ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ
- ಅಬ್ಬರದ ಆಟದಿಂದಲೇ ಹೆಸರುವಾಸಿಯಾಗಿರುವ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ
- ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ ವೈಭವ್
- 80 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 15 ಬೌಂಡರಿ ನೆರವಿನಿಂದ 175 ರನ್ ಕಲೆಹಾಕಿದ ಯುವ ಕ್ರಿಕೆಟಿಗ
Vaibhav Sooryavanshi : ತನ್ನ ಅಬ್ಬರದ ಆಟದಿಂದಲೇ ಹೆಸರುವಾಸಿಯಾಗಿರುವ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದಾರೆ. ಶುಕ್ರವಾರ (ಫೆ.06) ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ, ಸೂರ್ಯವಂಶಿ ಅವರು ರಾಲ್ಫಿ ಆಲ್ಬರ್ಟ್ ಬೌಲಿಂಗ್‌ನಲ್ಲಿ ಸಿಂಗಲ್ ಗಳಿಸುವ ಮೂಲಕ ಕೇವಲ 55 ಎಸೆತಗಳಲ್ಲಿ ಶತಕ ಗಳಿಸಿದರು. ಈ ಮೂಲಕ, ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಈ ದಾಖಲೆಯನ್ನು ರಾಜ್ ಬಾವಾ ಹೊಂದಿದ್ದರು. 2022ರಲ್ಲಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ರಾಜ್ 69 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಸೂರ್ಯವಂಶಿ ಅವರು ಅಬ್ಬರದ ಆಟ ಕೇವಲ ಶತಕಕ್ಕೆ ಸೀಮಿತವಾಗಲಿಲ್ಲ. ಬಿರುಗಾಳಿಯ ಇನ್ನಿಂಗ್ಸ್ ಆಡಿದ ಸೂರ್ಯವಂಶಿ, ಕೇವಲ 80 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 15 ಬೌಂಡರಿ ನೆರವಿನಿಂದ 175 ರನ್ ಕಲೆಹಾಕಿದರು. ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಯ ಜತೆಗೆ ವಿಶ್ವದಲ್ಲಿ ಎರಡನೇ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ವಿಲ್ ಮಲಾಕ್ಜುಕ್ ಅಗ್ರಸ್ಥಾನದಲ್ಲಿದ್ದಾರೆ. ಜಪಾನ್ ವಿರುದ್ಧ ಆಸ್ಟ್ರೇಲಿಯಾದ ಆಟಗಾರ ವಿಲ್ ಕೇವಲ 51 ಎಸೆತಗಳಲ್ಲಿ ಶತಕ ಗಳಿಸಿದರು.
ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಅಂಡರ್ 19 ತಂಡದ ಆಟಗಾರರು
* ವಿಲ್ ಮಲಾಕ್ಜುಕ್ (ಆಸ್ಟ್ರೇಲಿಯಾ) - 2026 ರಲ್ಲಿ ಜಪಾನ್ ವಿರುದ್ಧ 51 ಎಸೆತಗಳಲ್ಲಿ ಶತಕ
* ವೈಭವ್ ಸೂರ್ಯವಂಶಿ (ಭಾರತ) - 2026 ರಲ್ಲಿ ಇಂಗ್ಲೆಂಡ್ ವಿರುದ್ಧ 55 ಎಸೆತಗಳಲ್ಲಿ ಶತಕ
* ಖಾಸಿಮ್ ಅಕ್ರಮ್ (ಪಾಕಿಸ್ತಾನ) - 2022 ರಲ್ಲಿ ಶ್ರೀಲಂಕಾ ವಿರುದ್ಧ 63 ಎಸೆತಗಳಲ್ಲಿ ಶತಕ
* ಬೆನ್ ಮೇಯಸ್ (ಇಂಗ್ಲೆಂಡ್) - 2026 ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 65 ಎಸೆತಗಳಲ್ಲಿ ಶತಕ
* ರಾಜ್ ಬಾವಾ (ಭಾರತ) - 2022 ರಲ್ಲಿ ಉಗಾಂಡಾ ವಿರುದ್ಧ 69 ಎಸೆತಗಳಲ್ಲಿ ಶತಕ
ಈ ಪಂದ್ಯದಲ್ಲಿ ವೈಭವ್ ಅವರು ಫರ್ಹಾನ್ ಅಹ್ಮದ್ ಎಸೆದ ಇನ್ನಿಂಗ್ಸ್‌ನ 15ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ, ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಮುರಿದರು. ಇದಕ್ಕೂ ಮೊದಲು, ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ ಹೊಂದಿದ್ದರು. ಬ್ರೆವಿಸ್ ಅವರು 2022ರ ಅಂಡರ್-19 ವಿಶ್ವಕಪ್‌ನಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ವೈಭವ್ ಒಟ್ಟು 80 ಎಸೆತಗಳನ್ನು ಎದುರಿಸಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳ ಸಹಾಯದಿಂದ 175 ರನ್ ಗಳಿಸಿದರು.
