ನಂತೆಯೇ ಇದಾರೆ!

ಇದೀಗ ತಮೋರೆ ಅವರು ರೋಹಿತ್​ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ತಮೋರೆ ನೋಡಲು ಥೇಟ್​ ರೋಹಿತ್​ನಂತೆಯೇ ಕಾಣುತ್ತಿದ್ದಾರೆ ಎಂದು ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫೋಟೋ ನೋಡಿದವರು ರೋಹಿತ್​ಗೆ ಓರ್ವ ಸಹೋದರ ಕೂಡ ಇದ್ದಾರೆಯೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಭರ್ಜರಿ ಫಾರ್ಮ್​ನಲ್ಲಿ ಕೊಹ್ಲಿ

ಇನ್ನೊಂದೆಡೆ ವಿಜಯ್ ಹಜಾರೆ ಟ್ರೋಫಿಯ ಭಾಗವಾಗಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದಾರೆ. 61 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 77 ರನ್ ಗಳಿಸಿದರು. ಕೊಹ್ಲಿ ಔಟಾದ ನಂತರ, ದೆಹಲಿ ನಾಯಕ ರಿಷಭ್ ಪಂತ್ ಕೂಡ ಆಕ್ರಮಣಕಾರಿ ಆಟವಾಡಿದ್ದಾರೆ. ಪಂತ್ ಅವರು 79 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗಿದ್ದು, ದೆಹಲಿ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 254 ರನ್​ ಕಲೆಹಾಕಿದೆ, (ಏಜೆನ್ಸೀಸ್​).