ಅಂಡರ್ 19 ಏಷ್ಯಾಕಪ್ ಗೆದ್ದಿದ್ದಕ್ಕೆ ಪಾಕಿಗಳ ಸಂಭ್ರಮಾಚರಣೆ
- ಹತ್ತೊಂಬತ್ತು ವರ್ಷದೊಳಗಿನವರ ಏಷ್ಯಾ ಕಪ್-2025 ಟೂರ್ನಮೆಂಟ್ನಲ್ಲಿ ಪಾಕಿಸ್ತಾನ ಗೆಲುವು
- ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸೋಲು
- ಅಂಡರ್-19 ಏಷ್ಯಾ ಕಪ್ ಟೂರ್ನಮೆಂಟ್ ಗೆದ್ದಿದ್ದಕ್ಕೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ
- ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಪಾಕಿಗಳ ಸಂಭ್ರಮಾಚರಣೆ
ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಅಂಡರ್-19 ಏಷ್ಯಾ ಕಪ್ ( U19 Asia Cup 2025 ) ಜಯಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಭಾನುವಾರ (ಡಿ.21) ಭಾರತ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 191 ರನ್‌ಗಳ ಬೃಹತ್ ಅಂತರದಿಂದ ಪಾಕಿಸ್ತಾನ ಗೆಲುವು ಸಾಧಿಸುವ ಮೂಲಕ ಟ್ರೋಫಿ ಎತ್ತಿಹಿಡಿಯಿತು. ಪಾಕಿಸ್ತಾನ ಅಂಡರ್-19 ಏಷ್ಯಾ ಕಪ್ ಗೆದ್ದಿರುವುದು ಕೇವಲ ಎರಡನೇ ಬಾರಿ. ಹದಿಮೂರು ವರ್ಷಗಳ ಹಿಂದೆ ಅಂದರೆ, 2012 ರಲ್ಲಿ ಮೊದಲ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದಿತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಮೀರ್ ಮಿನ್ಹಾಸ್ (172 ರನ್, 113 ಎಸೆತ, 17 ಬೌಂಡರಿ, 9 ಸಿಕ್ಸರ್) ಅವರ ಭರ್ಜರಿ ಶತಕ ಹಾಗೂ ಅಹ್ಮದ್ ಹುಸೇನ್ (56 ರನ್, 72 ಎಸೆತ, 2 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 347 ರನ್ ಗಳಿಸಲು ಸಾಧ್ಯವಾಯಿತು.
ಟೀಮ್ ಇಂಡಿಯಾ ಪರ ದೀಪೇಶ್ ದೇವೇಂದ್ರನ್ ಮೂರು ವಿಕೆಟ್ ಪಡೆದರು. ಹೆನಿಲ್ ಪಟೇಲ್ ಮತ್ತು ಖಿಲನ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಕಾನ್ಶಿಕ್ ಚೌಹಾಣ್ ಒಂದು ವಿಕೆಟ್ ಪಡೆದರು.
348 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 26.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ದೀಪೇಶ್ ದೇವೇಂದ್ರನ್ (36), ವೈಭವ್ ಸೂರ್ಯವಂಶಿ (26), ಆರನ್ ಜಾರ್ಜ್ (16), ಅಭಿಗ್ಯಾನ್ ಕುಂಡು (13), ಮತ್ತು ಖಿಲಾನ್ ಪಟೇಲ್ (19) ಮಾತ್ರ ಎರಡಂಕಿಯ ರನ್ ಗಳಿಸಿದರು. ಉಳಿದವರೆಲ್ಲರೂ ಒಂದಂಕಿಗೆ ಸೀಮಿತರಾದರು.
ಪಾಕಿಸ್ತಾನಿ ಬೌಲರ್‌ಗಳಲ್ಲಿ ಅಲಿ ರಜಾ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಸಯ್ಯಮ್, ಅಬ್ದುಲ್ ಸುಭಾನ್ ಮತ್ತು ಹುಜೈಫಾ ಅಹ್ಸಾನ್ ತಲಾ ಎರಡು ವಿಕೆಟ್ ಪಡೆದರು.