* ವೈಭವ್ ಸೂರ್ಯವಂಶಿ - 2026 ರಲ್ಲಿ 30 ಸಿಕ್ಸರ್‌ಗಳು
* ಡೆವಾಲ್ಡ್ ಬ್ರೆವಿಸ್ - 2022 ರಲ್ಲಿ 18 ಸಿಕ್ಸರ್‌ಗಳು
* ಫಿಲ್ ಅಲೆನ್ - 2016 ರಲ್ಲಿ 18 ಸಿಕ್ಸರ್‌ಗಳು
* ಜ್ಯಾಕ್ ಬರ್ನ್‌ಹ್ಯಾಮ್ - 2016 ರಲ್ಲಿ 15 ಸಿಕ್ಸರ್‌ಗಳು
* ಮೈಕೆಲ್ ಹಿಲ್ - 2008 ರಲ್ಲಿ 14 ಸಿಕ್ಸರ್‌ಗಳು
* ನಿಕೋಲಸ್ ಪೂರನ್ - 2014 ರಲ್ಲಿ 14 ಸಿಕ್ಸರ್‌ಗಳು
ಅಂಡರ್-19 ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯೂ ವೈಭವ್ ಅವರ ಹೆಸರಿನಲ್ಲಿದೆ. ಈ ಪಂದ್ಯದಲ್ಲಿ ಅವರು 15 ಸಿಕ್ಸರ್‌ಗಳನ್ನು ಬಾರಿಸಿದರು.
* ವೈಭವ್ ಸೂರ್ಯವಂಶಿ (ಭಾರತ) - 2026 ರಲ್ಲಿ ಇಂಗ್ಲೆಂಡ್ ವಿರುದ್ಧ 15 ಸಿಕ್ಸರ್‌ಗಳು
* ಮೈಕೆಲ್ ಹಿಲ್ (ಆಸ್ಟ್ರೇಲಿಯಾ) - 2008 ರಲ್ಲಿ ನಮೀಬಿಯಾ ವಿರುದ್ಧ 12 ಸಿಕ್ಸರ್‌ಗಳು
* ಕ್ರೇಗ್ ಸಿಮನ್ಸ್ (ಆಸ್ಟ್ರೇಲಿಯಾ) - 2002 ರಲ್ಲಿ ಕೀನ್ಯಾ ವಿರುದ್ಧ 11 ಸಿಕ್ಸರ್‌ಗಳು
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ 34.4 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆ 303 ರನ್ ಕಲೆ ಹಾಕಿದೆ. ಸದ್ಯ ಕ್ರೀಸ್ನಲ್ಲಿ ವೇದಾಂತ್ ತ್ರಿವೇದಿ 29 ರನ್ ಮತ್ತು ಅಭಿಗ್ಯಾನ್ ಕುಂದು 1 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಬೃಹತ್ ರನ್ ದಾಖಲಿಸುವತ್ತ ದಾಪುಗಾಲು ಇಡುತ್ತಿದೆ, (ಏಜೆನ್ಸೀಸ್).