14, 13, 15... ಆ ಒಂದು ಎಸೆತವೇ ವೈಭವ್ ವೀಕ್ನೆಸ್: ಇಂಗ್ಲೆಂಡ್ ದಿಗ್ಗಜರಿಂದ ವಂಡರ್ ಕಿಡ್ ಬಗ್ಗೆ ಅಚ್ಚರಿ ಹೇಳಿಕೆ! Vaibhav Sooryavanshi
- ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 15 ವರ್ಷದ ಯುವ ಸೆನ್ಸೇಷನ್ ಸತತ ವೈಫಲ್ಯ
- ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಠಿಣ ಸವಾಲು ಎದುರಿಸುತ್ತಿರುವ ಯುವ ಆಟಗಾರ ವೈಭವ್
- ಶಾರ್ಟ್ ಪಿಚ್ ಎಸೆತಗಳಿಗೆ ಸುಲಭವಾಗಿ ವಿಕೆಟ್ ಒಪ್ಪಿಸುತ್ತಿರುವ ವಂಡರ್ ಕಿಡ್
- ವೈಭವ್ ಸೂರ್ಯವಂಶಿ ಆಟದ ಶೈಲಿಯನ್ನು ಮುಕ್ತವಾಗಿ ವಿಶ್ಲೇಷಿಸಿದ ಆದಿಲ್ ರಶೀದ್
Vaibhav Sooryavanshi : ಐಪಿಎಲ್ನಲ್ಲಿ ಹವಾ ಸೃಷ್ಟಿಸಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭಿಕ ದಿನಗಳು ಅಂದುಕೊಂಡಷ್ಟು ಸುಲಭವಾಗಿಲ್ಲ. ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರಿ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಈ ಯುವ ಬ್ಯಾಟರ್, ಆಡಿದ ಮೂರೂ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಇಂಗ್ಲೆಂಡ್ ವಿರುದ್ಧದ 5 ಟಿ20 ಸರಣಿಯ ಎರಡನೇ ಪಂದ್ಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೈಭವ್, ಮೊದಲ ಪಂದ್ಯದಲ್ಲೇ ಕೇವಲ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಮೂರನೇ ಪಂದ್ಯದಲ್ಲಿ 13 ಹಾಗೂ ನಿನ್ನೆ ನಡೆದ 4ನೇ ಪಂದ್ಯದಲ್ಲಿ ಕೇವಲ 15 ರನ್ಗಳಿಗೆ ಭಾರಿ ವೈಫಲ್ಯ ಅನುಭವಿಸಿದರು. ವೈಭವ್ ಅವರಿಗೆ ಸದ್ಯಕ್ಕೆ ತಂಡದಲ್ಲಿನ ಸ್ಥಾನಕ್ಕೇನೂ ಧಕ್ಕೆಯಿಲ್ಲದಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸವಾಲುಗಳು ಎಷ್ಟು ಕಠಿಣವಾಗಿರುತ್ತವೆ ಎಂಬುದನ್ನು ಈ ಪಂದ್ಯಗಳು ಮನವರಿಕೆ ಮಾಡಿಕೊಟ್ಟಿವೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಸ್ಟಂಪೌಟ್ ಔಟ್ ಆಗಿದ್ದ ಸೂರ್ಯವಂಶಿ, ಮೂರನೇ ಪಂದ್ಯದಲ್ಲಿ ವೇಗಿ ಜೋಫ್ರಾ ಆರ್ಚರ್ ಎಸೆದ ಅತ್ಯಂತ ಶಾರ್ಟ್ ಪಿಚ್ ಬಾಲ್‌ಗೆ ಉತ್ತರಿಸಲಾಗದೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಾಲ್ಕನೇ ಪಂದ್ಯದಲ್ಲೂ ಶಾರ್ಟ್ ಪಿಚ್ ಬಾಲ್‌ಗೆ ಔಟಾದರು. ಈ ಮೂಲಕ ವಿದೇಶಿ ಪಿಚ್‌ಗಳಲ್ಲಿ ಯುವ ಆಟಗಾರರು ತಮ್ಮ ತಂತ್ರಗಾರಿಕೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕಾದ ಅಗತ್ಯವನ್ನು ಈ ಸರಣಿ ನೆನಪಿಸಿದೆ.
ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪ್ರದರ್ಶನದ ಕುರಿತು ಇಂಗ್ಲೆಂಡ್ ತಂಡದ ಹಿರಿಯ ಆಟಗಾರ ಮೊಯೀನ್ ಅಲಿ ಅವರು 'ಬಿಯರ್ಡ್ ಬಿಫೋರ್ ವಿಕೆಟ್' (Beard Before Wicket) ಶೋನಲ್ಲಿ ಅತ್ಯಂತ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವೈಭವ್ ಸೂರ್ಯವಂಶಿ ಅವರಿಗೆ ಜೋಫ್ರಾ ಆರ್ಚರ್ ಬೌಲಿಂಗ್ ಮಾಡಿದ ರೀತಿ ನನಗಂತೂ ತುಂಬಾ ಇಷ್ಟವಾಯಿತು. ವೈಭವ್ ಸದ್ಯ ಎದುರಿಸುತ್ತಿರುವ ಏಕೈಕ ಸಮಸ್ಯೆಯೆಂದರೆ, ಮುಂಬರುವ ಎರಡು, ಮೂರು ಅಥವಾ ಐದು ಪಂದ್ಯಗಳಲ್ಲಿ ಅವರು ರನ್ ಗಳಿಸದಿದ್ದರೆ ಅದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಆದರೆ, ಅವರು ಅತ್ಯಂತ ಪ್ರತಿಭಾವಂತ ಆಟಗಾರ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ಮೊಯೀನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ವೈಭವ್ ಸದ್ಯ ಔಟ್ ಆಗುತ್ತಿರುವ ಶೈಲಿಯನ್ನು ನೋಡಿ, ಅದು ಅವರ ದೌರ್ಬಲ್ಯ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಅವರು ಈ ಹಿಂದೆ ಇಂತಹದ್ದೇ ಶಾರ್ಟ್ ಪಿಚ್ ಎಸೆತಗಳನ್ನು ಅತ್ಯಂತ ಸುಲಭವಾಗಿ ಸಿಕ್ಸರ್‌ಗಳಿಗೆ ಅಟ್ಟಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಹೀಗಾಗಿ ಅವರ ಬಗ್ಗೆ ನನಗೆ ಯಾವುದೇ ಆತಂಕವಿಲ್ಲ. ಆದರೆ, ಭಾರತ ತಂಡವು ಸದ್ಯ ವೈಭವ್ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ, ರನ್ ಗಳಿಸಲು ಪರದಾಡುತ್ತಿರುವ ತನ್ನ ಮಧ್ಯಮ ಕ್ರಮಾಂಕದ ಉಳಿದ ಬ್ಯಾಟರ್‌ಗಳ ಬಗ್ಗೆ ಯೋಚಿಸುವುದು ಉತ್ತಮ ಎಂದು ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ಗೆ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ಪ್ರಸ್ತುತ ಸರಣಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡದ ಹಿರಿಯ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್ ಅವರು ಯುವ ಆಟಗಾರನ ಬಗ್ಗೆ ವಿಭಿನ್ನ ವಿಶ್ಲೇಷಣೆ ನಡೆಸಿದ್ದು, ಐಪಿಎಲ್ (IPL) ಮೂಲಕ ಲಭ್ಯವಿರುವ ಡೇಟಾ ತಮಗೆ ಸಾಕಷ್ಟು ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಹೆಚ್ಚಿನ ದಿನಗಳಾಗಿಲ್ಲ ನಿಜ. ಆದರೆ, ಐಪಿಎಲ್‌ನಿಂದಾಗಿ ಜಗತ್ತಿನಾದ್ಯಂತದ ಜನರು ಈಗಾಗಲೇ ಅವರನ್ನು ಗಮನಿಸಿದ್ದಾರೆ. ಹೀಗಾಗಿ ನಮಗೆ ಬೇಕಾದ ಅವರ ಬ್ಯಾಟಿಂಗ್ ಡೇಟಾ ಸುಲಭವಾಗಿ ಸಿಗುತ್ತದೆ. ಅವರು ಎಲ್ಲಿ ರನ್ ಗಳಿಸಲು ಪರದಾಡುತ್ತಾರೆ ಮತ್ತು ಅವರ ಬಲ ಏನು ಎಂಬುದನ್ನು ನಮ್ಮ ತಂಡದ ಮ್ಯಾನೇಜ್‌ಮೆಂಟ್ ಸೂಕ್ಷ್ಮವಾಗಿ ವಿಶ್ಲೇಷಿಸಿದೆ. ಬೌಲಿಂಗ್ ವಿಭಾಗವಾಗಿ ನಾವು ಆ ಯೋಜನೆಗಳನ್ನು