- ಐಪಿಎಲ್‌ನಲ್ಲಿ ಮುಂದುವರಿದ ವೈಭವ್ ಸೂರ್ಯವಂಶಿಯ ಬಿರುಗಾಳಿ ಬ್ಯಾಟಿಂಗ್
- ಸ್ಟಾರ್ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರಿಂದ ಬೇಬಿ ಬಾಸ್ಗೆ ಮೆಚ್ಚುಗೆಯ ಸುರಿಮಳೆಗಳು
- ಮತ್ತೊಂದು ಹೊಸ ದಾಖಲೆ ಸೃಷ್ಟಿಸುವತ್ತ ವೈಭವ್ ಚಿತ್ತ
Vaibhav Sooryavanshi: ಪ್ರಸಕ್ತ ನಡೆಯುತ್ತಿರುವ ಐಪಿಎಲ್ 19ನೇ ಆವೃತ್ತಿಯಲ್ಲಿ 15 ವರ್ಷದ ಹುಡುಗನೊಬ್ಬ ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳನ್ನು ಮನಬಂದಂತೆ ಬೆಂಡೆತ್ತುತ್ತಿರುವುದನ್ನು ನೋಡಿ ಸ್ವತಃ ಕ್ರಿಕೆಟ್ ದಿಗ್ಗಜರೇ ಅಚ್ಚರಿಗೆ ಒಳಗಾಗಿದ್ದಾರೆ. ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಹಿಗ್ಗಾಮುಗ್ಗಾ ಬಾರಿಸುವ ವೈಭವ್ ಸೂರ್ಯವಂಶಿ ಎಂಬ ಭವಿಷ್ಯದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗೆ ಅದಾಗಲೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಈತನನ್ನು ಆಡಿಸುತ್ತಿರುವ ರಾಜಸ್ಥಾನ ರಾಯಲ್ಸ್ಗೆ ವೈಭವ್ ಸದ್ಯ ಲಕ್ಕಿ ಚಾರ್ಮ್ ಆಗಿದ್ದಾರೆ.
ಕೇವಲ 15 ವರ್ಷಕ್ಕೆ ಇಂಥ ಸ್ಫೋಟಕ ಪ್ರದರ್ಶನ ನೀಡಲು ಹೇಗೆ ಸಾಧ್ಯ? ಎಂಬ ಅಚ್ಚರಿ ಹಾಗೂ ಗೊಂದಲ ಕ್ರಿಕೆಟ್ ಪ್ರಿಯರಲ್ಲಿ ಮೂಡುವುದು ತೀರ ಸಹಜ. ಪ್ರಸ್ತುತ, ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ವೈಭವ್, ಅತಿ ಹೆಚ್ಚು ರನ್ ದಾಖಲಿಸಿದ ಬ್ಯಾಟರ್ಗಳ ಪಟ್ಟಿ ಮೂರನೇ ಸ್ಥಾನದಲ್ಲಿದ್ದಾರೆ. ಅತ್ಯಧಿಕ ರನ್ಗಳ ದಾಖಲೆಯ ಜೊತೆಗೆ ಮತ್ತೊಂದು ಅಪರೂಪದ ರೆಕಾರ್ಡ್ಗೆ ಸೂರ್ಯವಂಶಿ ಬಹಳ ಸಮೀಪದಲ್ಲಿದ್ದಾರೆ.
ಅಭಿಷೇಕ್ ದಾಖಲೆ ಪುಡಿಗೆ ಬೇಕಿದೆ 6 ಸಿಕ್ಸ್
ವೈಭವ್ ಸೂರ್ಯವಂಶಿ ಪ್ರಸ್ತುತ ಐಪಿಎಲ್‌ನಲ್ಲಿ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರನ ದಾಖಲೆಯನ್ನು ಮುರಿಯಲು ತುದಿಗಾಲಿನಲ್ಲಿದ್ದಾರೆ. 2024ರ ಸೀಸನ್‌ನಲ್ಲಿ ಅಭಿಷೇಕ್ ಶರ್ಮಾ 42 ಸಿಕ್ಸರ್‌ಗಳೊಂದಿಗೆ ನಿರ್ಮಿಸಿದ್ದ ದಾಖಲೆಯನ್ನು ಮುರಿಯಲು ವೈಭವ್ ಕೇವಲ 6 ಸಿಕ್ಸರ್‌ಗಳ ದೂರದಲ್ಲಿದ್ದಾರೆ. ಇಂದು ಜೈಪುರದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ದಾಟುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ವೈಭವ್ 37 ಸಿಕ್ಸರ್ ಮತ್ತು 34 ಬೌಂಡರಿಗಳನ್ನು ಬಾರಿಸಿದ್ದಾರೆ ಎಂಬುದು ಗಮನಾರ್ಹ.
ಇತಿಹಾಸ ಸೃಷ್ಟಿಯತ್ತ ದಾಪುಗಾಲು
ವೈಭವ್ ಮತ್ತೊಂದು ಅಪರೂಪದ ಸಾಧನೆಗೆ ಕೇವಲ ಒಂದು ಸಿಕ್ಸರ್ ಬಾಕಿ. 20 ವರ್ಷ ತುಂಬುವ ಮೊದಲು ಟಿ20 ಇತಿಹಾಸದಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗುವ ಮೂಲಕ ಅವರು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದ್ದಾರೆ. ಕೇವಲ 27 ಇನ್ನಿಂಗ್ಸ್‌ಗಳಲ್ಲಿ 99 ಸಿಕ್ಸರ್‌ಗಳನ್ನು ಬಾರಿಸಿರುವ ಸೂರ್ಯವಂಶಿ, ಟಿ20ಗಳಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ವೇಗದ ಆಟಗಾರರಾಗಿ ಹೊರಹೊಮ್ಮಲಿದ್ದಾರೆ. ಈ ದಾಖಲೆಯು ಮುಂಬರುವ ಪೀಳಿಗೆಯಿಂದ ಮೀರದ ದಾಖಲೆಯಾಗಿ ಉಳಿಯುವುದು ಖಚಿತ.