ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು
- ಅಂಡರ್-19 ವಿಶ್ವಕಪ್‌ನಲ್ಲಿ ಬಾಂಗ್ಲಾಗೆ ಸೋಲುಣಿಸಿದ ಭಾರತ
- ಕೊನೆಯವರೆಗೂ ನಡೆದ ರೋಮಾಂಚಕ ಪಂದ್ಯದಲ್ಲಿ ಜಯ
- ಟೀಮ್ ಇಂಡಿಯಾ ಪರ ಮಿಂಚಿದ ವಿಹಾನ್, ವೈಭವ್ ಸೂರ್ಯವಂಶಿ ಅಮೋಘ ಕ್ಯಾಚ್
ಜಿಂಬಾಬ್ವೆ: ಪ್ರಸಕ್ತ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ಎರಡನೇ ಗೆಲುವು ದಾಖಲಿಸಿದೆ. ಶನಿವಾರ (ಜ.17) ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 18 ರನ್‌ಗಳ ರೋಚಕ ಜಯ ಸಾಧಿಸಿತು. ಅಂತಿಮವಾಗಿ ಡಿಎಲ್ಎಸ್ ವಿಧಾನದಲ್ಲಿ ಯುವ ಆಟಗಾರರ ತಂಡ ಗೆದ್ದಿದ್ದು ಗಮನಾರ್ಹ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಮಳೆಯ ಅಡಚಣೆ ಎದುರಾಯಿತು. ಹೀಗಾಗಿ, ಪಂದ್ಯವನ್ನು 49 ಓವರ್‌ಗಳಿಗೆ ಇಳಿಸಲಾಯಿತು. ಇದರ ಪರಿಣಾಮವಾಗಿ, ಭಾರತ 48.4 ಓವರ್‌ಗಳಲ್ಲಿ 238 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ನಲ್ಲಿ ತಂಡದ ಪರ ಅಭಿಗ್ಯಾನ್ ಕುಂದು (112 ಎಸೆತ, 80 ರನ್) ಮತ್ತು ವೈಭವ್ ಸೂರ್ಯವಂಶಿ (67 ಎಸೆತ, 72 ರನ್) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ಪಡೆ, 17.2 ಓವರ್‌ಗಳಲ್ಲಿ 88/2 ರನ್ ಗಳಿಸಿದಾಗ ಮಳೆ ಅಡ್ಡಿಪಡಿಸಿತು. ಈ ಹಿನ್ನೆಲೆ ಪಂದ್ಯವನ್ನು ಡಿಎಲ್ಎಸ್ ಮಾದರಿ ಅನುಸರಿಸುವ ಮೂಲಕ 29 ಓವರ್‌ಗಳಲ್ಲಿ 165 ರನ್‌ಗಳ ಗುರಿಯನ್ನು ನೀಡಲಾಯಿತು. ವಿರಾಮದ ಬಳಿಕ ಆಡಿದ ಬಾಂಗ್ಲಾದೇಶಕ್ಕೆ ಗೆಲ್ಲಲು 70 ಎಸೆತಗಳಲ್ಲಿ 75 ರನ್‌ಗಳ ಅಗತ್ಯವಿತ್ತು. ಈ ವೇಳೆ ಬಾಂಗ್ಲಾ ಗೆಲುವಿಗೆ ಹತ್ತಿರವಾಗುತ್ತಿದೆ ಎಂಬುದನ್ನು ಅರಿತ ವಿಹಾನ್ ಮಲ್ಹೋತ್ರಾ, ಮಾಡಿದ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ಕೊಟ್ಟು 4 ವಿಕೆಟ್ ಕಬಳಿಸಿದರು. ಈ ಮೂಲಕ ಬಾಂಗ್ಲಾ ಬ್ಯಾಟರ್ಗಳಿಗೆ ರನ್ ಗಳಿಸದಂತೆ ಕಟ್ಟಿಹಾಕಿದರು.
ವೈಭವ್ ಸೂರ್ಯವಂಶಿ ಅದ್ಭುತ ಕ್ಯಾಚ್...
26ನೇ ಓವರ್‌ನ ಎರಡನೇ ಎಸೆತದಲ್ಲಿ, ಸಮಿಯುನ್ ಬಶೀರ್ ಬಿರುಸಿನ ಹೊಡೆತಕ್ಕೆ ಮುಂದಾದರು. ತಕ್ಷಣವೇ ಕ್ಯಾಚ್ ಪಡೆಯಲು ಬೌಂಡರಿ ಲೈನ್ನತ್ತ ಓಡಿದ ವೈಭವ್ ಸೂರ್ಯವಂಶಿ, ಅದ್ಭುತ ಕ್ಯಾಚ್ ಹಿಡಿದದ್ದು ಹಲವರ ಗಮನ ಸೆಳೆಯಿತು. ಇದು ಬೇಬಿ ಬಾಸ್ ಮೇಲಿನ ನಿರೀಕ್ಷೆ ಹಾಗೂ ಭರವಸೆಗಳನ್ನು ದುಪ್ಪಟ್ಟಾಗಿಸಿದೆ.
ಯಾರು ಈ ಸ್ಟಾರ್ ಬೌಲರ್ ವಿಹಾನ್?
ಬ್ಯಾಟಿಂಗ್ನಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡ ವಿಹಾನ್ ಮಲ್ಹೋತ್ರಾ, ಕೇವಲ 7 (24 ಎಸೆತ) ರನ್ ಗಳಿಸಿದರು. ಆದರೆ, ಅದೇ ಬಾಂಗ್ಲಾ ಬ್ಯಾಟಿಂಗ್ಗಿಳಿದಾಗ ತಮ್ಮ ಬೌಲಿಂಗ್ನಲ್ಲಿ ಕಮಾಲ್ ಮಾಡಿದರು. 14 ರನ್ ಕೊಟ್ಟ 4 ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೂಲತಃ ಪಟಿಯಾಲದ ಮಲ್ಹೋತ್ರಾ, 19 ವರ್ಷದ ಎಡಗೈ ಬ್ಯಾಟ್ಸ್‌ಮನ್. ಭಾರತದ ಅಂಡರ್-19 ತಂಡಕ್ಕೆ ಈತ ಉಪನಾಯಕ. ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಗ್ರೂಪ್ ಮ್ಯಾಚ್ಗಳಲ್ಲಿ ತಂಡದ ಪರ ಆಡಿದ್ದಾರೆ, ಯುಎಇಯಲ್ಲಿ ನಡೆದ U-19 ಏಷ್ಯಾಕಪ್ ಮತ್ತು ಕಳೆದ ವರ್ಷ ಭಾರತದಲ್ಲಿ ನಡೆದ 50 ಓವರ್‌ಗಳ ತ್ರಿಕೋನ ಸರಣಿಯಲ್ಲಿ ತಂಡದ ಭಾಗವಾಗಿದ್ದರು.
ವಿಹಾನ್ ಟಾಪ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಡುವ ವಿಶಿಷ್ಟ ಬ್ಯಾಟರ್. ಈ ಎರಡು ಆರ್ಡರ್ಗಳಲ್ಲಿಯೂ ಅವರು ಉತ್ತಮವಾಗಿ ಆಡಿದ್ದಾರೆ. ಈ ಬಾರಿ ಕೆಳ ಕ್ರಮಾಂಕದಲ್ಲಿ ಆಡುತ್ತಿರುವ ವಿಹಾನ್, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮಾತ್ರೆಗೆ ಓಪನಿಂಗ್ ಬ್ಯಾಟ್ಸ್‌ಮನ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕಮಾಲ್ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ(ಏಜೆನ್ಸೀಸ್).