ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಯುವ ಆಟಗಾರ ವೈಭವ್ ಸೂರ್ಯವಂಶಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಅವರ 14 ವರ್ಷಗಳ ಹಳೆಯ ಬೃಹತ್ ದಾಖಲೆಯನ್ನು ಮುರಿಯುವ ಮೂಲಕ ವೈಭವ್ ಇಡೀ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ನ್ಯೂ ಚಂಡೀಗಢದಲ್ಲಿ ಬುಧವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಹೈವೋಲ್ಟೇಜ್ 'ಎಲಿಮಿನೇಟರ್' ಪಂದ್ಯದಲ್ಲಿ ಈ ಐತಿಹಾಸಿಕ ಕ್ಷಣ ಮೂಡಿಬಂದಿದೆ. ಈ ಹಿಂದೆ 2012ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದ ಕ್ರಿಸ್ ಗೇಲ್ ಬರೋಬ್ಬರಿ 59 ಸಿಕ್ಸರ್ ಚಚ್ಚಿ ದಾಖಲೆ ಬರೆದಿದ್ದರು. ಆದರೆ, ಬುಧವಾರದ ಪಂದ್ಯದಲ್ಲಿ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ ಭರ್ಜರಿ ಸಿಕ್ಸರ್ ಎತ್ತುವ ಮೂಲಕ ಗೇಲ್ ಅವರ 59 ಸಿಕ್ಸರ್‌ಗಳ ದಾಖಲೆಯನ್ನು ದಾಟಿ ಮುನ್ನಡೆದರು.
ಕಮಿನ್ಸ್, ಮಾಲಿಂಗ ಓವರ್‌ನಲ್ಲೇ ಸಿಕ್ಸರ್ ಅಬ್ಬರ!
ಪಂದ್ಯದ ಆರಂಭದಿಂದಲೇ ಹೈದರಾಬಾದ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವೈಭವ್, ಮೊದಲ ಎರಡು ಓವರ್‌ಗಳಲ್ಲೇ ಪ್ಯಾಟ್ ಕಮಿನ್ಸ್ ಮತ್ತು ಈಶಾನ್ ಮಾಲಿಂಗ ಬೌಲಿಂಗ್‌ನಲ್ಲಿ ತಲಾ ಒಂದೊಂದು ಸಿಕ್ಸರ್ ಸಿಡಿಸಿ ರನ್ ಮಳೆ ಹರಿಸುವ ಮುನ್ಸೂಚನೆ ನೀಡಿದರು. ಸನ್‌ರೈಸರ್ಸ್ ಬೌಲರ್‌ಗಳು ವೈಭವ್ ಅವರ ಸಿಕ್ಸರ್ ತಡೆಯಲು ಸತತವಾಗಿ ಯಾರ್ಕರ್ ಎಸೆಯುವ ತಂತ್ರ ಹೂಡಿದ್ದರು. ಆದರೆ, ಈ ಚಾಣಾಕ್ಷ ಬ್ಯಾಟರ್ ಕ್ರೀಸ್ ಬಳಸಿ ಅತ್ಯಂತ ಸುಲಭವಾಗಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು.
ಕೇವಲ ಮೊದಲ 4 ಓವರ್‌ಗಳಲ್ಲೇ ಬರೋಬ್ಬರಿ 8 ಗಗನಚುಂಬಿ ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ, ಮಾತ್ರ ಕೇವಲ 16 ಎಸೆತಗಳಲ್ಲಿ ಭರ್ಜರಿ ಅರ್ಧಶತಕ (Half-Century) ಪೂರೈಸಿ ಜಾಗತಿಕ ಕ್ರಿಕೆಟ್‌ಗೆ ತಮ್ಮ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, 29 ಎಸೆತಗಳಲ್ಲಿ ಬರೋಬ್ಬರಿ 97 ರನ್ ಬಾರಿಸಿದ ಅವರು ಗೇಲ್ ಹೆಸರಲದ್ದ 30 ಎಸೆತಕ್ಕೆ 100 ರನ್ ರೆಕಾರ್ಡ್ ಮುರಿಯಲು ಸಾಧ್ಯವಾಗದೇ ಔಟಾದರು,(ಏಜೆನ್ಸೀಸ್)