ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್
- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ
- ಸಿಎಸ್‌ಕೆ ತಂಡದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡ ನಾಯಕ ರುತುರಾಜ್ ಗಾಯಕ್ವಾಡ್
CSK Captain: ಐಪಿಎಲ್ 19ನೇ ಆವೃತ್ತಿಯ ಆರಂಭಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ. ಈ ಮೆಗಾ ಲೀಗ್ ಪ್ರಾರಂಭವಾಗುವ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಕೆಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಉದ್ಘಾಟನಾ ಪಂದ್ಯ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿದ್ದು, ಹಲವರು ಈ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಐಪಿಎಲ್ ಆರಂಭವಾಗಿ ಮೂರನೇ ದಿನದಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಮಧ್ಯೆಯೇ, ತಂಡದ ಓಪನಿಂಗ್ ಕುರಿತಾಗಿ ರುತುರಾಜ್ ಮಾತನಾಡಿದ್ದಾರೆ.
ಸಿಎಸ್ಕೆಯಿಂದ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನಕ್ಕೆ ಟ್ರೇಡ್ ಮಾಡಿದ ಫ್ರಾಂಚೈಸಿ, ಅವರ ಸ್ಥಾನಕ್ಕೆ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ರನ್ನು ಕರೆದುಕೊಂಡಿತು. ಈ ನಿಟ್ಟಿನಲ್ಲಿ, ಸಂಜು ಮೇಲೆ ಭಾರೀ ನಿರೀಕ್ಷೆಗಳು ಮೂಡಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿಗೆ ಮುಖ್ಯ ಕಾರಣರಾದ ಸಂಜು, ತಮ್ಮ ಅಮೋಘ ಓಪನಿಂಗ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಇದನ್ನೇ ಪ್ಲಸ್ ಆಗಿ ತೆಗೆದುಕೊಂಡಿರುವ ರುತುರಾಜ್, ಸ್ಯಾಮ್ಸನ್ ಜೊತೆಗೆ ಬ್ಯಾಟಿಂಗ್ ಆರಂಭಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಸತತ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ರುತುರಾಜ್, ಒನ್ ಡೌನ್‌ನಲ್ಲಿ ಬ್ಯಾಟಿಂಗ್ ಮಾಡಿದರು. ತಮ್ಮ ಸ್ಥಾನವನ್ನು ಡೆವೊನ್ ಕಾನ್ವೇ, ರಚಿನ್ ರವೀಂದ್ರ ಮತ್ತು ಆಯುಷ್ ಮಾತ್ರೆಗಾಗಿ ತ್ಯಾಗ ಮಾಡಿದರು. ಅಂದುಕೊಂಡಂತೆ, ಕಾನ್ವೆ ಮತ್ತು ರಚಿನ್ ಜೋಡಿ ಉತ್ತಮ ಇನ್ನಿಂಗ್ಸ್ ನೀಡಿತು. ಆ ನಂತರ ಆಯುಷ್ ಕೂಡ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಈ ಬಾರಿ ತನ್ನ ಆರಂಭಿಕ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದೆ, ಸಂಜು ಜೊತೆಗೆ ಓಪನಿಂಗ್ ಬರುವುದಾಗಿ ಗಾಯಕ್ವಾಡ್ ಹೇಳಿದ್ದಾರೆ,(ಏಜೆನ್ಸೀಸ್).