IPL-2026: ಈ ಬಾರಿ ಪ್ಲೇಆಫ್ ರೇಸ್ ಲೆಕ್ಕಾಚಾರ ಜಟಿಲ! 16 ಅಂಕ ಗಳಿಸಿದರೂ ಸೇಫಲ್ಲ!
ಬೆಂಗಳೂರು: ಐಪಿಎಲ್ (IPl) 2022ರಲ್ಲಿ 10 ತಂಡಗಳು ಮತ್ತು ತಲಾ 14 ಲೀಗ್ ಪಂದ್ಯಗಳ ಟೂರ್ನಿಯಾಗಿ ಬದಲಾದ ಬಳಿಕ ಕನಿಷ್ಠ 8 ಪಂದ್ಯ ಗೆದ್ದ ಮತ್ತು 16 ಅಂಕ ಕಲೆಹಾಕಿದ ಎಲ್ಲ ತಂಡಗಳೂ ಪ್ಲೇಆಫ್ (Play-Off) ಹಂತಕ್ಕೇರಿವೆ. 2024ರಲ್ಲಿ ಆರ್ಸಿಬಿ ಕನಿಷ್ಠ 7 ಗೆಲುವು ಮತ್ತು 14 ಅಂಕಗಳೊಂದಿಗೆ ಪ್ಲೇಆಫ್ಗೇರಿದ ದೃಷ್ಟಾಂತವೂ ಇದೆ. ಆದರೆ ಈ ಬಾರಿ ಪ್ಲೇಆಫ್ ಲೆಕ್ಕಾಚಾರ ಇನ್ನಷ್ಟು ಜಟಿಲವಾಗಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ಮತ್ತು ಆರ್ಸಿಬಿ ತಂಡಗಳು ಈಗಾಗಲೆ 8 ಪಂದ್ಯ ಗೆದ್ದು, 16 ಅಂಕ ಕಲೆಹಾಕಿದ್ದರೂ, ಪ್ಲೇಆಫ್ ಸ್ಥಾನ ಇನ್ನೂ ಖಚಿತವಾಗಿಲ್ಲ.
ಸದ್ಯದ ಲೆಕ್ಕಾಚಾರದ ಪ್ರಕಾರ, ಒಟ್ಟು 6 ತಂಡಗಳಿಗೆ ಕನಿಷ್ಠ 16 ಅಂಕ ಗಳಿಸಲು ಅವಕಾಶವಿದೆ. ಹೀಗಾಗಿ 16 ಅಂಕ ಗಳಿಸಿದ ತಂಡವೂ ಈ ಬಾರಿ ಪ್ಲೇಆಫ್ ಹಂತಕ್ಕೇರಲು ಸಾಧ್ಯವಾಗದಿರುವ ಸಾಧ್ಯತೆಗಳಿವೆ. ಇನ್ನು ಇನ್ನೊಂದು ಲೆಕ್ಕಾಚಾರದ ಪ್ರಕಾರ ಈ ಬಾರಿ ಕನಿಷ್ಠ 9 ಪಂದ್ಯ ಗೆದ್ದು 18 ಅಂಕ ಗಳಿಸಿದ ತಂಡಕ್ಕೂ ಪ್ಲೇಆಫ್ ಸ್ಥಾನ ಕೈತಪ್ಪಬಹುದಾದ ಣ ಸಾಧ್ಯತೆಯೊಂದು ಕೂಡ ಇದೆ. ಯಾಕೆಂದರೆ ಈಗಿನ ಸ್ಥಿತಿಗತಿಯ ಪ್ರಕಾರ ಸದ್ಯ 5 ತಂಡಗಳಿಗೆ ಕನಿಷ್ಠ 18 ಅಂಕ ಗಳಿಸುವ ಅವಕಾಶವಿದೆ. ಹೀಗಾಗಿ ಈಗ ಅಂಕಪಟ್ಟಿಯ ಅಗ್ರ 4ರೊಳಗಿರುವ ಯಾವ ತಂಡವೂ ಪ್ಲೇಆಫ್ ಹಂತಕ್ಕೇರಲು ಸಾಧ್ಯವಾಗದಿದ್ದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ.
ಅದೇ ರೀತಿ ಕನಿಷ್ಠ 14 ಅಂಕ ಗಳಿಸಿದ ತಂಡವೂ ಪ್ಲೇಆಫ್ ಹಂತಕ್ಕೇರುವ ವಿರಳ ಸಾಧ್ಯತೆಯೂ ಜೀವಂತವಿದೆ. ಟೂರ್ನಿಯಲ್ಲಿ ಇನ್ನು 13 ಲೀಗ್ ಪಂದ್ಯ ಬಾಕಿ ಇರುವ ವೇಳೆ, ಡೆಲ್ಲಿ ಸಹಿತ 8 ತಂಡಗಳು ಪ್ಲೇಆಫ್ ಆಸೆ ಹೊಂದಿವೆ.