ಮತ್ತೊಮ್ಮೆ ಗರ್ಜಿಸಿದ ವೈಭವ್: 49 ಎಸೆತಗಳಲ್ಲಿ 81 ರನ್​ ಗಳಿಸಿ ಹೊಸ ಇತಿಹಾಸ ಬರೆದ ವಂಡರ್​ ಕಿಡ್​! Vaibhav Suryavanshi  
ಕ್ರಿಕೆಟ್

ಮತ್ತೊಮ್ಮೆ ಗರ್ಜಿಸಿದ ವೈಭವ್: 49 ಎಸೆತಗಳಲ್ಲಿ 81 ರನ್​ ಗಳಿಸಿ ಹೊಸ ಇತಿಹಾಸ ಬರೆದ ವಂಡರ್​ ಕಿಡ್​! Vaibhav Suryavanshi

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್
  • 49 ಎಸೆತಗಳಲ್ಲಿ 81 ರನ್ ಸಿಡಿಸಿ ಹೊಸ ವಿಶ್ವ ದಾಖಲೆ ಬರೆದ 15 ವರ್ಷದ ವೈಭವ್ ಸೂರ್ಯವಂಶಿ
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೇಪಾಳದ ಕುಶಾಲ್ ಮಲ್ಲಾ ದಾಖಲೆ ಮುರಿದ ಭಾರತದ ವೈಭವ್ ಸೂರ್ಯವಂಶಿ
  • ಜಿಂಬಾಬ್ವೆ ಬೌಲರ್‌ಗಳ ಧೂಳೀಪಟ ಮಾಡಿ ಒಂದೇ ಸರಣಿಯಲ್ಲಿ ಎರಡೆರಡು ಅರ್ಧಶತಕ ಸಿಡಿಸಿದ ವೈಭವ್
Vaibhav Suryavanshi : ಹರಾರೆ ಸ್ಪೋರ್ಟ್ಸ್ ಕ್ಲಬ್‌ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಸೆನ್ಸೇಷನ್​ ವೈಭವ್​ ಸೂರ್ಯವಂಶಿ ಅವರು ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್​ಗಳ ನೆರವಿನಿಂದ 81 ರನ್​ ಕಲೆಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಟೀಮ್​ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರೂ, ಕ್ರೀಸ್‌ನಲ್ಲಿ ಬ್ಯಾಟಿಂಗ್​ ಬಿರುಗಾಳಿ ಸೃಷ್ಟಿ ಮಾಡಿದ ವೈಭವ್ ಸೂರ್ಯವಂಶಿ ಎದುರಾಳಿ ಬೌಲರ್‌ಗಳ ಮೇಲೆ ಮನಬಂದಂತೆ ಸವಾರಿ ಮಾಡುತ್ತಾ ರನ್​ಗಳ ಸುರಿಮಳೆಯನ್ನೇ ಸುರಿಸಿದರು.
ಮೈದಾನದ ನಾನಾ ಮೂಲೆಗಳಿಗೆ ಭರ್ಜರಿ ಬೌಂಡರಿಗಳ ಸುರಿಮಳೆ ಗೈದ ವೈಭವ್ ಸೂರ್ಯವಂಶಿ, ಕೇವಲ 31 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕವೂ ತಮ್ಮ ಸ್ಫೋಟಕ ಆಟ ಮುಂದುವರಿಸಿದ ಅವರು, ಬರೋಬ್ಬರಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 49 ಎಸೆತಗಳಲ್ಲಿ 81 ರನ್‌ ಸಿಡಿಸಿ ರಂಜಿಸಿದರು. ಅಂತಿಮವಾಗಿ ಬೌಂಡರಿ ಲೈನ್ ಬಳಿ ಬ್ರ್ಯಾಡ್ ಇವಾನ್ಸ್ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾಗುವ ಮೂಲಕ ವೈಭವ್ ಅವರ ಮನಮೋಹಕ ಇನಿಂಗ್ಸ್‌ಗೆ ತೆರೆಬಿದ್ದಿತು.
ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಸಿದ ಎರಡನೇ ಅರ್ಧಶತಕ ಇದಾಗಿದ್ದು, ಸರಣಿಯ ಚೊಚ್ಚಲ ಪಂದ್ಯದಲ್ಲೇ ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಮಿಂಚಿನ ಅರ್ಧಶತಕ ಬಾರಿಸಿದ್ದರು. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗದಿದ್ದರೂ, ಈ 15 ವರ್ಷದ ಯುವ ಬ್ಯಾಟರ್ ಕೇವಲ 9 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 20 ರನ್‌ಗಳ ಚುರುಕಿನ ಕಾಣಿಕೆ ನೀಡಿದ್ದರು.
ಇದೀಗ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಸಿಡಿಸಿದ ಈ ಅರ್ಧಶತಕದೊಂದಿಗೆ ವೈಭವ್ ಸೂರ್ಯವಂಶಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಕಳೆದ 16 ವರ್ಷಗಳ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ (50+) ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವೈಭವ್​ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಈ ಹಿಂದೆ ಕೇವಲ ಒಂದು ಬಾರಿ ಈ ಸಾಧನೆ ಮಾಡಿದ್ದ ನೇಪಾಳದ ಕುಶಾಲ್ ಮಲ್ಲಾ ಅವರ ದಾಖಲೆಯನ್ನು ವೈಭವ್ ಹಿಂದಿಕ್ಕಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾರತದ ಇನ್ನಿಂಗ್ಸ್​ ಮುಕ್ತಾಯಗೊಂಡಿದ್ದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 192 ರನ್​ ಕಲೆಹಾಕಿ, ಜಿಂಬಾಬ್ವೆ ತಂಡಕ್ಕೆ ಬೃಹತ್​ ಗುರಿ ನೀಡಿದೆ, (ಏಜೆನ್ಸೀಸ್​).