ಟೀಮ್ ಇಂಡಿಯಾ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ 
ಕ್ರಿಕೆಟ್

ವೈಭವ್​ ಎಷ್ಟೇ ಶತಕ ಬಾರಿಸಿದ್ರೂ ಈ ದಾಖಲೆ ಮುರಿಯಲು ಸಾಧ್ಯವಿಲ್ಲ! 15 ವರ್ಷಗಳಲ್ಲಿ ಭಾರತದ ಯಾವ ಬ್ಯಾಟರ್​ನಿಂದಲೂ ಆಗಿಲ್ಲ

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಜಗತ್ತಿನ ಯುವ ಬ್ಯಾಟಿಂಗ್​ ಸೆನ್ಸೇಷನ್ ವೈಭವ್ ಸೂರ್ಯವಂಶಿ
  • ಎಷ್ಟೇ ಶತಕ ಬಾರಿಸಿದರೂ ಇದೊಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ
  • ಟೀಮ್ ಇಂಡಿಯಾದ ಮಾಜಿ ಆಟಗಾರನ ಹೆಸರಿನಲ್ಲಿದೆ ಆ ಅಪರೂಪದ ದಾಖಲೆ
ಮುಂಬೈ: ಕ್ರಿಕೆಟ್​ ಜಗತ್ತಿನ ಯುವ ಬ್ಯಾಟಿಂಗ್​ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಬಹುತೇಕರಿಗೆ ಗೊತ್ತೇ ಇದೆ. ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಅಬ್ಬರಿಸಲು ವೈಫಲ್ಯ ಕಂಡರೂ ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದಾಗ್ಯೂ, ಈ 15 ವರ್ಷದ ಆಟಗಾರ, ತನ್ನ ಸ್ಫೋಟಕ ಬ್ಯಾಟಿಂಗ್​ನಿಂದ ಎಷ್ಟೇ ಶತಕಗಳನ್ನು ಬಾರಿಸಿದ್ದೇ ಆದರೂ ಇದೊಂದು ದಾಖಲೆಯನ್ನು ಮುರಿಯಲು ಮಾತ್ರ ಸಾಧ್ಯವೇ ಇಲ್ಲ. 
ಅಷ್ಟಕ್ಕೂ, ಅದಕ್ಕೆ ಸಮಯವೂ ಮುಗಿದು ಹೋಗಿದೆ. ಏಕೆಂದರೆ, ಆ ದಾಖಲೆಯು ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ಹೆಸರಿನಲ್ಲಿ ಕಳೆದ 15 ವರ್ಷಗಳಿಂದ ಶಾಶ್ವತವಾಗಿ ಉಳಿದುಕೊಂಡಿದೆ. ಇತ್ತೀಚೆಗಷ್ಟೇ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ರಹಾನೆ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದರು. ರಹಾನೆ ಮೂರು ಸ್ವರೂಪಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರ ಎಂದೇ ಗುರುತಿಸಿಕೊಂಡವರು. ಟಿ20ಯಲ್ಲಿ ಅಜಿಂಕ್ಯಾ ಅವರು ಅಪರೂಪದ ದಾಖಲೆಯನ್ನು ಬರೆದಿದ್ದು, ಸ್ಫೋಟಕ ಬ್ಯಾಟಿಂಗ್​ನಿಂದ ಶತಕಗಳನ್ನು ಬಾರಿಸುವ ವೈಭವ್​ರಿಂದಲೂ ಅದು ಸಾಧ್ಯವಾಗಿಲ್ಲ ಎಂಬುದೇ ಆಶ್ಚರ್ಯ.
ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಹೆಸರು ಒಂದು ಬ್ರ್ಯಾಂಡ್​ ಆಗಿ ಬೆಳೆದು ನಿಂತಿದೆ. ವೈಭವ್ ಮೈದಾನಕ್ಕಿಳಿದರೆ ಒಂದಷ್ಟು ದಾಖಲೆಗಳು ಅವರ ಹೆಸರಿಗೆ ಸೇರುತ್ತೆ. ಅತಿ ಚಿಕ್ಕ ವಯಸ್ಸಿನಲ್ಲೇ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡುವುದರಿಂದ ಹಿಡಿದು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವೇಗದ ಶತಕ ಹಾಗೂ ಅರ್ಧ ಶತಕ ಗಳಿಸುವವರೆಗೆ ವೈಭವ್ ಉತ್ತುಂಗಕ್ಕೆ ಏರಿದ್ದಾರೆ. ಆದರೆ, ಎಂಟ್ರಿಯ ಪಂದ್ಯದಲ್ಲಿ ರಹಾನೆ ಮಾಡಿರುವ ಏಕೈಕ ಟಿ20 ದಾಖಲೆಯನ್ನು ಮುರಿಯುವ ಅವಕಾಶವನ್ನು ವೈಭವ್ ಈಗ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. 

ರಹಾನೆ ಹೆಸರಿನಲ್ಲಿರುವ ಆ ಅಪರೂಪದ ದಾಖಲೆ ಯಾವುದು?

ಅಜಿಂಕ್ಯ ರಹಾನೆ ಅವರು ಟಿ20 ಅಂತಾರಾಷ್ಟ್ರೀಯ ಪದಾರ್ಪಣೆಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟಿ20 ಪಂದ್ಯದಲ್ಲಿ 61 ರನ್‌ಗಳ ಅದ್ಭುತ ಇನ್ನಿಂಗ್ಸ್ ಗಳಿಸಿದರು. ಕಳೆದ 15 ವರ್ಷಗಳಲ್ಲಿ ಟೀಮ್​ ಇಂಡಿಯಾ ಪರ ಟಿ20 ಎಂಟ್ರಿಕೊಟ್ಟ ಯಾವ ಆಟಗಾರನೂ ಈ ಸ್ಕೋರ್​ಗಿಂತ ಹೆಚ್ಚು ಬಾರಿಸಲು ಆಗಿಲ್ಲ.
ಮತ್ತೊಂದೆಡೆ, ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಆದರೆ, ಚೊಚ್ಚಲ ಪಂದ್ಯದಲ್ಲಿ ವೈಭವ್ ಕೇವಲ 14 ರನ್‌ಗೆ ಔಟಾಗುವ ಮೂಲಕ ರಹಾನೆ ಅವರ ಅಪರೂಪದ ದಾಖಲೆಯನ್ನು ಮುರಿಯುವ ಅವಕಾಶ ಕಳೆದುಕೊಂಡರು. ಹೀಗಾಗಿ, ತಮ್ಮ ಕರಿಯರ್​ನಲ್ಲಿ ಎಷ್ಟೇ ವೇಗದ ಅರ್ಧಶತಕ ಮತ್ತು ಶತಕಗಳನ್ನು ದಾಖಲಿಸಿದರೂ, ರಹಾನೆ ಸೆಟ್​ ಮಾಡಿರುವ ದಾಖಲೆಯನ್ನು ಮುರಿಯಲು ಸಾಧ್ಯವಿಲ್ಲ. ಇದನ್ನು ಮುರಿಯಲು ಮತ್ತೊಬ್ಬ ಅಜಿಂಕ್ಯ ರಹಾನೆಯೇ ಬರಬೇಕಿದೆ,(ಏಜೆನ್ಸೀಸ್).