ಜಿಂಬಾಬ್ವೆ ಪ್ರವಾಸ, ಏಷ್ಯಾಡ್ಗೆ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಮುಖ್ಯ ಕೋಚ್!
ನವದೆಹಲಿ: ಮುಂಬರುವ ಜಿಂಬಾಬ್ವೆ ಪ್ರವಾಸ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (ಸಿಒಇ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (V V S Laxman) ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ರಾಷ್ಟ್ರೀಯ ತಂಡದ ಕಾಯಂ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.
ಹಾಲಿ ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿ ಜುಲೈ 19ಕ್ಕೆ ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಜುಲೈ 23ರಿಂದ ಜಿಂಬಾಬ್ವೆಯಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇನ್ನು ಏಷ್ಯನ್ ಗೇಮ್ಸ್ ಜಪಾನ್ನಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ. ಏಷ್ಯಾಡ್ ಮುಗಿಯುವುದಕ್ಕೆ ಮುನ್ನವೇ ಸೆಪ್ಟೆಂಬರ್ 27ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ನಡೆಯಲಿದೆ. ಹೀಗಾಗಿ ತರಬೇತಿಯ ಜವಾಬ್ದಾರಿಯನ್ನು ಹಂಚಿಕೆ ಮಾಡುವುದು ಬಿಸಿಸಿಐಗೆ ಅನಿವಾರ್ಯವೂ ಆಗಿದೆ.
ಲಕ್ಷ್ಮಣ್ ಜತೆಗೆ ಬೌಲಿಂಗ್ ಕೋಚ್ ಆಗಿ ಮಾಜಿ ಸ್ಪಿನ್ನರ್ ಹಾಗೂ ಕನ್ನಡಿಗ ಸುನೀಲ್ ಜೋಶಿ, ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ಕಾರ್ಯನಿರ್ವಹಿಸಲಿದ್ದಾರೆ.
ಬಿಸಿಸಿಐ ಈ ರೀತಿ ಸತತ ಕ್ರಿಕೆಟ್ ಸರಣಿಗಳ ನಡುವೆ ರಾಷ್ಟ್ರೀಯ ತಂಡದ ಕೋಚ್ಗೆ ವಿಶ್ರಾಂತಿ ನೀಡಿ ಲಕ್ಷ್ಮಣ್ಗೆ ಹಂಗಾಮಿ ಜವಾಬ್ದಾರಿ ವಹಿಸುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದ ಸಮಯದಲ್ಲೂ ಲಕ್ಷ್ಮಣ್ ಕೆಲ ಕಿರು ಸರಣಿಗಳಿಗೆ ಹಂಗಾಮಿ ಕೋಚ್ ಆಗಿದ್ದರು. ಅಲ್ಲದೆ ಕಳೆದ ಏಷ್ಯಾಡ್ನಲ್ಲಿ ಅವರ ಮಾರ್ಗದರ್ಶನದಲ್ಲೇ ಭಾರತ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು.