ಟೀಮ್​ ಇಂಡಿಯಾದಲ್ಲಿ ವೈಭವ್ ಎಂಟ್ರಿಗೆ ಮುಹೂರ್ತ ಫಿಕ್ಸ್​: ಕಾಲಿಟ್ಟರೆ ಮೊದಲು ಉಡೀಸ್​ ಆಗೋದು ಈ ದಾಖಲೆ! Vaibhav Sooryavanshi  
ಕ್ರಿಕೆಟ್

ಟೀಮ್​ ಇಂಡಿಯಾದಲ್ಲಿ ವೈಭವ್ ಎಂಟ್ರಿಗೆ ಮುಹೂರ್ತ ಫಿಕ್ಸ್​: ಕಾಲಿಟ್ಟರೆ ಮೊದಲು ಉಡೀಸ್​ ಆಗೋದು ಈ ದಾಖಲೆ! Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹದಿನೈದು ವರ್ಷದ ವೈಭವ್ ಸೂರ್ಯವಂಶಿ
  • ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ
  • ವೈಭವ್ ಅವರ ಬ್ಯಾಟಿಂಗ್​ ಪ್ರದರ್ಶನವನ್ನು ನೋಡಿ ಮನಸಾರೆ ಹೊಗಳಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್
  • ಟೀಮ್ ಇಂಡಿಯಾಗೆ ಕಿರಿಯ ಆಟಗಾರನಾಗಿ ಪಾದಾರ್ಪಣೆ ಮಾಡಲು ವೈಭವ್​ ಅರ್ಹರು ಎಂದ ಅರುಣ್ ಧುಮಾಲ್
ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್​ ಬ್ಯಾಟರ್​ ವೈಭವ್ ಸೂರ್ಯವಂಶಿ ( Vaibhav Sooryavanshi ) ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್​ನಲ್ಲೂ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಶುಕ್ರವಾರ ಗುವಾಹಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಅವರು ಬಿರುಗಾಳಿಯ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಜೋಶ್​ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್‌ರಂತಹ ವಿಶ್ವ ದರ್ಜೆಯ ಬೌಲರ್‌ಗಳಿಗೆ ವೈಭವ್ ಬೆವರಿಳಿಸಿದರು. ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 78 ರನ್ ಗಳಿಸುವ ಮೂಲಕ ಆರೆಂಜ್​ ಕ್ಯಾಪ್​ ಅನ್ನು ತಮ್ಮ ಮುಡಿಗೇರಿಸಿಕೊಂಡರು.
ಅಂದಹಾಗೆ, ಇಲ್ಲಿಯವರೆಗೆ ಸೂರ್ಯವಂಶಿ ಆಡಿರುವ 4 ಪಂದ್ಯಗಳಲ್ಲಿ 200 ರನ್ ಗಳಿಸಿದ್ದಾರೆ. ಈ ಮೂಲಕ ಆರೆಂಜ್​ ಕ್ಯಾಪ್​ ಅನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ವೈಭವ್​ ಅವರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೋಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ವೈಭವ್​ ಅವರನ್ನು ಮನಸಾರೆ ಹೊಗಳಿದರು.
ವೈಭವ್ ಒಬ್ಬ ಅದ್ಭುತ ಆಟಗಾರ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ಪ್ರತಿಭೆ ಹೊಂದಿರುವ ವ್ಯಕ್ತಿಯನ್ನು ನೋಡಿದ್ದು ನಾನು ಇದೇ ಮೊದಲು. ವೈಭವ್ ಖಂಡಿತವಾಗಿಯೂ ಟೀಮ್ ಇಂಡಿಯಾಗೆ ಕಿರಿಯ ಆಟಗಾರನಾಗಿ ಪಾದಾರ್ಪಣೆ ಮಾಡಲು ಅರ್ಹರು ಎಂದು ಧುಮಾಲ್ ಹೇಳಿದ್ದಾರೆ.
ಅಂದಹಾಗೆ, ವೈಭವ್ ಸೂರ್ಯವಂಶಿ ಇತ್ತೀಚೆಗೆ 15 ವರ್ಷಕ್ಕೆ ಕಾಲಿಟ್ಟಿದ್ದು, ಇದರೊಂದಿಗೆ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾದರ್ಪಣೆ ಮಾಡಲು ಅರ್ಹರಾಗಿದ್ದಾರೆ. ಅಲ್ಲದೆ, ಪ್ರಸ್ತುತ ಐಪಿಎಲ್​ನಲ್ಲಿ ಆಡುತ್ತಿರುವ ಪರಿಯನ್ನು ನೋಡಿದರೆ, ವೈಭವ್​ ಟೀಮ್​ ಇಂಡಿಯಾ ಸೇರುವುದು ಪಕ್ಕಾ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ಇನ್ನು ಪ್ರಸಕ್ತ ಐಪಿಎಲ್ ಟೂರ್ನಮೆಂಟ್​ ಮುಗಿದ ಬಳಿಕ ಭಾರತೀಯ ತಂಡವು ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಅಜಿತ್ ಅಗರ್ಕರ್ ಮತ್ತು ಅವರ ತಂಡ, ವೈಭವ್ ಅವರ ಪ್ರದರ್ಶನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಟೂರ್ನಿಯುದ್ದಕ್ಕೂ ವೈಭವ್​ ಪ್ರದರ್ಶನ ಹೀಗೆ ಮುಂದುವರಿದರೆ ಟೀಮ್​ ಇಂಡಿಯಾಗೆ ಲಗ್ಗೆ ಇಡುವುದರಲ್ಲಿ ಎರಡು ಮಾತೇ ಇಲ್ಲ.
ಒಂದು ವೇಳೆ ಮುಂಬರುವ ಐರ್ಲೆಂಡ್ ಸರಣಿಗೆ ವೈಭವ್ ಆಯ್ಕೆಯಾದರೆ, ಮೊದಲು ಉಡೀಸ್​ ಆಗೋದೆ ಕ್ರಿಕೆಟ್​ ದಂತಕತೆ ಸಚಿನ್​ ಅವರ ದಾಖಲೆ. 16 ವರ್ಷ 205 ದಿನಗಳಲ್ಲಿ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ವೈಭವ್​ ಅವರು ಮುರಿಯಲಿದ್ದಾರೆ, (ಏಜೆನ್ಸೀಸ್​).