15ನೇ ವಯಸ್ಸಿನಲ್ಲೇ ಇತಿಹಾಸ ಬರೆದ ವೈಭವ್: ನಾಯಕತ್ವ ವಹಿಸಿಕೊಂಡು ಅಚ್ಚರಿ ಮೂಡಿಸಿದ ವಂಡರ್ ಕಿಡ್! Vaibhav Sooryavanshi
- 15ರ ಹರೆಯದಲ್ಲಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ ವೈಭವ್ ಸೂರ್ಯವಂಶಿ
- ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಿರಿಯ ವಯಸ್ಸಿನ ನಾಯಕನಾಗಿ ಇತಿಹಾಸ ಸೃಷ್ಟಿಸಿದ ಯುವ ಬ್ಯಾಟರ್
- ಇಶಾನ್ ಕಿಶನ್ ಗಾಯಗೊಂಡು ಮೈದಾನ ತೊರೆದ ಕಾರಣ ಅನಿರೀಕ್ಷಿತವಾಗಿ ಒಲಿದುಬಂದ ನಾಯಕನ ಪಟ್ಟ
- ಮೊಹಮ್ಮದ್ ಶಮಿ ಹಾಗೂ ಮುಖೇಶ್ ಕುಮಾರ್ ಸೇರಿದಂತೆ ಅನುಭವಿ ಆಟಗಾರರನ್ನು ಮುನ್ನಡೆಸಿದ ವೈಭವ್
Vaibhav Sooryavanshi : ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಸೆಂಟ್ರಲ್ ಜೋನ್ ವಿರುದ್ಧದ ಪಂದ್ಯದ ವೇಳೆ ಈ ಅಪರೂಪದ ಹಾಗೂ ಐತಿಹಾಸಿಕ ಘಟನೆ ಜರುಗಿದೆ.
ಕೇವಲ 15 ವರ್ಷ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಈ ಪಂದ್ಯದಲ್ಲಿ ಈಸ್ಟ್ ಜೋನ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಭಾರತೀಯ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಈ ಟೂರ್ನಿಗೂ ಮುನ್ನವೇ ವೈಭವ್ ಸೂರ್ಯವಂಶಿಯನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದ್ದರ ಬಗ್ಗೆ ದೇಶೀಯ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಭವಿಷ್ಯದ ದೃಷ್ಟಿಯಿಂದ ಈ ಯುವ ಆಟಗಾರನನ್ನು ಅತ್ಯುತ್ತಮ ನಾಯಕನನ್ನಾಗಿ ರೂಪಿಸುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈಸ್ಟ್ ಜೋನ್ ಆಯ್ಕೆಗಾರರು ಸ್ಪಷ್ಟಪಡಿಸಿದ್ದರು. ಆದರೆ, ಇಷ್ಟು ಬೇಗ ನಾಯಕತ್ವದ ಜವಾಬ್ದಾರಿ ಅವರ ಹೆಗಲೇರುತ್ತದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ.
ಪಂದ್ಯದ ಮೊದಲ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಸೆಂಟ್ರಲ್ ಜೋನ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಈಸ್ಟ್ ಜೋನ್ ನಾಯಕ ಹಾಗೂ ವಿಕೆಟ್‌ಕೀಪರ್ ಇಶಾನ್ ಕಿಶನ್ ಅವರ ಬಲಗೈ ಮಣಿಕಟ್ಟಿಗೆ ತೀವ್ರ ಪೆಟ್ಟುಬಿತ್ತು. ಮೈದಾನದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದರೂ ನೋವು ಹೆಚ್ಚಾಗಿದ್ದರಿಂದ ಅವರು ಮೈದಾನ ತೊರೆಯಬೇಕಾಯಿತು. ತಕ್ಷಣವೇ ಕುಮಾರ್ ಕುಶಾಗ್ರಾ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರೆ, ಅಚ್ಚರಿಯೆಂಬಂತೆ ನಾಯಕತ್ವದ ಪಟ್ಟ ಕೇವಲ 15 ವರ್ಷದ ವೈಭವ್ ಸೂರ್ಯವಂಶಿಯ ಪಾಲಾಯಿತು.
ತಮ್ಮ ವೃತ್ತಿಜೀವನದ ಕೇವಲ 10ನೇ ಪ್ರಥಮ ದರ್ಜೆ ಪಂದ್ಯ ಮತ್ತು 2ನೇ ದುಲೀಪ್ ಟ್ರೋಫಿ ಆಡುತ್ತಿರುವ ಈ ಬಾಲಕ, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್ ಮತ್ತು ಅಭಿಮನ್ಯು ಈಶ್ವರನ್ ಅವರಂತಹ ಹಿರಿಯ ಹಾಗೂ ಅನುಭವಿ ಅಂತರರಾಷ್ಟ್ರೀಯ ಆಟಗಾರರಿರುವ ತಂಡವನ್ನು ಮುನ್ನಡೆಸುತ್ತಿರುವುದು ನಿಜಕ್ಕೂ ರೋಚಕ ಸಂಗತಿಯಾಗಿದೆ.
ಅತ್ಯಂತ ಕಿರಿಯ ವಯಸ್ಸಿನವರಾಗಿದ್ದರೂ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ನಾಯಕತ್ವದ ಚಾತುರ್ಯ ಮೆರೆದಿರುವ ವೈಭವ್, ಭಾರತೀಯ ಕ್ರಿಕೆಟ್ ಭವಿಷ್ಯದ ಉಜ್ವಲ ನಾಯಕನಾಗುವ ಮುನ್ಸೂಚನೆ ನೀಡಿದ್ದಾರೆ