ಪಾಕ್ನಲ್ಲಿ ಸಂಭ್ರಮಾಚರಣೆ ಜೋರು
ಪಾಕಿಸ್ತಾನವು ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಅಂಡರ್-19 ಏಷ್ಯಾ ಕಪ್ ಗೆದ್ದ ನಂತರ ಸಂಭ್ರಮಾಚರಣೆಗಳು ಜೋರಾಗಿ ನಡೆಯುತ್ತಿವೆ. ಪಾಕಿಸ್ತಾನ ಅಂಡರ್-19 ತಂಡಕ್ಕೆ ತವರಿನಲ್ಲಿ ಭವ್ಯ ಸ್ವಾಗತ ದೊರೆಯಿತು. ಯುವ ತಂಡವನ್ನು ಸ್ವಾಗತಿಸಲು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದರು. ಅದರ ನಂತರ ಇಸ್ಲಾಮಾಬಾದ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೇವಲ ಅಂಡರ್ 19 ಏಷ್ಯಾಕಪ್ ಗೆದ್ದಿದ್ದಕ್ಕೆ ಪಾಕಿಸ್ತಾನ ಸಂಭ್ರಮಿಸುತ್ತಿರುವ ಪರಿಯನ್ನು ನೋಡಿ ಕ್ರೀಡಾಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಅಂಡರ್ -19 ಏಷ್ಯಾ ಕಪ್ ಗೆದ್ದಿದ್ದಕ್ಕೆ ಇಷ್ಟೊಂದು ಸಂಭ್ರಮಿಸುತ್ತಿರುವ ಅವರು ನಿಜವಾಗಿಯೂ ಸೀನಿಯರ್ ಮಟ್ಟದಲ್ಲಿ ಏಷ್ಯಾ ಕಪ್ ಮತ್ತು ವಿಶ್ವಕಪ್ ಗೆದ್ದರೆ ಇನ್ನೂ ಎಷ್ಟು ಸಂಭ್ರಮಿಸಬಹುದು ಎನ್ನುತ್ತಿದ್ದಾರೆ. ನೀವು ಸಂಭ್ರಮ ಮಾಡುವಷ್ಟು ಅಂಡರ್ 19 ಏಷ್ಯಕಪ್ ಜಾಗತಿಕವಾಗಿ ಪ್ರಭಾವ ಬೀರಿಲ್ಲ ಎಂದು ನೆಟ್ಟಿಗರು ಪಾಕ್ ಕಾಲೆಳೆಯುತ್ತಿದ್ದಾರೆ. ನಿಮ್ಮ ಹಿರಿಯ ತಂಡ ಭಾರತ ಇರಲಿ ಸಣ್ಣ ತಂಡಗಳ ವಿರುದ್ಧ ಗೆಲ್ಲಲು ಕೂಡ ಹೆಣಗಾಡುತ್ತಿದೆ. ನಿಮಗೆ ಈ ಸಂಭ್ರಮ ಎಲ್ಲ ಬೇಕಾ. ಟೀಮ್ ಇಂಡಿಯಾ ವಿರುದ್ಧ ನೀವು ಅನುಭವಿಸಿರುವ ಮುಖಭಂಗ ಲೆಕ್ಕಕ್ಕೆ ಸಿಗುವುದೇ ಇಲ್ಲ. ಸಣ್ಣ ಅಂಡರ್ 19 ಕಪ್ ಗೆದ್ದಿದ್ದಕ್ಕೆ ಇಷ್ಟೊಂದು ಹಾರಾಡುತ್ತಿದ್ದೀರಲ್ಲ, ಇದೆಲ್ಲ ನಿಮಗೆ ಬೇಕಾ? ಮೊದಲು ನಿಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳಿ ಎಂದು ಅನೇಕ ನೆಟ್ಟಿಗರು ಪಾಕಿಸ್ತಾನದ ಸಂಭ್ರಮಾಚರಣೆ ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.
ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್).