ಅಭಿಷೇಕ್ ಶರ್ಮ​ ಹೇಳಿದ ಈ ಮಾತುಗಳನ್ನು ಕೇಳಿ ಮುಗುಳ್ನಕ್ಕ ಗೌತಮ್​ ಗಂಭೀರ್! Abhishek Sharma  
ಕ್ರಿಕೆಟ್

ಮೂರು ಬಾರಿ ಡಕೌಟ್​ ಆದರೂ ಅಭಿಷೇಕ್​ ಹೇಳಿದ ಈ ಮಾತುಗಳನ್ನು ಕೇಳಿ ಮುಗುಳ್ನಕ್ಕ ಗೌತಮ್​ ಗಂಭೀರ್​! Abhishek Sharma

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿದ ಅಭಿಷೇಕ್ ಶರ್ಮಾ
  • ಅಭಿ ಹೇಳಿದ ಮಾತುಗಳನ್ನು ಕೇಳಿ ಮುಗುಳ್ನಕ್ಕ ಮುಖ್ಯ ಕೋಚ್ ಗೌತಮ್ ಗಂಭೀರ್
  • ವಿಡಿಯೋ ಕೊನೆಯಲ್ಲಿ "ಬೋಲೆ ಸೋ ನಿಹಾಲ್" ಎಂಬ ಜಯದ ಘೋಷ ಕೂಗಿದ ಅಭಿ
Abhishek Sharma : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜನೆ ಮಾಡಿರುವ 2026ರ ಟಿ20 ವಿಶ್ವಕಪ್ ರೋಚಕ ಘಟ್ಟ ತಲುಪಿದೆ. ಸದ್ಯ ಲೀಗ್​ ಹಂತವನ್ನು ಯಶಸ್ವಿಯಾಗಿ ಮುಗಿಸಿರುವ ಟೀಮ್​ ಇಂಡಿಯಾಗೆ ಇದೀಗ ನಿಜವಾದ ಸವಾಲು ಆರಂಭವಾಗಿದೆ. ಇಂದು (ಫೆ.22) ಸೂಪರ್ -8 ಹಂತದಲ್ಲಿ ಭಾರತವು ಉತ್ತಮ ಫಾರ್ಮ್‌ನಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಹೈ-ವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಎರಡೂ ತಂಡಗಳು ಈಗಾಗಲೇ ಅಹಮದಾಬಾದ್ ತಲುಪಿದ್ದು, ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸಲು ತಮ್ಮ ತಂತ್ರಗಳನ್ನು ಯೋಜಿಸುತ್ತಿವೆ.
ಟೀಮ್​ ಇಂಡಿಯಾದ ಅಭ್ಯಾಸ ಅವಧಿಯಲ್ಲಿ, ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸ್ಫೂರ್ತಿದಾಯಕ ಭಾಷಣ ಮಾಡಿದರು. ಇದನ್ನು ಕೇಳಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮುಗುಳ್ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಅಷ್ಟಕ್ಕೂ ಅಭಿ ಆಡಿದ ಸ್ಫೂರ್ತಿದಾಯಕ ಮಾತುಗಳು ಯಾವುವು ಅಂದರೆ, ನಾನು ನಮ್ಮ ಹುಡುಗರನ್ನು ಉತ್ತೇಜಿಸಲು ಹೋಗುತ್ತಿದ್ದೇನೆ. ಈ ಮಾತುಗಳು ನಮ್ಮ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾ ಮಾತು ಆರಂಭಿಸಿದ ಅಭಿಷೇಕ್​, ಪ್ರತಿಯೊಂದು ಪಂದ್ಯವನ್ನು ಆನಂದಿಸುವುದು ಒಬ್ಬ ಚಾಂಪಿಯನ್ ತಂಡದ ಲಕ್ಷಣ. ಆಟಗಾರರು ಒಬ್ಬರ ಪ್ರದರ್ಶನವನ್ನು ಮತ್ತೊಬ್ಬರು ಆನಂದಿಸಬೇಕು ಮತ್ತು ಇದೇ ರೀತಿ ಬೆಂಬಲವಾಗಿ ಇರಬೇಕು ಎಂದರು. ಅಲ್ಲದೆ, ನಮ್ಮ ತಂಡವು ಎಲ್ಲಾ ಪಂದ್ಯಗಳಲ್ಲಿ ತೋರಿಸುತ್ತಿರುವ ಅಸಾಧಾರಣ ಶಕ್ತಿ ಮತ್ತು ಉತ್ಸಾಹವನ್ನು ಅಭಿ ಶ್ಲಾಘಿಸಿದರು. ನಾವು ಇಲ್ಲಿಗೆ ಬಂದಿರುವುದು ಎಲ್ಲಾ ಪಂದ್ಯಗಳನ್ನು ಗೆಲ್ಲಲು, ಆದ್ದರಿಂದ ಆಟವನ್ನು ಆನಂದಿಸುತ್ತಾ ಮುನ್ನಡೆಯೋಣ ಎಂದು ಅಭಿ ತಂಡಕ್ಕೆ ಸ್ಫೂರ್ತಿ ನೀಡಿದರು.
ಇನ್ನು ವಿಡಿಯೋದ ಕೊನೆಯಲ್ಲಿ, ಅಭಿಷೇಕ್​ ಅವರು "ಬೋಲೆ ಸೋ ನಿಹಾಲ್" ಎಂಬ ಜಯದ ಘೋಷಣೆಯನ್ನು ಕೂಗುವ ಮೂಲಕ ಇಡೀ ತಂಡದಲ್ಲಿ ಹೊಸ ಸಂಚಲನ ಮೂಡಿಸಿದರು. ಅಂದಹಾಗೆ, ಬೋಲೆ ಸೋ ನಿಹಾಲ್ ಎಂಬುದು ಸಿಖ್ ಧರ್ಮದ ಅತ್ಯಂತ ಪ್ರಸಿದ್ಧವಾದ ಮತ್ತು ಶಕ್ತಿಯುತವಾದ ಘೋಷವಾಕ್ಯವಾಗಿದೆ.
2026 ರ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ ಒಂದು ರನ್ ಗಳಿಸಿಲ್ಲ. ಅನಾರೋಗ್ಯದ ಕಾರಣ ಅವರು ಒಂದು ಪಂದ್ಯವನ್ನು ತಪ್ಪಿಸಿಕೊಂಡರು ಮತ್ತು ಆಡಿದ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರು. ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಚುಟುಕು ವಿಶ್ವಕಪ್‌ಗೆ ಪ್ರವೇಶಿಸಿದ ನಂತರ ಫಾರ್ಮ್​ ಕಳೆದುಕೊಂಡಿರುವುದು ಟೀಮ್​ ಇಂಡಿಯಾಗೆ ಒಂದು ದೊಡ್ಡ ಹೊಡೆತವಾಗಿದೆ. ಆದಾಗ್ಯೂ, ಅವರಿಗೆ ತಂಡದ ಆಡಳಿತ ಮಂಡಳಿಯಿಂದ ಇನ್ನೂ ಬಲವಾದ ಬೆಂಬಲವಿದೆ. ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಅವರು ಸದ್ಯಕ್ಕೆ ಚಿಂತಿಸುತ್ತಿಲ್ಲ ಮತ್ತು ಅವರು ಕೇವಲ ಒಂದು ಇನ್ನಿಂಗ್ಸ್‌ನೊಂದಿಗೆ ಫಾರ್ಮ್‌ಗೆ ಬರುತ್ತಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು, (ಏಜೆನ್ಸೀಸ್​).