ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಉಸ್ಮಾನ್ ತಾರಿಕ್ ( Usman Tariq ) ನಿಂದ ಸೊಕ್ಕಿನ ಮಾತು
- ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಶಿವರಾತ್ರಿ ಹಬ್ಬದಂದೇ ನಡೆಯಲಿದೆ
- ಈ ದಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ
- ನಿರ್ಣಾಯಕ ಪಂದ್ಯಕ್ಕಾಗಿ ಎರಡೂ ತಂಡಗಳು ಭಾರಿ ಸಿದ್ಧತೆಯಲ್ಲಿ ತೊಡಗಿವೆ
- ಇದೇ ಸಂದರ್ಭದಲ್ಲಿ ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ
Usman Tariq : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಶಿವರಾತ್ರಿ ಹಬ್ಬದಂದೇ ನಡೆಯಲಿದೆ. ಈ ದಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಎರಡೂ ತಂಡಗಳು ಭಾರಿ ಸಿದ್ಧತೆಯಲ್ಲಿ ತೊಡಗಿವೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಇಂದು (ಫೆ.12) ನಮೀಬಿಯಾ ತಂಡವನ್ನು ಎದುರಿಸಿ, ಗೆಲುವಿನ ಉತ್ಸಾಹದಿಂದ ಪಾಕಿಸ್ತಾನದ ಕೋಟೆಯನ್ನು ಮುರಿಯಲು ಸಕಲ ಸಿದ್ಧತೆ ನಡೆಸುತ್ತಿದೆ.
ಅಂದಹಾಗೆ, ಫೆಬ್ರವರಿ 15 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾದ ಕೊಲಂಬೊ ವೇದಿಕೆಯಾಗಲಿದೆ. ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್, ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಒಂದು ಬಲವಾದ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ. ಹೀಗಾಗಿಯೇ, ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಜಂಬದ ಮಾತುಗಳನ್ನಾಡಿದ್ದಾರೆ. ಸದ್ಯ ಉಸ್ಮಾನ್ ತಾರಿಕ್ ಮಾಡಿದ ಕಾಮೆಂಟ್‌ಗಳು ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿವೆ.
ಮಾತಿನ ಸಮರ
ಅಂದಹಾಗೆ, ಟಿ20 ವಿಶ್ವಕಪ್ ಪಂದ್ಯಾವಳಿಯು ಅತ್ಯಂತ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಈಗಾಗಲೇ 15 ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಈ ಪಂದ್ಯಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇತ್ತೀಚಿನವರೆಗೂ ಈ ಪಂದ್ಯ ನಡೆಯುತ್ತದೋ? ಇಲ್ಲವೋ? ಎಂಬ ಅನುಮಾನ ಇತ್ತು. ಅಂತಿಮವಾಗಿ ಪಾಕಿಸ್ತಾನ ಯುಟರ್ನ್ ಹೊಡೆದು ಪಂದ್ಯವನ್ನು ಆಡುವುದಾಗಿ ಒಪ್ಪಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಖಚಿತವಾದ ಬೆನ್ನಲ್ಲೇ, ಎರಡೂ ತಂಡಗಳ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ. ಪಾಕಿಸ್ತಾನಿ ಕ್ರಿಕೆಟಿಗರು, ಟೀಮ್ ಇಂಡಿಯಾವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು, ಪಾಕಿಸ್ತಾನವನ್ನು ಪುಡಿಪುಡಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಾರಿಕ್ ಸಮರ್ಥನೆ
ಇದರ ನಡುವೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್, ಭಾರತದ ವಿರುದ್ಧದ ಪಂದ್ಯದ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಭಾರತೀಯರು ನನ್ನ ಬೌಲಿಂಗ್ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ನನ್ನ ವಿರುದ್ಧ ಭಾರತೀಯರು ಪಿತೂರಿ ಮಾಡುತ್ತಿದ್ದಾರೆ. ಆದರೆ, ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಸರಿಯಾಗಿದೆ ಎಂದು ತಾರಿಕ್ ಸಮರ್ಥನೆ ನೀಡಿದ್ದಾರೆ.
ಹೆಚ್ಚುವರಿ ಒತ್ತಡ
ಇದಿಷ್ಟೇ ಅಲ್ಲದೆ, ಭಾರತೀಯರು ನನ್ನ ಬೌಲಿಂಗ್‌ಗೆ ಹೆದರಿ ಸುಳ್ಳು ಪ್ರಚಾರ ಹರಡುತ್ತಿದ್ದಾರೆ. ಭಾರತದ ಆಟಗಾರರಿಗೆ ನನ್ನ ಬೌಲಿಂಗ್ನಿಂದ ಹೆಚ್ಚುವರಿ ಒತ್ತಡ ಇದೆ ಎಂದು ನಾನು ಭಾವಿಸುತ್ತೇನೆ. ನನ್ನ ಬಗ್ಗೆ ಆರೋಪ ಮಾಡುತ್ತಿರುವುದನ್ನು ನೋಡಿದರೆ, ನನ್ನ ಬೌಲಿಂಗ್ನಿಂದ ಅವರು ಹೆದರಿರಬಹುದು ಮತ್ತು ಅವರಿಗೆ ಹೆಚ್ಚುವರಿ ಒತ್ತಡ ಉಂಟಾಗಿರಬಹುದು ಎಂದು ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಹೇಳಿದ್ದಾರೆ. ಅಲ್ಲದೆ, ಫೆಬ್ರವರಿ 15 ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವಲಾಗುವುದು ಎಂಬ ಸೊಕ್ಕಿನ ಮಾತುಗಳನ್ನು ಆಡಿದ್ದಾರೆ.
ನನ್ನ ಬಗ್ಗೆ ಏನು ಚರ್ಚೆ ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಪಂದ್ಯದ ಮೇಲಷ್ಟೇ ನನ್ನ ಗಮನವನ್ನು ಹರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಉಸ್ಮಾನ್ ತಾರಿಕ್ ಹೇಳಿದ್ದಾರೆ, (ಏಜೆನ್ಸೀಸ್).