ಪತ್ನಿ ನೇಹಾ ಖೇಡೇಕರ್​ ಆಡಿದ ಮಾತು ವರುಣ್​ ಚಕ್ರವರ್ತಿ ( Varun Chakravarthy ) ಜೀವನ ಬದಲಿಸಿತು. 
ಕ್ರಿಕೆಟ್

ನೀನು 5 ಸಾವಿರ ದುಡಿ, ನಾನು 15 ಸಾವಿರ ಸಂಪಾದಿಸ್ತೀನಿ... ಪತ್ನಿಯ ಆ ಒಂದು ಮಾತು ವರುಣ್​ ಜೀವನ ಬದಲಿಸಿತು! Varun Chakravarthy

ಪ್ರಮುಖ ಮುಖ್ಯಾಂಶಗಳು

  • ಓರ್ವ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಅನ್ನೋ ಮಾತಿಗೆ ಟೀಮ್​ ಇಂಡಿಯಾದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ತಾಜಾ ಉದಾಹರಣೆ
  • ವರುಣ್ ಚಕ್ರವರ್ತಿ​ ಇಂದು ಈ ಸಾಧನೆಯ ಹಂತವನ್ನು ತಲುಪಲು ಅವರ ಮಡದಿಯೇ ಮುಖ್ಯ ಕಾರಣ
  • ಏನೂ ಇಲ್ಲದ ಸಮಯದಲ್ಲಿ ಗಂಡನ ಜತೆಯಲ್ಲಿ ನಿಂತು, ಆತನ ಶ್ರಮಕ್ಕೆ ಹೆಗಲು ಕೊಟ್ಟರು ನೇಹಾ
Varun Chakravarthy : ಓರ್ವ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಅನ್ನೋ ಮಾತಿಗೆ ಟೀಮ್​ ಇಂಡಿಯಾದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ತಾಜಾ ಉದಾಹರಣೆಯಾಗಿದ್ದಾರೆ. ವರುಣ್​ ಇಂದು ಈ ಸಾಧನೆಯ ಹಂತವನ್ನು ತಲುಪಲು ಅವರ ಮಡದಿಯೇ ಮುಖ್ಯ ಕಾರಣ. ಏನೂ ಇಲ್ಲದ ಸಮಯದಲ್ಲಿ ಗಂಡನ ಜತೆಯಲ್ಲಿ ನಿಂತು, ಆತನ ಶ್ರಮಕ್ಕೆ ಹೆಗಲು ಕೊಟ್ಟ, ಪ್ರತಿಭೆಗೆ ನೀರೆರೆದ ವರುಣ್​ ಪತ್ನಿಯ ಸ್ಫೂರ್ತಿದಾಯಕ ಲವ್​ ಸ್ಟೋರಿಯನ್ನು ನಾವಿಂದು ತಿಳಿದುಕೊಳ್ಳೋಣ.
ಅಂದಹಾಗೆ, ಟೀಮ್ ಇಂಡಿಯಾದ ನಿಗೂಢ ಸ್ಪಿನ್ನರ್ ವರುಣ್ ಚಕ್ರವರ್ತಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಟಿ20 ಪಂದ್ಯಗಳಲ್ಲಿ ತಮ್ಮ ನಿಗೂಢ ಸ್ಪಿನ್ ಮೂಲಕ ಎದುರಾಳಿ ತಂಡಗಳ ಬ್ಯಾಟ್ಸ್​ಮನ್​ಗಳಿಗೆ ದುಸ್ವಪ್ನವಾಗಿ ಕಾಡುತ್ತಾರೆ. ತಮ್ಮ ಕರಾರುವೊಕ್ಕಾದ ಸ್ಪಿನ್​ ದಾಳಿಯಿಂದ ಬಲಿಷ್ಠ ಬ್ಯಾಟ್ಸ್​ಮನ್​ಗಳ ವಿಕೆಟ್​ಗಳನ್ನು ಕಬಳಿಸುವಲ್ಲಿ ವರುಣ್​ ನಿಪುಣರು. ಅನುಭವಿ ಬ್ಯಾಟರ್​ಗಳೇ ವರುಣ್​ ಎಸೆದ ಬಾಲ್​ ಅನ್ನು ಜಡ್ಜ್​ ಮಾಡದೇ ವಿಕೆಟ್​ ಒಪ್ಪಿಸುತ್ತಾರೆ. ಇದರಿಂದಲೇ ಇಂದು ವಿಶ್ವದ ನಂಬರ್​ 1 ಟಿ20 ಬೌಲರ್​ ಎಂಬ ಖ್ಯಾತಿಗೆ ವರಣ್​ ಭಾಜನರಾಗಿದ್ದಾರೆ. 
ತಮ್ಮ ವಿಶೇಷ ಪ್ರತಿಭೆಯಿಂದಲೇ ವಿಶ್ವಾದ್ಯಂತ ಗುರುತಿಸಲ್ಪಟ್ಟಿರುವ ವರುಣ್, ತಮ್ಮ ಯಶಸ್ಸಿನ ಹಿಂದೆ ಒಂದು ಸುಂದರವಾದ ಪ್ರೇಮಕಥೆ ಇದೆ ಎಂಬುದನ್ನು ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಪತ್ನಿ 'ನೇಹಾ ಖೇಡೇಕರ್' ನೀಡಿದ ಪ್ರೋತ್ಸಾಹ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು ಎಂದಿದ್ದಾರೆ. 
