- ಬಿರುಗಾಳಿ ಬ್ಯಾಟಿಂಗ್ನಿಂದಲೇ ಸಖತ್ ಸದ್ದು ಮಾಡಿದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ
- ಐರ್ಲೆಂಡ್-ಇಂಗ್ಲೆಂಡ್ ಟೂರ್ಗೆ ಆಯ್ಕೆ ಆಗಿರುವ ವೈಭವ್ ಮೇಲೆ ಹೆಚ್ಚಿದ ನಿರೀಕ್ಷೆಗಳು
- ಇಂಗ್ಲೆಂಡ್ಗೆ ಎಂಟ್ರಿ ಕೊಡುವ ಮುನ್ನವೇ ವೈಭವ್ ಹವಾ
Vaibhav Sooryavanshi: 19ನೇ ಆವೃತ್ತಿಯ ಐಪಿಎಲ್ನಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್ ಮೂಲಕವೇ ಸಖತ್ ಸದ್ದು ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಸ್ಫೋಟಕ ಇನ್ನಿಂಗ್ಸ್ ಜೊತೆಗೆ ಆಕರ್ಷಕ ಶತಕಗಳ ಸರಮಾಲೆ ದಾಖಲಿಸಿದ್ದು ಕ್ರಿಕೆಟ್ ದಿಗ್ಗಜರ ಹುಬ್ಬೇರಿಸಿತು. 237 ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 776 ರನ್ಗಳನ್ನು ಕಲೆಹಾಕಿದ ಈ ಪುಟ್ಟ ಪೋರ, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಈಗ ಟೀಮ್ ಇಂಡಿಯಾ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿರುವ ಅತ್ಯಂತ ಕಿರಿಯ ಆಟಗಾರ ಸೂರ್ಯವಂಶಿ, ಇಂಗ್ಲೆಂಡ್-ಐರ್ಲೆಂಡ್ ಟಿ20 ಸರಣಿಗೆ ತಂಡದ ಪರ ಅಬ್ಬರಿಸಲು ಸಜ್ಜಾಗುತ್ತಿರುವುದು ಆಂಗ್ಲರ ನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ.
15 ವರ್ಷದ ಹುಡುಗನೊಬ್ಬ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳನ್ನು ಹಿಗ್ಗಾಮುಗ್ಗಾ ಬಾರಿಸುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಸದ್ಯ ಕ್ರಿಕೆಟ್ ದಿಗ್ಗಜರಿಗೆ ನಂಬಲು ಕಷ್ಟಸಾಧ್ಯವಾಗಿದೆ. ಈ ವರ್ಷ ಅತ್ಯಧಿಕ ರನ್ಗಳನ್ನು ಗಳಿಸಿದ ಬ್ಯಾಟ್ಸ್ಮನ್ಗಳ ಪೈಕಿ ಬರೋಬ್ಬರಿ 700ಕ್ಕೂ ಅಧಿಕ ರನ್ಗಳನ್ನು ದಾಖಲಿಸುವ ಮೂಲಕ ಪಟ್ಟಿಯಲ್ಲಿ ವೈಭವ್ ಅಗ್ರ ಸ್ಥಾನಕ್ಕೇರಿದರು. ಇದೇ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆದಿದ್ದು, ಈಗ ಆಂಗ್ಲರ ನಾಡಿನಲ್ಲಿ ಸೀನಿಯರ್ ತಂಡದ ಪರ ಆಡುವ ಮೂಲಕ ಪದಾರ್ಪಣೆ ಮಾಡಲಿರುವ ಸೂರ್ಯವಂಶಿ ನೋಡಲು ಇಂಗ್ಲೆಂಡ್ ಜನತೆ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕೆ ಇಂಗ್ಲಿಷ್ ಪತ್ರಿಕೆಗಳ ಮುಖಪುಟಗಳಲ್ಲಿ ಸದ್ದು ಮಾಡುತ್ತಿರುವ 'ವೈಭವ' ಸುದ್ದಿಗಳೇ ಸಾಕ್ಷಿ.
ವೈಭವ್ ಸೂರ್ಯವಂಶಿ ಸೃಷ್ಟಿಸಿರುವ ಹವಾ ಕುರಿತು 'ಸ್ಕೈ ಸ್ಫೋರ್ಟ್ಸ್ ಕ್ರಿಕೆಟ್ ಶೋ'ನಲ್ಲಿ ಮಾತನಾಡಿದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೆಲ್ ಅಥರ್ಟನ್, ಇಂಗ್ಲೆಂಡ್‌ನ ಪತ್ರಿಕೆಗಳು ಬೇಬಿ ಬಾಸ್ ಎಂಟ್ರಿಗೆ ಈಗಾಗಲೇ ಸಖತ್ ಪ್ರಚಾರ ಮಾಡುತ್ತಿವೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಖಂಡಿತ ವೈಭವ್ ಅವರ ಆಗಮನದಿಂದ ಖುಷಿ ಪಡಲಿದೆ. ಕಾರಣ, ಇದು ಪಂದ್ಯಗಳ ಟಿಕೆಟ್ ಮಾರಾಟವನ್ನು ಸಹ ಹೆಚ್ಚಿಸಲಿದೆ ಎಂದರು. ಈ ಮೂಲಕ ಆಂಗ್ಲರ ನಾಡಿನಲ್ಲಿ 15 ವರ್ಷದ ಬಾಲಕನ ಹವಾ ಹೇಗಿದೆ ಎಂಬುದನ್ನು ವಿವರಿಸಿದರು.
ಐಪಿಎಲ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿರುವ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಸೇರಿ ಹಲವರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಕ್ರಿಕೆಟ್ ಪ್ರಿಯರಲ್ಲಿ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಪರ ವೈಭವ್ ಏನಾದರೂ ಕಣಕ್ಕಿಳಿದರೆ, ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ,(ಏಜೆನ್ಸೀಸ್).