ಮೈದಾನದ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರಿಟ್ಟ ವೈಭವ್​ ಸೂರ್ಯವಂಶಿ... ಓಡಿ ಬಂದ ಕೆಕೆಆರ್​ ಆಟಗಾರ! Vaibhav Sooryavanshi  
ಕ್ರಿಕೆಟ್

ಮೈದಾನದ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರಿಟ್ಟ ವೈಭವ್​ ಸೂರ್ಯವಂಶಿ... ಓಡಿ ಬಂದ ಕೆಕೆಆರ್​ ಆಟಗಾರ! Vaibhav Sooryavanshi

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಭಾರತದಲ್ಲಿ ನಡೆಯುತ್ತಿದೆ 19ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​
  • ಮೊದಲ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್​ಗೆ ಸತತ 2ನೇ ಸೋಲು
  • ಕೆಕೆಆರ್​ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲುಂಡಿತು ಆರ್​ಆರ್​ ತಂಡ
  • ಸೋಲುಂಡ ಬೆನ್ನಲ್ಲೇ ಟೀಮ್​ ಇಂಡಿಯಾದ ಯುವ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಕಣ್ಣೀರು ಹಾಕಿದರು
Vaibhav Sooryavanshi : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಮೊದಲ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್, ಆ ಬಳಿಕ ಸತತ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಭಾನುವಾರ (ಏಪ್ರಿಲ್​ 19) ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಆರ್​ ತಂಡ ನಾಲ್ಕು ವಿಕೆಟ್‌ಗಳಿಂದ ಸೋಲುಂಡಿತು. ಇದು ಈ ಸೀಸನ್​ನಲ್ಲಿ ಕೆಕೆಆರ್ ತಂಡ ಪಡೆದ ಮೊದಲ ಗೆಲುವು ಅನ್ನೋದು ಗಮನಾರ್ಹ. ಈ ಪಂದ್ಯದ ನಂತರ ಟೀಮ್​ ಇಂಡಿಯಾದ ಯುವ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ವೈಭವ್ ಸೂರ್ಯವಂಶಿ (46 ರನ್​, 28 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಯಶಸ್ವಿ ಜೈಸ್ವಾಲ್ (39 ರನ್​, 29 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಆರಂಭದ ಹೊರತಾಗಿಯೂ ಒಂದೊಳ್ಳೆ ಮೊತ್ತ ಕಲೆಹಾಕುವಲ್ಲಿ ಆರ್​ಆರ್​ ತಂಡ ವಿಫಲವಾಯಿತು. ಕೆಕೆಆರ್ ಪರ ಕಾರ್ತಿಕ್ ತ್ಯಾಗಿ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದರು. ಸುನಿಲ್ ನರೈನ್ ಎರಡು ವಿಕೆಟ್ ಪಡೆದರು.
ಆರ್​ಆರ್​ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ, 19.4 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 156 ರನ್‌ಗಳ ಗುರಿಯನ್ನು ತಲುಪಿತು. ಕೆಕೆಆರ್ ಪರ ರಿಂಕು ಸಿಂಗ್ (ಅಜೇಯ 53 ರನ್​, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ರಿಂಕು ಬಿಟ್ಟರೆ, ಅನುಕುಲ್ ರಾಯ್ (ಅಜೇಯ 29) ಮತ್ತು ಕ್ಯಾಮರೂನ್ ಗ್ರೀನ್ (27) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರಾಜಸ್ಥಾನ ರಾಯಲ್ಸ್ ಪರ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್​, ಯಶ್ ರಾಜ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಈ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೊನೆಯ ಹಂತದವರೆಗೂ ಹೋರಾಡಿತು. ಆದರೆ, ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡ ಆರ್‌ಆರ್ ತಂಡದ ಸ್ಟಾರ್ ಓಪನರ್, ವೈಭವ್ ಸೂರ್ಯವಂಶಿ ಮೈದಾನದಲ್ಲಿ ಕಣ್ಣೀರಿಟ್ಟರು. ಪಂದ್ಯ ಮುಗಿದ ಬಳಿಕ ಮೈದಾನದ ಒಂದು ಮೂಲೆಯಲ್ಲಿ ಕುಳಿತು ವೈಭೂವ್​ ಅಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತರಹೇವಾರಿ ಕಾಮೆಂಟ್​ಗಳು ಬರುತ್ತಿವೆ.
ವೈಭವ್​ ಇನ್ನೂ ಚಿಕ್ಕ ಹುಡುಗ. ಈ ವಿಡಿಯೋ ನೋಡಿದರೆ ಆತ ಆಟವನ್ನು ಎಷ್ಟು ಪ್ರೀತಿಸುತ್ತಾನೆಂದು ಗೊತ್ತಾಗುತ್ತದೆ. ಯಾವುದೇ ಆಟದಲ್ಲಿ ಸೋಲು-ಗೆಲುವು ಸಹಜ. ಇದಕ್ಕೆಲ್ಲ ಅಳಬಾರದು ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ವೈಭವ್​ಗೆ ಸಾಂತ್ವಾನದ ಮಾತುಗಳನ್ನು ಹೇಳುತ್ತಿದ್ದಾರೆ. ಇನ್ನೂ ಈ ವೈರಲ್​ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).