ವೈಭವ್ ಇದನ್ನು ಇಲ್ಲಿಗೆ ಬಿಟ್ಟುಬಿಡು... ವಂಡರ್ ಕಿಡ್ ಸೂರ್ಯವಂಶಿಗೆ ಕ್ರಿಕೆಟ್ ತಜ್ಞರ ಖಡಕ್ ವಾರ್ನಿಂಗ್! Vaibhav Sooryavanshi
- ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರು ಅನಿರೀಕ್ಷಿತ ವಿವಾದಕ್ಕೆ ಸಿಲುಕಿದ್ದಾರೆ
- ಲಂಕಾ ಆಟಗಾರ ಮತ್ತು ವೈಭವ್ ನಡುವೆ ನಡೆದ ಜಟಾಪಟಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ
- ಅತ್ಯಂತ ಕೋಪದಲ್ಲಿದ್ದ ವೈಭವ್ ಅವರು ಶ್ರೀಲಂಕಾ ಆಟಗಾರರ ಕಡೆಗೆ ಆಕ್ಷೇಪಾರ್ಹ ಸನ್ನೆಗಳನ್ನು ಮಾಡುತ್ತಾ ನಡೆದರು
- ಹಿರಿಯ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ವೈಭವ್ ಅವರ ವರ್ತನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ
Vaibhav Sooryavanshi : ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಪ್ರಮುಖ ತಿರುವು ಪಡೆದುಕೊಳ್ಳುವ ಮುನ್ನವೇ ಶ್ರೀಲಂಕಾದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದರಿಂದ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರು ವಿವಾದಕ್ಕೆ ಸಿಲುಕಿದ್ದಾರೆ.
ಮುಂಬರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ವೈಭವ್ ಅವರು ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಮಾನಸಿಕವಾಗಿ ಗಟ್ಟಿಯಾಗಲು ವೈಭವ್ ಅವರನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಾಗಿದೆ. ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯುತ್ತಿದೆ. ಬೇಸರದ ಸಂಗತಿ ಏನೆಂದರೆ, ಈ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಸೂರ್ಯವಂಶಿ ತಮ್ಮ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಐಪಿಎಲ್ 2026ರ ಸೀಸನ್ನಲ್ಲಿ ದಾಖಲೆ ಮಟ್ಟದ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದ ಅವರನ್ನು ಏಕಕಾಲದಲ್ಲಿ ಮೂರು ಟಿ20 ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಸೋಮವಾರ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ 'ಎ' ತಂಡವು ಸೂಪರ್ ಓವರ್‌ನಲ್ಲಿ ಸೋಲನ್ನನುಭವಿಸಿದ ಬಳಿಕ, ಲಂಕಾ ಆಟಗಾರ ಮತ್ತು ವೈಭವ್ ನಡುವೆ ನಡೆದ ಜಟಾಪಟಿ ಇದೀಗ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಸೂಪರ್ ಓವರ್‌ನಲ್ಲಿ ಗೆಲ್ಲಲು 17 ರನ್‌ಗಳ ಅಗತ್ಯವಿದ್ದಾಗ, ಕಗುತ ಮತುಲನ್ ಬೌಲಿಂಗ್ ಎದುರಿಸಿದ ಭಾರತ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಯಿತು. ವೈಭವ್ ತಾವು ಎದುರಿಸಿದ ಮೂರು ಎಸೆತಗಳಲ್ಲಿ ಒಂದು ಬೌಂಡರಿ ಒಳಗೊಂಡಂತೆ 6 ರನ್ ಬಾರಿಸಿದರೂ, ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ನಂತರ ಶ್ರೀಲಂಕಾ ಆಟಗಾರರು ವಿಜಯೋತ್ಸವ ಆಚರಿಸುತ್ತಿದ್ದಾಗ, ವೈಭವ್ ಮತ್ತು ಅವರ ಜತೆಗಾರ ಸೂರ್ಯಂಶ್ ಶೆಡ್ಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಮತುಲನ್ ಸೇರಿದಂತೆ ಕೆಲವು ಶ್ರೀಲಂಕಾ ಆಟಗಾರರೊಂದಿಗೆ ಆರಂಭವಾದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡಿತು. ಇದರಿಂದ ತೀವ್ರ ಆಕ್ರೋಶಗೊಂಡ ವೈಭವ್, ಲಂಕಾ ಆಟಗಾರನೊಬ್ಬನನ್ನು ಕೈಯಿಂದ ತಳ್ಳುತ್ತಿರುವುದು ಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಆ ಸಮಯದಲ್ಲಿ ಶ್ರೀಲಂಕಾದ ಹಿರಿಯ ಆಟಗಾರ ನಿರೋಷನ್ ಡಿಕ್ವೆಲ್ಲಾ ತಕ್ಷಣ ಮಧ್ಯಪ್ರವೇಶಿಸಿ ವೈಭವ್ ಅವರನ್ನು ಪಕ್ಕಕ್ಕೆ ಎಳೆದಿದ್ದರಿಂದ ದೊಡ್ಡ ಮಟ್ಟದ ಗಲಾಟೆ ತಪ್ಪಿತು.
