ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್
- ಎರಡು ವರ್ಷಗಳ ಬ್ಯಾನ್ ಇಲ್ಲಿ ಕೆಲಸ ಮಾಡುತ್ತಿಲ್ಲ
- ವಿದೇಶಿ ಆಟಗಾರನ ನಿರ್ಧಾರ ಬಗ್ಗೆ ಸುನೀಲ್ ಗವಾಸ್ಕರ್ ಗರಂ
ಬೆಂಗಳೂರು: ನಿನ್ನೆ (ಮಾ.28) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲೇ ಗೆಲುವನ್ನು ದಾಖಲಿಸಿದ್ದು ಕ್ರಿಕೆಟ್ ಪ್ರಿಯರ ಖುಷಿಗೆ ಕಾರಣವಾಯಿತು. 202 ರನ್ಗಳ ಬೃಹತ್ ಗುರಿಯನ್ನು ಕೇವಲ 15.4 ಓವರ್ಗೆ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಹಾಲಿ ಚಾಂಪಿಯನ್ಸ್ಗಳಿಂದಲೇ ಐಪಿಎಲ್ ಶುಭಾರಂಭ ಆಗಿರುವುದು ಫ್ರಾಂಚೈಸಿ ಅಭಿಮಾನಿಗಳಿಗೆ ಮತ್ತು ಮಾಜಿ ಹಿರಿಯ ಕ್ರಿಕೆಟಿಗರಿಗೆ ಸಂತಸ ತಂದಿದೆ. ಮತ್ತೊಂದೆಡೆ, ಟೀಮ್ ಇಂಡಿಯಾದ ದಂತಕಥೆ ಸುನೀಲ್ ಗವಾಸ್ಕರ್ ಮಾತನಾಡಿ, ಐಪಿಎಲ್ನಲ್ಲಿ ಆಡುವುದಾಗಿ ಹೇಳಿಕೊಂಡು ಬಿಡ್ ಆದ ವಿದೇಶಿ ಕ್ರಿಕೆಟಿಗರು ಇದೀಗ ದಿಢೀರ್ ಉಲ್ಟಾ ಹೊಡೆದಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗರಂ ಆಗಿ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲು 2 ಕೋಟಿ ರೂ.ಗೆ ಖರೀದಿಯಾದ ಇಂಗ್ಲೆಂಡ್ ಸ್ಟಾರ್ ಓಪನರ್ ಬೆನ್ ಡಕೆಟ್, ಇದೀಗ 2026ರ ಐಪಿಎಲ್ನಿಂದ ಹೊರಗುಳಿಯುವುದಾಗಿ ದೃಢಪಡಿಸಿದ್ದಾರೆ. ಅಂದುಕೊಂಡಂತೆ ನಡೆದಿದ್ದರೆ, ಮುಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಜೊತೆಗೆ ಡಕೆಟ್ ಆರಂಭಿಕರಾಗಿ ತಂಡದ ಪರ ಕಣಕ್ಕಿಳಿಯಬೇಕಿತ್ತು. ಆದರೀಗ, ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳನ್ನು ಗಮನದಲ್ಲಿರಿಸಿ, ಸೀಸನ್ ಶುರುವಿಗೂ ಕೆಲವು ದಿನಗಳ ಹಿಂದೆ ತಮ್ಮ ಫ್ರಾಂಚೈಸಿಗೆ ಕೈಕೊಟ್ಟಿದ್ದಾರೆ. ಇದರಿಂದ ಗವಾಸ್ಕರ್ ಸಿಡಿಮಿಡಿಗೊಂಡಿದ್ದಾರೆ.
ಇದು ಕಷ್ಟಕರ. ಆ್ಯಶಸ್ ಸರಣಿಯಲ್ಲಿ ಡಕೆಟ್ ಅದ್ಭುತ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ತಾವು ಇಂಗ್ಲೆಂಡ್ ಟೆಸ್ಟ್ ಕರಿಯರ್ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಈಗ ಹೊರನಡೆದಿದ್ದಾರೆ. ಅದು ಓಕೆ. ಇಲ್ಲಿ ಬಿಸಿಸಿಐ ಮುಂದೆ ಏನಾಗಬೇಕು ಎಂಬುದರ ಬಗ್ಗೆ ಚಿಂತಿಸಬೇಕು. ಕೈಕೊಡುವ ಆಟಗಾರರನ್ನು ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಮಾಡುವುದು ಕೆಲಸ ಮಾಡುತ್ತಿಲ್ಲ. ಅವರ ಮೇಲೆ ಪರಿಣಾಮ ಬೀರುವಂತದ್ದು ಏನಾದರೂ ಮಾಡಬೇಕು. ಅಲ್ಲಿಯವರೆಗೂ ಇಂತಹ ಸಮಸ್ಯೆಗಳು ಇದ್ದೇ ಇರುತ್ತದೆ ಎಂದರು,(ಏಜೆನ್ಸೀಸ್).