- ಲಖನೌ ತಂಡದ ಎದುರು ಭರ್ಜರಿ ಜಯ ಗಳಿಸಿದ ರಾಜಸ್ಥಾನ ರಾಯಲ್ಸ್
- ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದರೂ ಅಚ್ಚರಿ ಹೇಳಿಕೆ ನೀಡಿದ ವೈಭವ್ ಸೂರ್ಯವಂಶಿ
- ಪ್ರತಿ ಪಂದ್ಯಕ್ಕೂ ಮೊದಲು ಅದನ್ನು ನೋಡಿಯೇ ಹೋಗುವುದು ಎಂದ ಬೇಬಿ ಬಾಸ್
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ನಲ್ಲಿ ತಮ್ಮ ಬಿರುಗಾಳಿ ಬ್ಯಾಟಿಂಗ್ ಮೂಲಕವೇ ಸಖತ್ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ, ಐಪಿಎಲ್ನಲ್ಲಿ ಆರ್ಆರ್ಗೆ ಓಪನರ್ ಆಗಿ ಮಿಂಚುತ್ತಿರುವ ಈ ಯುವ ಬ್ಯಾಟರ್, ತನ್ನ ಬ್ಯಾಟ್ನಿಂದ ಮಾತ್ರವಲ್ಲ, ಮಾತುಗಳಿಂದಲೂ ಕ್ರಿಕೆಟ್ ಪ್ರಿಯರ ಗಮನವನ್ನು ಸೆಳೆಯುತ್ತಿದ್ದಾರೆ.
ಕಳೆದ ವರ್ಷ ಮತ್ತು ಪ್ರಸಕ್ತ ನಡೆಯುತ್ತಿರುವ ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುತ್ತಿರುವ 15 ವರ್ಷದ ಪೋರ, ತಾನು ಟೀಮ್ ಇಂಡಿಯಾದ ಭವಿಷ್ಯದ ಭರವಸೆಯ ಆಟಗಾರ ಎಂಬ ಮುನ್ಸೂಚನೆಯನ್ನು ಅದಾಗಲೇ ಕ್ರೀಡಾಭಿಮಾನಿಗಳಿಗೆ ಮತ್ತು ಬಿಸಿಸಿಐ ಆಯ್ಕೆಗಾರರಿಗೆ ನೀಡಿರುವುದು ಗಮನಾರ್ಹ. 19ನೇ ಆವೃತ್ತಿಯಲ್ಲಿ ರಾಜಸ್ಥಾನ ಪರ ಕ್ರೀಸ್ಗಿಳಿಯುತ್ತಿರುವ ವೈಭವ್, ಎದುರಾಳಿ ತಂಡದ ಅನುಭವಿ ಬೌಲರ್ಗಳಿಗೆ ಬೆಂಡೆತ್ತುತ್ತಿರುವುದು ನೋಡುಗರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ.
ಅಂತೆಯೇ, ನಿನ್ನೆ (ಏ.22) ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿ, ಪಂದ್ಯ ಗೆದ್ದ ಬಳಿಕ ಮಾತನಾಡಿ, ನನಗೆ ಈಗಲೂ ಟಿವಿಯಲ್ಲಿ ಕಾರ್ಟೂನ್ ನೋಡುವ ಅಭ್ಯಾಸವಿದೆ ಎಂದರು. ಇದು ಅವರನ್ನು ಪ್ರಶ್ನಿಸಿದ ಕಮೆಂಟೇಟರ್ಗೆ ಒಂದು ನಿಮಿಷ ನಗು ತರಿಸಿತು. ಆಟದ ಮೇಲೆ ಸಂಪೂರ್ಣ ಫೋಕಸ್ ಇದೆ. ಅದರೊಟ್ಟಿಗೆ ಕಾರ್ಟೂನ್ ಕೂಡ ನೋಡುವುದನ್ನು ಮುಂದುವರಿಸಿದ್ದೇನೆ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ನೋಡಿಯೇ ಹೋಗೋದು
ಪ್ರತಿ ಪಂದ್ಯಕ್ಕೂ ಮೊದಲು ನಾನು ಕಾರ್ಟೂನ್ ನೋಡುತ್ತೇನೆ. ಅದನ್ನು ಮುಗಿಸಿಕೊಂಡು ಮೈದಾನಕ್ಕೆ ಹೋಗುತ್ತೇನೆ. ಆದರೆ, ಅಖಾಡದಲ್ಲಿ ನಿಂತಾಗ ನನ್ನ ಸಂಪೂರ್ಣ ಗಮನ ಆಟದ ಮೇಲಿರುತ್ತದೆ. ಈ ಪಂದ್ಯವನ್ನು ಗೆದ್ದು ಎರಡು ಪಾಯಿಂಟ್ಗಳನ್ನು ಪಡೆದುಕೊಂಡಿದ್ದೇವೆ. ಖಂಡಿತ ಪ್ಲೇಆಫ್ಗೆ ಎಂಟ್ರಿ ಕೊಡ್ತೇವೆ. ಮುಂದಿನ ಪಂದ್ಯಗಳಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಬರಲಿದೆ ಎಂದರು,(ಏಜೆನ್ಸೀಸ್).