ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ
- ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 6 ವಿಕೆಟ್ಗಳ ಗೆಲುವು
- ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿನಾಶಕಾರಿ ಬ್ಯಾಟಿಂಗ್
- 15 ವರ್ಷದ ಬಾಲಕನ ಬ್ಯಾಟಿಂಗ್‌ಗೆ ಕಿಂಗ್ ಕೊಹ್ಲಿಯೇ ಫಿದಾ
Vaibhav Suryavanshi: ನಿನ್ನೆ (ಏ.10) ಅಸ್ಸಾಂನ ಗುವಾಹಟಿಯಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ 19ನೇ ಪಂದ್ಯದಲ್ಲಿ ಆರ್ಆರ್ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಮ್ಯಾಚ್ನಲ್ಲಿ ಎಲ್ಲರ ಗಮನ ಸೆಳೆದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಬೆಂಗಳೂರು ಪಡೆಯ ಎಲ್ಲ ಬೌಲರ್ಗಳನ್ನು ಚೆಂಡಾಡಿದ ದೃಶ್ಯ ಮಾತ್ರ ನೋಡುಗರನ್ನು ರೋಮಾಂಚಕಗೊಳಿಸಿತು ಎಂಬುದರಲ್ಲಿ ಸಂಶಯವಿಲ್ಲ. ವೈಭವದ ಆಟ ತೋರಿದ ಸೂರ್ಯವಂಶಿಗೆ ಇದೀಗ ವಿರಾಟ್ ಕೊಹ್ಲಿ ಅವರಿಂದಲೇ ಮೆಚ್ಚುಗೆ ಸಿಕ್ಕಿರುವುದು ಸದ್ಯ ಹಲವರ ಖುಷಿಗೆ ಕಾರಣವಾಗಿದೆ.
ಆರ್‌ಸಿಬಿ ತಂಡದ ಬೌಲರ್‌ಗಳ ನಿದ್ದೆಗೆಡಿಸಿರುವ ವೈಭವ್, ಜೋಶ್ ಹೇಜಲ್ವುಡ್, ಅಭಿನಂದನ್, ಕೃನಾಲ್ ಸೇರಿದಂತೆ ಎಲ್ಲ ಬೌಲರ್ಗಳಿಗೂ ಸಿಕ್ಸರ್ಗಳನ್ನು ಬಾರಿಸಿದರು. ಅವರ ವಿಧ್ವಂಸಕ ಇನ್ನಿಂಗ್ಸ್ ನೋಡಿದ ಇತರೆ ಆಟಗಾರರು ಕೆಲವು ನಿಮಿಷಗಳ ಕಾಲ ಮೌನಕ್ಕೆ ಜಾರಿದ್ದಂತು ಸತ್ಯ. ಕೇವಲ 25 ಎಸೆತದಲ್ಲಿ 78 ರನ್ ಸಿಡಿಸಿದ ವೈಭವ್, ಇನ್ನೂ ಐದಾರು ಬಾಲ್ ಆಡಿದ್ದಿದ್ರೆ, ಖಂಡಿತ ಸ್ಫೋಟಕ ಶತಕ ಬಾರಿಸುತ್ತಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಅಂತಾರಾಷ್ಟ್ರೀಯ ಬೌಲರ್ಗಳನ್ನೇ ಹಿಮ್ಮೆಟ್ಟಿಸಿದ ಸೂರ್ಯವಂಶಿ ಆಟಕ್ಕೆ ಸ್ವತಃ ಆರ್‌ಸಿಬಿ ಸ್ಟಾರ್ ಹಾಗೂ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೇ ಫಿದಾ ಆಗಿದ್ದಾರೆ.
ಆರ್‌ಸಿಬಿ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸುತ್ತಿದ್ದಂತೆ, ವೈಭವ್ ವಿರಾಟ್ ಕೊಹ್ಲಿಯನ್ನು ಭೇಟಿಯಾದರು. ಎಲ್ಲರನ್ನು ಮಾತನಾಡಿಸಿದ ಕಿಂಗ್, ವಿಶೇಷವಾಗಿ ವೈಭವ್ ಆಟವನ್ನು ಕೊಂಡಾಡಿದರು. ಇದೇ ಸಂದರ್ಭದಲ್ಲಿ, ಡಿಯರ್ ವೈಭವ್, ವೆಲ್ ಡನ್ ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಟೋಪಿ ಮೇಲೆ ಬರೆದು, ವಿರಾಟ್ ತಮ್ಮ ಹಸ್ತಾಕ್ಷರ ಹಾಕಿಕೊಟ್ಟಿದ್ದು ವಿಶೇಷ. ಇದನ್ನು ಬಹಳ ಇಷ್ಟಪಟ್ಟು ತನ್ನೊಂದಿಗೆ ಇರಿಸಿಕೊಂಡ ಸೂರ್ಯವಂಶಿ, ಅದರ ಫೋಟೋವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 78 ರನ್ ಗಳಿಸಿದ ಬೇಬಿ ಬಾಸ್, ಈ ಮೂಲಕ ಐಪಿಎಲ್ 19ನೇ ಆವೃತ್ತಿಯಲ್ಲಿ ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವುದು ಗಮನಾರ್ಹ.
ಪಂದ್ಯದ ವಿವರ
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಆರ್, ರಜತ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಆರ್‌ಸಿಬಿ 201 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಆರಂಭಿಕರಾದ ಸೂರ್ಯವಂಶಿ ಮತ್ತು ಜೈಸ್ವಾಲ್ರಿಂದ ಯಶಸ್ವಿ ಓಪನಿಂಗ್ ಲಭಿಸಿತು. ಇವರಿಬ್ಬರೇ ಮೊದಲ ಮೂರು ಓವರ್ಗೆ 45 ರನ್ಗಳನ್ನು ಬಾರಿಸಿದರು. ಜೈಸ್ವಾಲ್ ಬಹುಬೇಗನೇ ಪೆವಿಲಿಯನ್ಗೆ ಮರಳಿದರೆ, ವೈಭವ್ ಮಾತ್ರ ಆರ್‌ಸಿಬಿ ಬೌಲರ್ಗಳಿಗೆ ಸರಿಯಾಗಿ ನೀರು ಕುಡಿಸಿ, 78 ರನ್ಗಳ ಭರ್ಜರಿ ಇನ್ನಿಂಗ್ಸ್ ನೀಡಿದರು.
ಇನ್ನು ವೈಭವ್ಗೆ ಉತ್ತಮ ಸಾಥ್ ನೀಡಿದ್ದು ಧ್ರುವ್ ಜ್ಯುರೆಲ್. ಇವರೂ ಕೂಡ ಆರ್‌ಸಿಬಿ ಬೌಲರ್ಗಳಿಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಬೆವರಿಳಿಸಿದರು. ಆಡಿದ 43 ಎಸೆತಗಳಲ್ಲಿ ಅಜೇಯ 81 ರನ್ ಸಿಡಿಸುವ ಮೂಲಕ ಕೊನೆಯ ಓವರ್ವರೆಗೂ ಹೋರಾಡಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಗೆಲುವಿನ ಮೂಲಕ ಆರ್ಆರ್ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.