ಸಚಿನ್​ ತೆಂಡೂಲ್ಕರ್​, ವೈಭವ್ ಸೂರ್ಯವಂಶಿ, ರೋಹಿತ್ ಶರ್ಮ  
ಕ್ರಿಕೆಟ್

ಐರ್ಲೆಂಡ್​ ಮಣ್ಣಿನಲ್ಲಿ ದಿಗ್ಗಜರ ದಾಖಲೆ ಮುರಿಯಲು ವಂಡರ್​ ಕಿಡ್​ ರೆಡಿ! ಸೂರ್ಯವಂಶಿ ಬ್ಯಾಟಿಂಗ್​ ನೋಡಲು ಫ್ಯಾನ್ಸ್ ಕಾತರ​

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಐರ್ಲೆಂಡ್​ ವಿರುದ್ಧದ ಟಿ20 ಸರಣಿ ಆರಂಭ
  • ಪ್ಲೇಯಿಂಗ್​ ಇಲೆವನ್​ ತಂಡದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಕೊಡ್ತಾರಾ?
  • ಐರಿಶ್​ ಮಣ್ಣಿನಲ್ಲಿ ವೈಭವ್ ಆಡಿದರೆ, ಹಲವರ ದಾಖಲೆಗಳು ಬ್ರೇಕ್​ ಖಚಿತ
Vaibhav Sooryavanshi: ಇಂದಿನಿಂದ ಐರ್ಲೆಂಡ್​ ಮತ್ತು ಭಾರತ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದ್ದು, ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಅವರ ಅಬ್ಬರದ ಪ್ರದರ್ಶನ ನೋಡಲು ಕ್ರಿಕೆಟ್​ ಪ್ರೇಮಿಗಳ ತೀವ್ರ ಕಾತರದಿಂದ ಕಾಯತೊಡಗಿದ್ದಾರೆ. ಇದು ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ, ಐರ್ಲೆಂಡ್​ ಮತ್ತು ಇಂಗ್ಲೆಂಡ್​ ಕ್ರಿಕೆಟ್​ ಪ್ರಿಯರು ಕೂಡ ಅಷ್ಟೇ ಕೌತುಕ ಹೊಂದಿದ್ದಾರೆ.
ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಹೆಸರು ಮುಂಚೂಣಿಯಲ್ಲಿದೆ. ಕೇವಲ 15ನೇ ವಯಸ್ಸಿಗೆ ತಮ್ಮ ಅಮೋಘ ಮತ್ತು ಸ್ಫೋಟಕ ಬ್ಯಾಟಿಂಗ್ ಮೂಲಕವೇ ಇಡೀ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿರುವ ಈ ಯುವ ಬ್ಯಾಟ್ಸ್‌ಮನ್, ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತೀಯ ಸೀನಿಯರ್ ಪುರುಷರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದೇ ಹಲವರಿಗೆ ಖುಷಿ ತಂದಿದೆ. ಜೂ.26ರಂದು ನಡೆಯುವ ಮೊದಲ ಪಂದ್ಯದಲ್ಲಿ ಅಂತಿಮ ತಂಡದಲ್ಲಿ ಅವಕಾಶ ಪಡೆದಿದ್ದೇ ಆದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೈಭವ್​ ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಗಲಿದ್ದಾರೆ.

ಸಚಿನ್ ದಾಖಲೆ ಬ್ರೇಕ್​?

ಟೀಮ್ ಇಂಡಿಯಾ ದಿಗ್ಗಜ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾರತಕ್ಕಾಗಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 1989ರಲ್ಲಿ ಪಾಕಿಸ್ತಾನ ವಿರುದ್ಧ 16 ವರ್ಷ ಮತ್ತು 205 ದಿನಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ನಂತರ ನಿರ್ಮಿಸಿದ್ದು ದಾಖಲೆಗಳ ಸುರಿಮಳೆ. ಈಗ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧ ಟಿ20 ಕ್ಯಾಪ್​ ಧರಿಸಿದರೆ, ಕೇವಲ 15ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಹೊಸ ಐತಿಹಾಸಿಕ ದಾಖಲೆಯನ್ನು ವೈಭವ್​ ಸೃಷ್ಟಿಸಲಿದ್ದಾರೆ.

