ವೈಭವ್ ಸೂರ್ಯವಂಶಿ ಸ್ಫೋಟಕ ಆಟ
- ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ನಲ್ಲಿ ವೈಭವ್ ಅಬ್ಬರ
- ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ವಂಡರ್ ಕಿಡ್
- 50 ಓವರ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಸೂರ್ಯವಂಶಿ
Vaibhav Sooryavanshi: ಭಾರತ ಎ ಮತ್ತು ಶ್ರೀಲಂಕಾ ಎ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ವೈಭವ್ರನ್ನು ಕೆಣಕಿದ್ದ ಲಂಕಾ ಆಟಗಾರರು, ಹೋಗು ಮನೆಗೆ ಹೋಗು ಎಂದು ಮೈದಾನದಲ್ಲೇ ಸ್ಟಾರ್ ಕಿಡ್ನ ಕಿಚ್ಚಾಯಿಸಿದ್ದರು. ಆದರೆ, ಇಂದಿನ ಅಂತಿಮ ಕಾಳಗದಲ್ಲಿ ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ತಾವೇನು? ತಮ್ಮ ಸಾಮರ್ಥ್ಯವೇನು? ಎಂಬುದನ್ನು ಸಾಬೀತುಪಡಿಸಿದ್ದಾರೆ. 324.14 ಸ್ಟ್ರೈಕ್ರೇಟ್ನಲ್ಲಿ 10 ಬೌಂಡರಿ, 8 ಸಿಕ್ಸರ್ಗಳನ್ನು ಬಾರಿಸಿದ ವೈಭವ್, ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿ ಶತಕದಿಂದ ವಂಚಿತರಾದರು.
ಭಾನುವಾರ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಅಂತಿಮ ಪಂದ್ಯದಲ್ಲಿ ವೈಭವ್ ಅವರ ಸ್ಫೋಟಕ ಆಟಕ್ಕೆ ಎದುರಾಳಿ ತಂಡದ ಆಟಗಾರರು ಅಕ್ಷರಶಃ ಬೆರಗಾಗಿದ್ದಾರೆ. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್, 10 ಬೌಂಡರಿ, 8 ಸಿಕ್ಸರ್ ಸಹಾಯದಿಂದ 94 ರನ್ ಕಲೆಹಾಕಿರುವುದು ಈಗ ದಾಖಲೆಗೆ ಸಾಕ್ಷಿಯಾಗಿದೆ. ಈ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದ ಆಟಗಾರನಾಗಿ ವೈಭವ್ ಮಿಂಚಿದ್ದಾರೆ.
ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡರೂ, 324.14ರ ಸ್ಟ್ರೈಕ್ ರೇಟ್‌ನೊಂದಿಗೆ ಅವರು ಲಂಕಾ ಬೌಲರ್‌ಗಳನ್ನು ಬೆಂಡೆತ್ತಿದ ರೀತಿಗೆ ಇಡೀ ಕ್ರಿಕೆಟ್ ಜಗತ್ತೇ ಹುಬ್ಬೇರಿಸಿದೆ. ವೈಭವ್ ಪಂದ್ಯದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಲು ಶುರು ಮಾಡಿದರು. ಶಿರಾಜ್ ಎಸೆದ ಮೊದಲ ಚೆಂಡನ್ನು ಬೌಂಡರಿಗೆ ಹೊಡೆದ ವಂಡರ್ ಕಿಡ್, ಶ್ರೀಲಂಕನ್ ಪಡೆಯ ಯಾವ ಬೌಲರ್ಗಳಿಗೂ ಕರುಣೆ ತೋರದೆ ಹಿಗ್ಗಾಮುಗ್ಗಾ ಜಾಡಿಸಿರುವುದು ನೋಡುಗರಿಗೆ ಸಖತ್ ಮಜಾ ನೀಡಿದೆ.