ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ
- ತ್ರಿಕೋನ ಸರಣಿಯ ಫೈನಲ್‌ನಲ್ಲಿ ಶ್ರೀಲಂಕಾ ಎದುರು ವೈಭವ್ ಅಬ್ಬರ
- ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿದ ವೈಭವ್ ಸೂರ್ಯವಂಶಿ
- ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್
Vaibhav Sooryavanshi: ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 94 ರನ್ ರಚ್ಚಿದ ವಂಡರ್ ಕಿಡ್, ತಮ್ಮನ್ನು ಕೆಣಕಿದ ಲಂಕಾ ಪಡೆಯ ಬೌಲರ್ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ. ಇದಕ್ಕೂ ಮೊದಲು ಕ್ಯಾಪ್ಟನ್ ತಿಲಕ್ ವರ್ಮಾ ಹೇಳಿದ ಮಾತನ್ನು ಕಡೆಗೂ ವೈಭವ್ ಉಳಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ವೈಭವ್ರನ್ನು ಕೆಣಕಿದ್ದ ಲಂಕಾ ಆಟಗಾರರು, ಮೈದಾನದಲ್ಲೇ ಸ್ಟಾರ್ ಕಿಡ್ನ ಕಿಚ್ಚಾಯಿಸಿದ್ದರು. ಆದರೆ, ಇಂದಿನ ಅಂತಿಮ ಕಾಳಗದಲ್ಲಿ ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ, ಬರೋಬ್ಬರಿ 324.14 ಸ್ಟ್ರೈಕ್ರೇಟ್ನಲ್ಲಿ 10 ಬೌಂಡರಿ, 8 ಸಿಕ್ಸರ್ಸಹಾಯದಿಂದ 94 ರನ್ ಸಿಡಿಸಿ ಶತಕದಿಂದ ವಂಚಿತರಾದರು. ಕೇವಲ ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸುತ್ತಿದ್ದ ವೈಭವ್, 50 ಓವರ್ನಲ್ಲಿಯೂ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದನ್ನು ನೋಡಿ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ.
ವಿಶ್ವ ದಾಖಲೆ
50 ಓವರ್ ಕ್ರಿಕೆಟ್ನಲ್ಲಿ ಕೇವಲ 11 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ವೈಭವ್, ಅತ್ಯಂತ ವೇಗವಾಗಿ ಅರ್ಧಶತಕ ದಾಖಲಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ (ಲಿಸ್ಟ್-ಎ ಕ್ರಿಕೆಟ್) ಅರ್ಧಶತಕ ಪೂರೈಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ದಾಖಲೆ ಈಗ ವೈಭವ್ ಹೆಸರಿಗೆ ಸೇರಿರುವುದು ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
ಶ್ರೀಲಂಕಾ ವಿರುದ್ಧ ಕಳೆದ ರೋಚಕ ಸೂಪರ್ ಓವರ್ ಹಂತದ ಪಂದ್ಯದಲ್ಲಿ ವೈಭವ್ ಮತ್ತು ಶ್ರೀಲಂಕನ್ ಆಟಗಾರ ವಿಶೆನ್ ಹಲಂಬಗೆ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ, ಮಾತಿಗೆ ಮಾತು ಬೆಳೆದು, ಪರಸ್ಪರ ತಳ್ಳಾಟ ಕೂಡ ನಡೆಯಿತು. ಇದು ದೊಡ್ಡ ವಿವಾದಕ್ಕೂ ಕಾರಣವಾಯಿತು. ಶ್ರೀಲಂಕಾ ಆಟಗಾರರ ಮಾತಿನಿಂದ ಮನನೊಂದ ವೈಭವ್‌ಗೆ ತಂಡದ ನಾಯಕ ತಿಲಕ್ ವರ್ಮಾ ಒಂದು ಮಹತ್ವದ ಸಲಹೆಯನ್ನು ನೀಡಿದ್ದರು. ಯಾವುದೇ ಕಾರಣಕ್ಕೂ ಮುಂದಿನ ಪಂದ್ಯದಲ್ಲಿ ನೀನು ಬ್ಯಾಕ್ ಆಗಬಾರದು. ನಿನ್ನ ತನದಲ್ಲಿಯೇ ಆಡಬೇಕು. ನಿನಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದರು. ಕಡೆಗೂ ಆ ಮಾತಿನಂತೆಯೇ ವೈಭವ್ ಆಡಿರುವುದು ಕ್ಯಾಪ್ಟನ್ಗೆ ಖುಷಿ ತಂದಿದೆ.
ಪಂದ್ಯಕ್ಕೂ ಮುನ್ನ ತಿಲಕ್ ಹೇಳಿದ್ದೇನು?
"ನಾನು ವೈಭವ್‌ಗೆ ತನ್ನ ಸಹಜ ಆಟವನ್ನು ಮುಂದುವರಿಸಲು ಮತ್ತು ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆ, ಆಟವನ್ನು ಎಂಜಾಯ್ ಮಾಡಲು ಹೇಳಿದ್ದೇನೆ. ಈ ವಯಸ್ಸಿನಲ್ಲಿ, ಅವನು ಹೊಸ ವಿಷಯಗಳನ್ನು ಕಲಿಯಬೇಕು ಮತ್ತು ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರಬೇಕು. ಇಲ್ಲಿಯವರೆಗೆ ಆತ ಸಾಧಿಸಿರುವ ಎಲ್ಲಾ ಯಶಸ್ಸುಗಳು ಪಾಸಿಟಿವ್ ಮನೋಭಾವದಿಂದ ಆಡುವುದರಿಂದ ಬಂದಿವೆ. ಹೀಗಿರುವಾ, ಈಗ ಆ ಶೈಲಿಯನ್ನು ಬದಲಾಯಿಸುವ ಅಗತ್ಯವಿಲ್ಲ" ಎಂದು ತಿಲಕ್ ವರ್ಮಾ 'ಸ್ಪೋರ್ಟ್‌ಸ್ಟಾರ್' ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.