ಟೀಮ್ ಇಂಡಿಯಾ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 
ಕ್ರಿಕೆಟ್

ಇನ್ನೂ 18 ವರ್ಷ ದಾಟಿಲ್ಲ... ತನ್ನ ನೆಚ್ಚಿನ ಸಿನಿಮಾ ಹೆಸರೇಳಿ ಸಂಕಷ್ಟಕ್ಕೆ ಸಿಲುಕಿದ 'ಬೇಬಿ ಬಾಸ್' | Vaibhav Suryavanshi'​!

ಪ್ರಮುಖ ಮುಖ್ಯಾಂಶಗಳು

  • ಬಿಸಿಸಿಐ ಆಯೋಜಿಸಿದ್ದ 'ನಮನ್ ಪ್ರಶಸ್ತಿ' ಪ್ರದಾನ ಸಮಾರಂಭ
  • ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಮತ್ತು ಅಭಿಷೇಕ್ ಶರ್ಮಾ ಜತೆ ವೇದಿಕೆ ಹಂಚಿಕೊಂಡ ವೈಭವ್​ ಸೂರ್ಯವಂಶಿ
  • ತಮ್ಮ ನೆಚ್ಚಿನ ಹೆಸರೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ರಾ ಬೇಬಿ ಬಾಸ್​
Vaibhav Suryavanshi: ಮಾರ್ಚ್ 15ರಂದು ನವದೆಹಲಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿದ್ದ 'ನಮನ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರ ಜೊತೆ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಭಾಗಿಯಾಗಿದ್ದು ಹಲವರ ಹುಬ್ಬೇರಿಸಿತು. ಆಟಗಾರರಾದ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ವೇದಿಕೆ ಹಂಚಿಕೊಂಡ 14 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಭವಿಷ್ಯದ ಗುರಿಯೊಟ್ಟಿಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತನಾಡಿದರು.
ತಮ್ಮ ಮುಂಬರುವ ಐಪಿಎಲ್‌ ಆವೃತ್ತಿಯಲ್ಲಿ ನೀವು ಮುರಿಯಲು ಬಯಸುವ ಅತಿದೊಡ್ಡ ದಾಖಲೆ ಯಾವುದು? ಎಂಬ ಹರ್ಷ ಭೋಗ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಿಂಚಿತ್ತು ಹಿಂಜರಿಕೆ ಇಲ್ಲದೇ, ವೆಸ್ಟ್​ ಇಂಡೀಸ್​ ದೈತ್ಯ ಆಟಗಾರರಾದ ಕ್ರಿಸ್ ಗೇಲ್ ಮಾಡಿರುವ ಅಜೇಯ 175 ರನ್ ದಾಖಲೆಯನ್ನು ಮುರಿಯುವುದೇ ನನ್ನ ಗುರಿ ಎಂದರು. ಈ ಮೂಲಕ ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ವೈಭವ್​ ಅವರ ಮಾತು ಕೇಳಿ ಸಂಜು, ಹಾರ್ದಿಕ್​ ಹಾಗೂ ಅಭಿಷೇಕ್​ ಕೂಡ ಒಂದು ಕ್ಷಣ ದಂಗಾದರು. ಅದರ ಬೆನ್ನಲ್ಲೇ ಹೊರಗಡೆ ಆಡಿದ ಮಾತೊಂದು ಕೂಡ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಹುಬ್ಬೇರಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಹೊರಗಡೆ ಬಂದ ಸೂರ್ಯವಂಶಿಗೆ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಕೇಳಲಾಯಿತು. ಈ ಪ್ರಶ್ನೆಗೆ ಬಹಳ ಜೋಶ್​ನಿಂದಲೇ ಉತ್ತರಿಸಿದ ವೈಭವ್​, ಕಳೆದ ವರ್ಷದ ಡಿಸೆಂಬರ್​ನಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿರುವ 'ಧುರಂಧರ್'​ ಸಿನಿಮಾ ಎಂದರು. ಬೇಬಿ ಬಾಸ್​ ಉತ್ತರ ಕೇಳಿ ಅಚ್ಚರಿಗೆ ಒಳಗಾಗಿರುವ ನೆಟ್ಟಿಗರು, ಈತನಿಗೆ ಕೇವಲ 14 ವರ್ಷ. ಆದರೆ, ಚಿತ್ರವು 18+ 'ಎ' ಪ್ರಮಾಣಪತ್ರವನ್ನು ಹೊಂದಿದೆ. ಹೀಗಿರುವಾಗ, ಇದು ಅಕ್ಷಮ್ಯ ಅಲ್ಲವೇ? ಎಂದು ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.
ಮತ್ತೊಂದೆಡೆ, ಈ ಹಿಂದೆ ಚಿತ್ರತಂಡಕ್ಕೆ ಸೆನ್ಸಾರ್​ ಮಂಡಳಿ 'ಎ' ಸರ್ಟಿಫಿಕೆಟ್​ ನೀಡಿದ್ದು, ವಯಸ್ಸಿನ ಆಧಾರವನ್ನು ಗಮನದಲ್ಲಿಟ್ಟುಕೊಂಡೇ ಪ್ರಮಾಣಪತ್ರ ಹಸ್ತಾಂತರಿಸುತ್ತದೆ. ಇದನ್ನು ಯೋಚಿಸದ ವೈಭವ್​, ಬಹಿರಂಗವಾಗಿ ಧುರಂಧರ್​ ಚಿತ್ರದ ಹೆಸರೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅನೇಕರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ವೈಭವ್ ಪರ ಬ್ಯಾಟ್​ ಬೀಸಿದ್ದಾರೆ. ಅಷ್ಟಕ್ಕೂ, ಇದು ಯಾವ ರೀತಿ ಯುವ ಆಟಗಾರನಿಗೆ ತೊಂದರೆ ಆಗುತ್ತೆ? ಎಂಬುದು ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).