ಮೈದಾನದಲ್ಲಿ ಯಶಸ್ವಿಯಾಗಿ ಜಾರಿಗೆ ತರುತ್ತಿದ್ದೇವೆ ಎಂದು ರಶೀದ್ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಕೇವಲ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ಖಂಡಿತವಾಗಿಯೂ ಅವರ ಮೇಲೆ ಭಾರಿ ಒತ್ತಡವನ್ನು ಉಂಟುಮಾಡುತ್ತದೆ. ನಾವು ಪ್ರತಿಯೊಬ್ಬ ಆಟಗಾರನ ವಿರುದ್ಧವೂ ನಿರ್ದಿಷ್ಟ ಯೋಜನೆಗಳೊಂದಿಗೆ ಅತ್ಯಂತ ಗಂಭೀರವಾಗಿ ಕಣಕ್ಕಿಳಿಯುತ್ತಿದ್ದೇವೆ. ಸದ್ಯಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅವರಿಗೆ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡುವಂತೆ ಸೂಚಿಸಿದೆ ಮತ್ತು ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದಂತೆ ಕಾಣುತ್ತಿದೆ. ಆದರೆ, ಸರಣಿ ಮುಂದುವರಿದಂತೆ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವಾಗ ಫಾರ್ಮ್ ಕಳೆದುಕೊಂಡರೆ, ಅದಕ್ಕೆ ತಕ್ಕಂತೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಅವರು ಕಲಿಯಬೇಕಾಗುತ್ತದೆ ಎಂದು ಆದಿಲ್ ರಶೀದ್ ವಿಶ್ಲೇಷಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ತಂಡದ ಪರ ಜವಾಬ್ದಾರಿಯುತ ಆಟವಾಡಿದ ನಾಯಕ ಶ್ರೇಯಸ್ ಅಯ್ಯರ್, 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 49 ಎಸೆತಗಳಲ್ಲಿ ಅಜೇಯ 80 ರನ್ ಕಲೆಹಾಕುವ ಮೂಲಕ ಭರ್ಜರಿ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಉಳಿದಂತೆ ಶಿವಂ ದುಬೆ (22) ಸ್ವಲ್ಪ ಮಟ್ಟಿನ ಪ್ರತಿಭೆ ತೋರಿದರು. ಆದರೆ, ವೈಭವ್ ಸೂರ್ಯವಂಶಿ (15), ಅಭಿಷೇಕ್ ಶರ್ಮಾ (16), ಇಶಾನ್ ಕಿಶನ್ (4) ಮತ್ತು ತಿಲಕ್ ವರ್ಮಾ (11) ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಜೋಫ್ರಾ ಆರ್ಚರ್ ಮತ್ತು ಜೋಶ್ ಟಾಂಗ್ ತಲಾ ಎರಡು ವಿಕೆಟ್ ಪಡೆದರೆ, ವಿಲ್ ಜಾಕ್ಸ್ ಮತ್ತು ಆದಿಲ್ ರಶೀದ್ ತಲಾ ಒಂದು ವಿಕೆಟ್ ಹಂಚಿಕೊಂಡರು.
ಇನ್ನು 159 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 13.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಗಳಾದ ನಾಯಕ ಹ್ಯಾರಿ ಬ್ರೂಕ್ 8 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 35 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರೆ, ಫಿಲ್ ಸಾಲ್ಟ್ 42 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದರು. ಈ ಇಬ್ಬರು ಬ್ಯಾಟರ್ಗಳು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಮಾತ್ರ ಕೇವಲ ಒಂದು ವಿಕೆಟ್ ಪಡೆಯಲು ಯಶಸ್ವಿಯಾದರು, (ಏಜೆನ್ಸೀಸ್).