ರೋಹಿತ್ ಶರ್ಮಾ ದಾಖಲೆ

ರೋಹಿತ್ ಶರ್ಮಾ ಐರ್ಲೆಂಡ್‌ನಲ್ಲಿ ಟಿ20ಗಳಲ್ಲಿ ಆರಂಭಿಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್​ಮನ್​. ಅತ್ಯಧಿಕ ಎಂದರೆ 97 ರನ್ ಬಾರಿಸಿದ್ದಾರೆ. ಈಗ ವೈಭವ್ ಸೂರ್ಯವಂಶಿ ಆರಂಭಿಕನಾಗಿ ತಮ್ಮ ಚೊಚ್ಚಲ ಪಂದ್ಯದಲ್ಲಿ ಆಡಿದರೆ, ಅದರಲ್ಲೂ 98 ರನ್ ಗಳಿಸಲು ಸಾಧ್ಯವಾದರೆ, ಅವರು ಐರ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಭಾರತೀಯ ಟಿ20 ಆರಂಭಿಕನಾಗಿ ರೋಹಿತ್​ ದಾಖಲೆಯನ್ನು ಬ್ರೇಕ್​ ಮಾಡುವುದಂತು ಖಚಿತ.

ಅತ್ಯಧಿಕ ರನ್ ದಾಖಲೆ

ಭಾರತ ಪರ ಟಿ20 ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಅಜಿಂಕ್ಯ ರಹಾನೆ ಹೊಂದಿದ್ದಾರೆ. 2011ರಲ್ಲಿ ಇಂಗ್ಲೆಂಡ್ ಎದುರು ತಮ್ಮ ಪದಾರ್ಪಣೆ ಪಂದ್ಯದಲ್ಲಿ ರಹಾನೆ 39 ಎಸೆತಗಳಲ್ಲಿ 61 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯದಲ್ಲಿ 62 ರನ್ ಬಾರಿಸಿದರೆ, ರಹಾನೆ ಅವರ ದಾಖಲೆ ಮೊದಲು ಉಡೀಸ್​ ಆಗುತ್ತದೆ.

ಅತಿ ಹೆಚ್ಚು ಸಿಕ್ಸರ್‌ ದಾಖಲೆ

ಭಾರತದ ಪರ ಟಿ20 ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಸದ್ಯ ಇಶಾನ್ ಕಿಶನ್ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಇಶಾನ್ 4 ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅದೇ ವೈಭವ್ ಏನಾದರೂ ತಮ್ಮ ಚೊಚ್ಚಲ ಪಂದ್ಯದಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದರೆ, ಕಿಶನ್​ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರುತ್ತಾರೆ.

ಐರಿಶ್ ನೆಲದಲ್ಲಿ ಒಂದು ವಿಶಿಷ್ಠ ರೆಕಾರ್ಡ್​

ಸಿದ್ಧಾರ್ಥ್ ಕೌಲ್, ಪ್ರಸಿದ್ಧ್ ಕೃಷ್ಣ ಮತ್ತು ರಿಂಕು ಸಿಂಗ್ ಅವರು ಐರ್ಲೆಂಡ್‌ನಲ್ಲಿ ಭಾರತ ಪರ ಇದುವರೆಗೆ ಟಿ20ಗೆ ಪಾದಾರ್ಪಣೆ ಮಾಡಿದ ಆಟಗಾರರು. ಕುತೂಹಲಕಾರಿಯಾಗಿ, ಇವರಲ್ಲಿ ಯಾರೊಬ್ಬರೂ ತಮ್ಮ ಮೊದಲ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ವೈಭವ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಕನಿಷ್ಠ ಒಂದು ರನ್ ಬಾರಿಸಿದರೆ, ಐರಿಶ್ ನೆಲದಲ್ಲಿ ರನ್ ಗಳಿಸಿದ ಮೊದಲ ಭಾರತೀಯ ಚೊಚ್ಚಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಈಗಾಗಲೇ ತಮ್ಮ ಭಯಾನಕ ಬ್ಯಾಟಿಂಗ್​ ವೈಖರಿಯಿಂದ ಇಡೀ ಕ್ರಿಕೆಟ್​ ಲೋಕವನ್ನೇ ಅಕ್ಷರಶಃ ಬೆರಗಾಗಿಸಿರುವ ಯುವ ವೈಭವ್ ಸೂರ್ಯವಂಶಿ, ಭಾರತ ಸೀನಿಯರ್​ ಪುರುಷರ ತಂಡದಲ್ಲಿ ಅವಕಾಶ ಪಡೆದಿರುವುದು ಹಲವರಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೇ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಎ ವಿರುದ್ಧ ಫೈನಲ್​ ಪಂದ್ಯದಲ್ಲಿ 29 ಎಸೆತದಲ್ಲಿ ಬರೋಬ್ಬರಿ 94 ರನ್​ ಬಾರಿಸುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿಗೆ ಅಭಿಮಾನಿಗಳ ಬಳಗ ಇನ್ನಷ್ಟು ದೊಡ್ಡದಾಗಿದೆ. ಹೀಗಿರುವಾಗ, ಅವರ ಮೇಲಿನ ನಿರೀಕ್ಷೆಗಳು ಹಿಂದಿಗಿಂತ ಡಬಲ್ ಆಗಿದೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).