ವರುಣ್ ಚಕ್ರವರ್ತಿ ಅವರು ಕರ್ನಾಟಕದ ಬೀದರ್ ಮೂಲದವರು. ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಆರ್ಕಿಟೆಕ್ಚರ್​​ ಅಧ್ಯಯನ ಮಾಡುತ್ತಿದ್ದಾಗ ನೇಹಾ ಖೇಡೇಕರ್ ಅವರನ್ನು ಭೇಟಿಯಾದರು. ಆರಂಭದ ಸ್ನೇಹ, ಕ್ರಮೇಣ ಪ್ರೀತಿಯಾಗಿ ಬದಲಾಯಿತು. ಇಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿದರು. ಅಧ್ಯಯನ ಮುಗಿದ ನಂತರ, ವರುಣ್‌ಗೆ ಆರ್ಕಿಟೆಕ್ಚರ್​​ ಆಗಿ ಕೆಲಸ ಸಿಕ್ಕಿತು. ಆದರೆ, ಅವರ ಮನಸ್ಸು ಕ್ರಿಕೆಟ್‌ ಮೇಲಿತ್ತು. 
ಭಾರತೀಯ ತಂಡಕ್ಕಾಗಿ ಆಡುವ ತಮ್ಮ ಕನಸನ್ನು ಮುಂದುವರಿಸಲು ತಮ್ಮ ಕೆಲಸವನ್ನು ತ್ಯಜಿಸಲು ವರುಣ್​ ಬಯಸಿದರು. ತಮ್ಮ ಆ ಪರಿಸ್ಥಿತಿಯನ್ನು ನೇಹಾಗೆ ವಿವರಿಸಿದರು. ನನಗೆ ಕೆಲಸವಿಲ್ಲ, ಭವಿಷ್ಯ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ, ನನ್ನನ್ನು ನಂಬಬೇಡಿ ಎಂದು ವರುಣ್​, ನೇಹಾಗೆ ಹೇಳಿದರು. ಆ ಸಮಯದಲ್ಲಿ, ಅವರ ಪತ್ನಿ ನೇಹಾ ನೀಡಿದ ಉತ್ತರ ವರುಣ್​ ಅವರ ಜೀವನವನ್ನೇ ಬದಲಾಯಿಸಿತು.
ಅಷ್ಟಕ್ಕೂ ನೇಹಾ ಅವರು ಹೇಳಿದ್ದೇನೆಂದರೆ, ನೀವು ಕ್ರಿಕೆಟ್​ನಿಂದ 5 ರಿಂದ 6 ಸಾವಿರ ಸಂಪಾದನೆ ಮಾಡಿ, ನಾನು ತಿಂಗಳಿಗೆ 15 ಸಾವಿರ ಸಂಪಾದಿಸುತ್ತೇನೆ. ಆ ಹಣದಿಂದಲೇ ನಾವು ಮ್ಯಾನೇಜ್​ ಮಾಡಬಹುದು ಎಂದರು. ಪತ್ನಿಯ ಈ ಮಾತು ಕೇಳಿದ ವರುಣ್​ಗೆ ಹೊಸ ಆತ್ಮವಿಶ್ವಾಸ ಬಂದಿತು. ಅದೇ ಆತ್ಮವಿಶ್ವಾಸ ಅವರನ್ನು ಕ್ರಿಕೆಟ್‌ನಲ್ಲಿ ಮುಂದೆ ಕೊಂಡೊಯ್ದಿತು. ಅಂದು ಪತ್ನಿ ನೀಡಿದ ಪ್ರೋತ್ಸಾಹದಿಂದ, ವರುಣ್ ತಮ್ಮ ಸಂಪೂರ್ಣ ಗಮನವನ್ನು ಕ್ರಿಕೆಟ್‌ನತ್ತ ತಿರುಗಿಸಿದರು.
ಕ್ರಿಕೆಟ್​ನಲ್ಲಿ ಸಂಪೂರ್ಣ ತೊಡಗಿಸಿಕೊಂಡ ವರುಣ್​, 2018 ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ (TPL) ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮನ್ನಣೆ ಗಳಿಸಿದರು. ಇದಾದ ನಂತರ, IPL ನಲ್ಲಿ  ಅವಕಾಶಗಳನ್ನು ಪಡೆದರು. ಕೋಲ್ಕತ ತಂಡ ವರುಣ್​ ಅವರನ್ನು ಖರೀದಿ ಮಾಡಿತು. ತಮ್ಮ ನಿಗೂಢ ಸ್ಪಿನ್ ಮೂಲಕ ವಿಕೆಟ್​ಗಳನ್ನು ಕಬಳಿಸಿದರು. ನಂತರ ಟೀಮ್​ ಇಂಡಿಯಾಗೂ ಲಗ್ಗೆ ಇಟ್ಟರು.
ನೇಹಾ ಅವರ ನಂಬಿಕೆ ಮತ್ತು ಪ್ರೋತ್ಸಾಹವಿಲ್ಲದೆ ನಾನು ಈ ಮಟ್ಟವನ್ನು ತಲುಪುವುದು ಕಷ್ಟಕರವಾಗಿತ್ತು ಎಂದು ಸ್ವತಃ ವರುಣ್ ಅವರೇ ಹಲವು ಬಾರಿ ಹೇಳಿದ್ದಾರೆ. ವರುಣ್ ಮತ್ತು ನೇಹಾ 2020, ಡಿಸೆಂಬರ್ 12ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅವರಿಗೆ 2022, ನವೆಂಬರ್ 10 ರಂದು 'ಆತ್ಮನ್' ಎಂಬ ಮಗ ಜನಿಸಿದನು. ಪ್ರಸ್ತುತ ವರುಣ್​ ಸಂತೋಷದ ಜೀವನ ನಡೆಸುತ್ತಿದ್ದಾರೆ, (ಏಜೆನ್ಸೀಸ್​).