ವಂಡರ್ ಕಿಡ್ ವೈಭವ್ ಅಂತಾರಾಷ್ಟ್ರೀಯ ಎಂಟ್ರಿಗೆ ಆರಂಭದಲ್ಲೇ ವಿಘ್ನ: ಐರ್ಲೆಂಡ್ ಸರಣಿ ನಡೆಯೋದು ಡೌಟು! ಕಾರಣವೇನು? Vaibhav Sooryavanshi
- ಟೀಮ್ ಇಂಡಿಯಾದ ಸೀನಿಯರ್ ಟಿ20 ತಂಡಕ್ಕೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದ ವೈಭವ್
- ಕೇವಲ 15 ವರ್ಷ 71 ದಿನಗಳ ಪ್ರಾಯದಲ್ಲೇ ರಾಷ್ಟ್ರೀಯ ತಂಡಕ್ಕ ಆಯ್ಕೆಯಾದ ವಂಡರ್ ಕಿಡ್
- ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ಸೂರ್ಯವಂಶಿ
- ತಾಜಾ ಸುದ್ದಿಯೇನೆಂದರೆ ವೈಭವ್ ಸೂರ್ಯವಂಶಿಯ ಅಂತಾರಾಷ್ಟ್ರೀಯ ಎಂಟ್ರಿಗೆ ಆರಂಭದಲ್ಲೇ ವಿಘ್ನ
Vaibhav Sooryavanshi : ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸಿ, 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಟೀಮ್ ಇಂಡಿಯಾದ ಸೀನಿಯರ್ ಟಿ20 ತಂಡಕ್ಕೆ (ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ) ಆಯ್ಕೆಯಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕೇವಲ 15 ವರ್ಷ 71 ದಿನಗಳ ಪ್ರಾಯದಲ್ಲೇ ರಾಷ್ಟ್ರೀಯ ತಂಡಕ್ಕ ಆಯ್ಕೆಯಾಗುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು (16ನೇ ವಯಸ್ಸಿನಲ್ಲಿ ಆಯ್ಕೆ) ಮುರಿದು, ಭಾರತ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ವೈಭವ್ ಮೈದಾನಕ್ಕಿಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತಿ ಕಿರಿಯ ಆಟಗಾರನೆಂಬ ಸಚಿನ್ ಅವರ ಮತ್ತೊಂದು ಸಾರ್ವಕಾಲಿಕ ದಾಖಲೆಯೂ ಧೂಳೀಪಟವಾಗಲಿದೆ. ಈ ಒಂದು ಕ್ಷಣಕ್ಕಾಗಿ ಇಡೀ ದೇಶವೇ ಕಾದು ಕುಳಿತಿದೆ.
ಜೂನ್ 26 ರಿಂದ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ, ಪ್ರಸ್ತುತ ಉತ್ತರ ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಕ್ರಿಕೆಟ್ ಸರಣಿ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಹಾಗಾದಲ್ಲಿ ವೈಭವ್ ಸೂರ್ಯವಂಶಿ ಅವರ ಪದಾರ್ಪಣೆ ಕೊಂಚ ತಡವಾಗಲಿದೆ.
ಬೆಲ್‌ಫಾಸ್ಟ್ ನಗರದಲ್ಲಿ ಸದ್ಯ ಭಾರಿ ಪ್ರಮಾಣದ ಜನಾಂಗೀಯ ಸಂಘರ್ಷ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ರಸ್ತೆಗಳಲ್ಲಿ ಮುಖವಾಡ ಧರಿಸಿದ ಪ್ರತಿಭಟನಾಕಾರರು ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ಭೀತಿ ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಸ್ಬನ್‌ನಲ್ಲಿ ಆಯೋಜಿಸಲಾಗಿದ್ದ ಇಂಟರ್-ಪ್ರೊವಿನ್ಶಿಯಲ್ ಟಿ20 ಟೂರ್ನಮೆಂಟ್ ಅನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕ್ರಿಕೆಟ್ ಐರ್ಲೆಂಡ್ ಮಂಡಳಿಯು, ಭಾನುವಾರ ನಡೆಯಬೇಕಿದ್ದ ಐರಿಶ್ ಸೀನಿಯರ್ ಕಪ್ ಮತ್ತು ನ್ಯಾಷನಲ್ ಕಪ್ ಪಂದ್ಯಗಳ ಬಗ್ಗೆ ಮುಂದಿನ 48 ಗಂಟೆಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ.
ಆಟಗಾರರು, ತರಬೇತುದಾರರು, ಅಂಪೈರ್‌ಗಳು ಮತ್ತು ಅಭಿಮಾನಿಗಳ ಸುರಕ್ಷತೆಯೇ ತಮಗೆ ಅತ್ಯಂತ ಪ್ರಮುಖ ಆದ್ಯತೆ ಎಂದು ಕ್ರಿಕೆಟ್ ಐರ್ಲೆಂಡ್ ಮಂಡಳಿ ಸ್ಪಷ್ಟಪಡಿಸಿದೆ. ಅಲ್ಲಿನ ಉದ್ವಿಗ್ನ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಅಥವಾ ಪಂದ್ಯಗಳನ್ನು ಮುಂದೂಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೂಡ ಅಲ್ಲಿನ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ನಿಗದಿತ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಜೂನ್ 26 ರಂದು ಹಾಗೂ ಎರಡನೇ ಪಂದ್ಯ ಜೂನ್ 28 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಬೇಕಿದೆ. ಒಂದು ವೇಳೆ ಅಲ್ಲಿನ ಜನಾಂಗೀಯ ಸಂಘರ್ಷದ ಕಾರಣದಿಂದ ಈ ಸರಣಿಯು ರದ್ದಾದರೆ ಅಥವಾ ಮುಂದೂಡಲ್ಪಟ್ಟರೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಯ ಕನಸು ಮತ್ತಷ್ಟು ತಡವಾಗಲಿದ್ದು, ಅವರು ಇಂಗ್ಲೆಂಡ್ ವಿರುದ್ಧದ ಸರಣಿಯವರೆಗೆ ಕಾಯಬೇಕಾಗುತ್ತದೆ.
ಮತ್ತೊಂದೆಡೆ, ಸದ್ಯ ಟೀಮ್ ಇಂಡಿಯಾ ಸೀನಿಯರ್ ತಂಡದ ಪ್ರವಾಸಕ್ಕೂ ಮುನ್ನ ವೈಭವ್ ಸೂರ್ಯವಂಶಿ ಅವರು ಶ್ರೀಲಂಕಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ 'ಭಾರತ ಎ' ತಂಡದ ಪರವಾಗಿ ಆಡುತ್ತಿದ್ದಾರೆ. ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ಔಟಾಗಿದ್ದ ವೈಭವ್, ಆ ಬಳಿಕ ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 22 ಎದುರಿಸಿದ ಎಸೆತಗಳಲ್ಲಿ ಭರ್ಜರಿ 44 ರನ್ ಸಿಡಿಸಿ ಸದ್ಯ ಫಾರ್ಮ್‌ಗೆ ಮರಳಿದ್ದಾರೆ, (ಏಜೆನ್ಸೀಸ್).