ಕಿವೀಸ್ ಆಟಗಾರರನ್ನು ಅವಮಾನಿಸಿದ ಕೊಡಗಿನ ಕುವರಿ ವರ್ಷಾ ಬೊಲ್ಲಮ್ಮ
- ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ
- ಬುಧವಾರ ವೈಜಾಗ್ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು
- ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಭಾರತ ನಾಲ್ಕನೇ ಪಂದ್ಯದಲ್ಲಿ ಮುಗ್ಗರಿತು
- ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ ಟಾಲಿವುಡ್ ನಾಯಕಿ ವರ್ಷಾ ಬೊಲ್ಲಮ್ಮ
Varsha Bollamma : ಆತಿಥೇಯ ಟೀಮ್ ಇಂಡಿಯಾ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ನಿನ್ನೆ (ಜ.28) ವೈಜಾಗ್ನಲ್ಲಿ ನಡೆಯಿತು. ಸತತ ಮೂರು ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ, ನಾಲ್ಕನೇ ಪಂದ್ಯವನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂಡಿತು. ಉತ್ತಮ ಫಾರ್ಮ್ನಲ್ಲಿದ್ದ ಇಶಾನ್ ಕಿಶನ್ರನ್ನು ಆಡಿಸಲಿಲ್ಲ. ಅಲ್ಲದೆ, ಭಾರತದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ಇದರಿಂದಾಗಿ, ಟೀಮ್ ಇಂಡಿಯಾ ಈ ಪಂದ್ಯವನ್ನು 50 ರನ್‌ಗಳಿಂದ ಸೋತಿತು.
ಈ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದ ಸಮಯದಲ್ಲೇ, ಟಾಲಿವುಡ್ ನಾಯಕಿ ವರ್ಷಾ ಬೊಲ್ಲಮ್ಮ ಅವರು ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗರೆಲ್ಲರೂ ಮೂರ್ಖರು ಎನ್ನುವ ಮೂಲಕ ಆಸಕ್ತಿದಾಯಕ ಪೋಸ್ಟ್ ಒಂದನ್ನು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವರ್ಷ ಬೊಲ್ಲಮ್ಮ ಮಾಡಿದ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವರ್ಷಾ ಅವರು ಕರ್ನಾಟಕದ ಕೊಡಗಿನ ಕುವರಿಯಾದರೂ ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ವಿಜಯ್ ನಟನೆಯ ಬಿಗಿಲ್, ವಿಜಯ್ ಸೇತುಪತಿ ಅಭಿನಯದ 96 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಮನೆ ನಂಬರ್ 13 ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ 2020ರಲ್ಲಿ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಯಿತು. ಆದರೆ, ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ವರ್ಷಾ ಬಿಜಿಯಾಗಿದ್ದಾರೆ.
ನಟಿ ವರ್ಷಾ ಅವರಿಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ಟೀಮ್ ಇಂಡಿಯಾದ ಆಟವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಐಪಿಎಲ್ ಅಂತಾ ಬಂದಾಗ ಅವರೊಬ್ಬ ಆರ್ಸಿಬಿ ಅಭಿಮಾನಿ. ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದ ಕುರಿತು ಒಂದು ಕುತೂಹಲಕಾರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗರನ್ನು ಸೋಧಿ ಹುಡುಗರು ಎಂದು ಕರೆದಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ಸೋಧಿ ( ಇಶ್ ಸೋಧಿ) ಎಂಬ ಬೌಲರ್ ಇದ್ದಾರೆ. ಅವರ ಹೆಸರು ಸ್ಕೋರ್‌ಬೋರ್ಡ್‌ನಲ್ಲಿ ಬಂದಾಗ, ವರ್ಷಾ ಬೊಲ್ಲಮ್ಮ ಅವರನ್ನು "ಸೋಧಿ ಎಂದರೇನು, ಅವರೆಲ್ಲರೂ ಸೋಧಿ ಹುಡುಗರು ಎಂದು ಟ್ರೋಲ್ ಮಾಡಿದರು. ಅಂದಹಾಗೆ, ಸೋಧಿ ಅಂದರೆ, ತೆಲುಗಿನಲ್ಲಿ ಮೂರ್ಖರು ಎನ್ನುವ ಅರ್ಥ ಬರುತ್ತದೆ. ಸದ್ಯ ಈ ಪೋಸ್ಟ್ ಈಗ ವೈರಲ್ ಆಗಿದೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 215 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ (44) ಮತ್ತು ಟಿಮ್ ಸೀಫರ್ಟ್ (62) ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿ, ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಕೇವಲ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ನ್ಯೂಜಿಲೆಂಡ್ ತಂಡವು 50 ರನ್‌ಗಳಿಂದ ಗೆದ್ದು ಬೀಗಿತು, (ಏಜೆನ್ಸೀಸ್).