ಬ್ಯಾಟ್​ ಹಿಡಿದು ಉತ್ಸಾಹದಿಂದ ಬಂದ ರಾಹುಲ್​ ತೆವಾಟಿಯಾಗೆ ಶಾಕ್​ ಕೊಟ್ಟ ಅಂಪೈರ್ಸ್​! ಅಷ್ಟಕ್ಕೂ ಆಗಿದ್ದೇನು? Rahul Tewatia  
ಕ್ರಿಕೆಟ್

ಬ್ಯಾಟ್​ ಹಿಡಿದು ಉತ್ಸಾಹದಿಂದ ಬಂದ ರಾಹುಲ್​ ತೆವಾಟಿಯಾಗೆ ಶಾಕ್​ ಕೊಟ್ಟ ಅಂಪೈರ್ಸ್​! ಅಷ್ಟಕ್ಕೂ ಆಗಿದ್ದೇನು? Rahul Tewatia

ಪ್ರಮುಖ ಮುಖ್ಯಾಂಶಗಳು

  • ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಪಂಜಾಬ್ ಕಿಂಗ್ಸ್ ತಂಡ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಶುಭಾರಂಭ ಕಂಡಿದೆ
  • ನಿನ್ನೆ ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯದ ನಡುವೆ ಒಂದು ಕುತೂಹಲಕಾರಿ ಘಟನೆ ನಡೆಯಿತು
  • ಗುಜರಾತ್ ಟೈಟಾನ್ಸ್ ಆಟಗಾರ ರಾಹುಲ್ ತೆವಾಟಿಯಾಗೆ ಅಂಪೈರ್‌ಗಳು ಶಾಕ್ ನೀಡಿದರು
  • ರಾಹುಲ್​ ತೆವಾಟಿಯಾ ಅವರು ಮೈದಾನಕ್ಕೆ ತಂದ ಬ್ಯಾಟ್ ಐಸಿಸಿ ನಿಯಮಗಳ ಪ್ರಕಾರ ಇರಲಿಲ್ಲ
Rahul Tewatia : ನಿನ್ನೆ (ಮಾರ್ಚ್​ 31) ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯಗಳಿಸಿ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಈ ಪಂದ್ಯದ ನಡುವೆ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನೆಂದರೆ, ಗುಜರಾತ್ ಟೈಟಾನ್ಸ್ ಆಟಗಾರ ರಾಹುಲ್ ತೆವಾಟಿಯಾಗೆ ಅಂಪೈರ್‌ಗಳು ಶಾಕ್ ನೀಡಿದರು. ಏಕೆಂದರೆ, ತೆವಾಟಿಯಾ ಮೈದಾನಕ್ಕೆ ತಂದ ಬ್ಯಾಟ್ ಐಸಿಸಿ ನಿಯಮಗಳ ಪ್ರಕಾರ ಇರಲಿಲ್ಲ. ಹೀಗಾಗಿ, ಅವರಿಗೆ ಇನ್ನೊಂದು ಬ್ಯಾಟ್ ತರಲು ಸೂಚಿಸಲಾಯಿತು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂದಹಾಗೆ, ಈ ಘಟನೆ ಗುಜರಾತ್ ಟೈಟಾನ್ಸ್ ತಂಡದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ನಡೆಯಿತು. ವಾಷಿಂಗ್ಟನ್ ಸುಂದರ್ ಅವರನ್ನು ಕನ್ನಡಿಗೆ ವಿಜಯ್​ ಕುಮಾರ್​ ವೈಶಾಖ್ ಔಟ್ ಮಾಡಿದರು. ಕೂಡಲೇ ರಾಹುಲ್ ತೆವಾಟಿಯಾ ಕ್ರೀಸ್‌ಗೆ ಬಂದರು. ಆದರೆ, ಬರುವಾಗ ನಿಗದಿತ ಗಾತ್ರಕ್ಕಿಂತ ದೊಡ್ಡದಾದ ಬ್ಯಾಟ್ ಅನ್ನು ತಂದರು. ಹೀಗಾಗಿ, ಅಂಪೈರ್‌ಗಳು ನಡೆಸಿದ ಗೇಜ್ ಪರೀಕ್ಷೆಯಲ್ಲಿ ತೆವಾಟಿಯಾ ವಿಫಲರಾದರು. ಈ ಕಾರಣದಿಂದಾಗಿ, ಅವರು ಆ ಬ್ಯಾಟ್ ಅನ್ನು ಬಳಸಲು ಸಾಧ್ಯವಾಗಲಿಲ್ಲ. ಬಳಿಕ ತೆವಾಟಿಯಾ ಮತ್ತೊಂದು ಬ್ಯಾಟ್ ಹಿಡಿದು ಕ್ರೀಸ್​ಗೆ ಬಂದರು. 
ಅಂದಹಾಗೆ, ಕಳೆದ ಕೆಲವು ಐಪಿಎಲ್ ಸೀಸನ್‌ಗಳಿಂದ, ಆಟಗಾರರು ಕ್ರೀಸ್‌ಗೆ ಕಾಲಿಟ್ಟ ತಕ್ಷಣ ಅಂಪೈರ್‌ಗಳು ಗೇಜ್‌ಗಳ ಸಹಾಯದಿಂದ ಬ್ಯಾಟ್ಸ್​​ಮನ್​ಗಳ ಬ್ಯಾಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವ ಬ್ಯಾಟ್​ ಸುಲಭವಾಗಿ ಗೇಜ್​ ಮೂಲಕ ಹಾದುಹೋಗುತ್ತದೋ ಆ ಬ್ಯಾಟ್​ನಿಂದ ಆಡಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಬ್ಯಾಟ್​ ಗೇಜ್​ನಿಂದ ಹಾದುಹೋಗುವಲ್ಲಿ ಫೇಲ್​ ಆದರೆ, ಆ ಬ್ಯಾಟ್​ ಅನ್ನು ಬದಲಿಸಬೇಕಾಗುತ್ತದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತು. ಗುಜರಾತ್ ಪರ ಶುಭಮನ್ ಗಿಲ್ (39) ಮತ್ತು ಜೋಸ್ ಬಟ್ಲರ್ (38) ಸಮಾಧಾನಕರ ಬ್ಯಾಟಿಂಗ್ ಪ್ರದರ್ಶಿಸಿದರು. ಪಂಜಾಬ್ ಪರ ವಿಜಯ್ ಕುಮಾರ್ ವೈಶಾಖ್ ಮೂರು ವಿಕೆಟ್, ಯುಜ್ವೇಂದ್ರ ಚಾಹಲ್ ಎರಡು ವಿಕೆಟ್ ಮತ್ತು ಮಾರ್ಕೊ ಜಾನ್ಸೆನ್ ಒಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.1 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 163 ರನ್‌ಗಳ ಗುರಿಯನ್ನು ತಲುಪಿತು. ಪಂಜಾಬ್ ಪರ ಕೂಪರ್ ಕೊನಲ್ಲಿ (ಅಜೇಯ 72 ರನ್​, 44 ಎಸೆತ, 5 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರೆ, ಪ್ರಭ್ಸಿಮ್ರಾನ್ ಸಿಂಗ್ (37 ರನ್​, 24 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಗುಜರಾತ್ ಬೌಲರ್‌ಗಳಲ್ಲಿ ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಪಡೆದರೆ, ಕಾಗಿಸೊ ರಬಾಡ, ಅಶೋಕ್ ಶರ್ಮಾ, ರಶೀದ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).