- ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 103 ರನ್ ಸಿಡಿಸಿದ ವೈಭವ್ ಸೂರ್ಯವಂಶಿ
- 15 ವರ್ಷದ ವೈಭವ್ ಆಟಕ್ಕೆ ಕ್ರಿಕೆಟ್ ದಿಗ್ಗಜರೇ ಗಪ್ಚುಪ್
- ಒಂದಲ್ಲ, ಎರಡಲ್ಲ... ಯುವ ಬ್ಯಾಟರ್ ಹೆಸರಿನಲ್ಲಿದೆ ಹಲವು ದಾಖಲೆಗಳು
Vaibhav Sooryavanshi: ನಿನ್ನೆ (ಏ.25) ಜೈಪುರದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮ್ಯಾಚ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ದಾಖಲಿಸಿದ್ದೇ ಆದರೂ ತಂಡಕ್ಕೆ ಗೆಲುವು ಸಿಗದೆ ಹೋಗಿದ್ದು ಕ್ರಿಕೆಟ್ ಪ್ರಿಯರನ್ನು ಭಾರೀ ನಿರಾಶೆಗೊಳಿಸಿತು. ಆದರೆ, ಈ ಬಾರಿಯ ಐಪಿಎಲ್‌ನಲ್ಲಿ ಎರಡನೇ ಶತಕದಾಟದ ಮೂಲಕ ವೈಭವ್ ತಮ್ಮ ಹೆಸರಿಗೆ ಇದೀಗ ಹಲವಾರು ದಾಖಲೆಗಳನ್ನು ಸೇರಿಸಿಕೊಂಡಿರುವುದು ಗಮನಾರ್ಹ.
ಯಾವ ದಾಖಲೆಗಳು ವೈಭವ್ ಮುಡಿಗೆ?
- ವೈಭವ್ ಸೂರ್ಯವಂಶಿ 40ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಐಪಿಎಲ್ ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಸಾಕ್ಷಿಯಾಗಿದ್ದಾರೆ. 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ ಅವರು, ಈ ಬಾರಿಯ ಐಪಿಎಲ್‌ನಲ್ಲಿ ಎಸ್ಆರ್ಎಚ್ ಎದುರು ಕೇವಲ 36 ಬಾಲ್ಗಳಲ್ಲಿ ಶತಕ ಬಾರಿಸಿದರು.
- ಟಿ20 ಕ್ರಿಕೆಟ್‌ನಲ್ಲಿ 1000 ರನ್ ಮೈಲಿಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಗೈದ ಅತ್ಯಂತ ವೇಗದ ಆಟಗಾರ (ಚೆಂಡುಗಳ ವಿಷಯದಲ್ಲಿ) ಎಂಬ ಪಟ್ಟ ಪಡೆದಿದ್ದಾರೆ. ಕೇವಲ 473 ಎಸೆತಗಳಲ್ಲಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರೆ. ಈ ಮೂಲಕ ಮಿಚೆಲ್ ಓವನ್ (533 ಎಸೆತ) ಮತ್ತು ಆ್ಯಂಡ್ರ್ಯೂ ಸಿಮನ್ಸ್ (558 ಎಸೆತ) ಅವರನ್ನು ಹಿಂದಿಕ್ಕಿದ್ದಾರೆ.
- ಇನ್ನಿಂಗ್ಸ್‌ನಲ್ಲಿ ಟಿ20ಗಳಲ್ಲಿ 1000 ರನ್ ಗಳಿಸಿದ ನಾಲ್ಕನೇ ವೇಗದ ಆಟಗಾರರಾಗಿ ವೈಭವ್ ಹೊರಹೊಮ್ಮಿದ್ದಾರೆ. ಕೇವಲ 26 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಅವರದ್ದಾಗಿದೆ.
- ಐಪಿಎಲ್‌ನಲ್ಲಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ದಾಖಲೆಯೂ ವೈಭವ್ ಹೆಸರಿಗೆ ಸೇರಿದೆ. ವೈಭವ್ ಮೂರು ಬಾರಿ ಈ ಸಾಧನೆಗೈದಿದ್ದಾರೆ ಎಂಬುದು ಗಮನಾರ್ಹ.
ಕೇವಲ 15 ವರ್ಷಕ್ಕೆ ಈ ಮಟ್ಟಿಗಿನ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ, ಸದ್ಯ ಐಪಿಎಲ್‌ನಲ್ಲಿ ಒಬ್ಬ ಸ್ಟಾರ್ ಆಟಗಾರನಾಗಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕು ಹಲವು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ವೈಭವ್, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರೇ ನನ್ನ ಮುಂದೆ ಏನೇನೂ ಅಲ್ಲ ಎಂಬಂತೆ ಆಡುತ್ತಿರುವುದು ಕ್ರಿಕೆಟ್ ಪ್ರಿಯರ ಮನಸೂರೆಗೊಳಿಸಿದೆ. ಬೇಬಿ ಬಾಸ್ರಿಂದ ಇದೇ ರೀತಿ ಪ್ರದರ್ಶನ ಬಂದರೆ, ಶೀಘ್ರವೇ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತ ಎಂಬ ಮಾತುಗಳು ಸಹ ಕೇಳಿಬಂದಿವೆ,(ಏಜೆನ್ಸೀಸ್).