ಆದಾಗ್ಯೂ, ಅತ್ಯಂತ ಕೋಪದಲ್ಲಿದ್ದ ವೈಭವ್ ಅವರು ಶ್ರೀಲಂಕಾ ಆಟಗಾರರ ಕಡೆಗೆ ಆಕ್ಷೇಪಾರ್ಹ ಸನ್ನೆಗಳನ್ನು ಮಾಡುತ್ತಾ ಅಲ್ಲಿಂದ ಹೊರನಡೆದರು. ಈ ನಡವಳಿಕೆಯೇ ಈಗ ಹಿರಿಯ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ವೈಭವ್ ಅವರ ವರ್ತನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಒಬ್ಬ ಅತ್ಯುತ್ತಮ ಆಟಗಾರನಿಗೆ ಕೇವಲ ಆಟದ ಕೌಶಲ್ಯವಷ್ಟೇ ಮುಖ್ಯವಲ್ಲ, ಶಿಸ್ತು ಮತ್ತು ತಾಳ್ಮೆ ಕೂಡ ಅಷ್ಟೇ ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಬೇಕಾದರೆ ವೈಭವ್ ಈಗಿನಿಂದಲೇ ಮೈದಾನದಲ್ಲಿ ಶಿಸ್ತು ಹಾಗೂ ಸಂಯಮವನ್ನು ರೂಢಿಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಈ ಪಂದ್ಯದಲ್ಲಿ ವೈಭವ್ ತಮ್ಮ ತಾಳ್ಮೆ ಕಳೆದುಕೊಂಡಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ, ಶ್ರೀಲಂಕಾ ತಂಡದ ಸೂಪರ್ ಓವರ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅಂಪೈರ್ ನೀಡಿದ ನೋ-ಬಾಲ್ ತೀರ್ಪಿಗೆ ಭಾರತ ತಂಡದ ನಾಯಕ ತಿಲಕ್ ವರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಈಗಾಗಲೇ ಪ್ಯಾಡ್ ಧರಿಸಿ ಕ್ರೀಸ್‌ಗೆ ಇಳಿಯಲು ಸಿದ್ಧರಾಗಿದ್ದ ವೈಭವ್, ನೇರವಾಗಿ ಮೈದಾನದೊಳಗೆ ನುಗ್ಗಿ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಹೆಡ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಅವರೇ ತಕ್ಷಣ ಮಧ್ಯಪ್ರವೇಶಿಸಿ ವೈಭವ್ ಅವರನ್ನು ಪಕ್ಕಕ್ಕೆ ಕರೆದೊಯ್ಯಬೇಕಾಯಿತು. ಈ ಇಡೀ ವಿವಾದದ ಪೂರ್ಣ ಕಾರಣಗಳು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ವೈಭವ್ ಸೂರ್ಯವಂಶಿ ಈಗ ಐಸಿಸಿಯಿಂದ (ICC) ಕಠಿಣ ಶಿಸ್ತು ಕ್ರಮ ಎದುರಿಸುವ ಭೀತಿಯಲ್ಲಿದ್ದಾರೆ.
ಹಿಂದೆ 2024ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿ, ಎದುರಾಳಿ ಆಟಗಾರನಿಗೆ ಮೈ ತಾಗಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಐಸಿಸಿ ಶೇ. 20 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿತ್ತು. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12ರ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರರು, ಅಂಪೈರ್‌ಗಳು ಅಥವಾ ಇತರ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ದೈಹಿಕ ಸಂಪರ್ಕ ಹೊಂದುವುದು ಗಂಭೀರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ, ಪಂದ್ಯದ ರೆಫರಿ ಪ್ರದೀಪ್ ಜಯಪ್ರಕಾಶ್ ಅವರು ಈ ಯುವ ಆಟಗಾರನಿಗೆ ಕೇವಲ ಎಚ್ಚರಿಕೆ ನೀಡಿ ಬಿಡುತ್ತಾರಾ ಅಥವಾ ಅಧಿಕೃತ ದಂಡ ವಿಧಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ವೈಭವ್ ಸದ್ಯದಲ್ಲೇ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಇಂತಹ ವಿವಾದಗಳು ಅವರ ಭವಿಷ್ಯಕ್ಕೆ ಮುಳ್ಳಾಗಬಾರದು ಎಂಬುದು ಅಭಿಮಾನಿಗಳ ಆಶಯವಾಗಿದೆ. ಆದರೆ ಭವಿಷ್ಯದ ಹಾದಿ ಸುಗಮವಾಗಿರಬೇಕಾದರೆ ಮೈದಾನದಲ್ಲಿ ಅತಿಯಾದ ಕೋಪ ಖಂಡಿತಾ ಸಹಾಯ ಮಾಡದು ಎಂಬುದಂತೂ ನಿಜ, (ಏಜೆನ್ಸೀಸ್).