ಸೊಸೆ ಸಾಕ್ಷಿ ಧೋನಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ವೈರಲ್
- ಮಹೇಂದ್ರ ಸಿಂಗ್ ಧೋನಿ ತಂದೆ ಪಾನ್ ಸಿಂಗ್ ಧೋನಿ ಹುಟ್ಟುಹಬ್ಬ
- ಸೊಸೆ ಸಾಕ್ಷಿ ಧೋನಿ ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ವೈರಲ್
- ಧೋನಿ ಯಶಸ್ಸಿನ ಹಿಂದಿನ ಹಿಂದಿರುವ ಶಕ್ತಿ ಇವರೇ ಎಂದ ಸಾಕ್ಷಿ
ರಾಂಚಿ: ಕ್ರಿಕೆಟ್ ಜಗತ್ತಿನ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಪಂಚಪ್ರಾಣ. ಮೈದಾನದಲ್ಲಿ ಧೋನಿ ಅವರ ಶಾಂತಸ್ವಭಾವ ಮತ್ತು ಸಾಧನೆ ನಮಗೆಲ್ಲ ಗೊತ್ತು. ಆದರೆ, ಧೋನಿ ಎಂಬ ಸಾಮಾನ್ಯ ಹುಡುಗ ಇಡೀ ವಿಶ್ವವೇ ಮೆಚ್ಚುವ ಲೆಜೆಂಡ್ ಆಗಿ ಬೆಳೆಯಲು ಕಾರಣವಾದ ಆ ಶಕ್ತಿ ಯಾರು ಗೊತ್ತಾ? ಆ ಗುಟ್ಟನ್ನು ಈಗ ಧೋನಿ ಪತ್ನಿ ಸಾಕ್ಷಿ ಧೋನಿ (Sakshi Dhoni) ಬಿಚ್ಚಿಟ್ಟಿದ್ದಾರೆ.
ಗುರುವಾರ (ಮಾರ್ಚ್ 18) ಎಂ.ಎಸ್. ಧೋನಿ ಅವರ ತಂದೆ ಪಾನ್ ಸಿಂಗ್ ಧೋನಿ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದು ಸೊಸೆ ಸಾಕ್ಷಿ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ಭಾವನಾತ್ಮಕ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಣ್ಣ ಹಳ್ಳಿಯಿಂದ ಬಂದ ಮಹಾನ್ ಚೇತನ
ಸಾಕ್ಷಿ ಧೋನಿ ತಮ್ಮ ಮಾವ ಪಾನ್ ಸಿಂಗ್ ಅವರ ಫೋಟೋ ಹಂಚಿಕೊಂಡು ಮನದಾಳದ ಮಾತುಗಳನ್ನು ಬರೆದಿದ್ದಾರೆ. ಒಂದು ಪುಟ್ಟ ಹಳ್ಳಿಯಿಂದ ಬಂದ ಈ ಧೈರ್ಯಶಾಲಿ ವ್ಯಕ್ತಿ, ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿಯನ್ನು ಸೃಷ್ಟಿಸಿದ್ದಾರೆ. ನನ್ನ ಪತಿ (ಎಂಎಸ್ ಧೋನಿ) ಇಂದು ಈ ಮಟ್ಟಕ್ಕೆ ತಲುಪಲು ಅವರ ತಂದೆಯೇ ಅತಿದೊಡ್ಡ ಶಕ್ತಿ, ಎಂದು ಬಣ್ಣಿಸಿದ್ದಾರೆ.
ಈ ಪೋಸ್ಟ್‌ನಲ್ಲಿ ಪಾನ್ ಸಿಂಗ್ ಧೋನಿ ಅವರು ಪುಟ್ಟ ಮಗುವಿಗೆ ಕೇಕ್ ತಿನ್ನಿಸುತ್ತಿರುವ ಮುದ್ದಾದ ಫೋಟೋ ಕೂಡ ಇದೆ. ಧೋನಿ ಕುಟುಂಬದ ಸರಳತೆ ಮತ್ತು ಅನ್ಯೋನ್ಯತೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಯಶಸ್ಸಿನ ಶಿಖರ ಏರಿದರೂ ಧೋನಿ ಕುಟುಂಬದ ಈ ಸಂಸ್ಕಾರ ಮತ್ತು ತಳಮಟ್ಟದ ಬದುಕು ಎಲ್ಲರಿಗೂ ಮಾದರಿ, ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಒಂದೆಡೆ ಫ್ಯಾಮಿಲಿ ಸಂಭ್ರಮ; ಇನ್ನೊಂದೆಡೆ ಐಪಿಎಲ್ ತಯಾರಿ
ಮನೆಯಲ್ಲಿ ತಂದೆಯ ಹುಟ್ಟುಹಬ್ಬದ ಸಂಭ್ರಮವಿದ್ದರೆ, ಮೈದಾನದಲ್ಲಿ ಧೋನಿ ಹವಾ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಎಂ.ಎಸ್. ಧೋನಿ ಸದ್ಯದಲ್ಲೇ ಆರಂಭವಾಗಲಿರುವ ಐಪಿಎಲ್ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಈ ಅನುಭವಿ ಆಟಗಾರ ಮತ್ತೆ ಮೈದಾನಕ್ಕಿಳಿಯಲು ಕಠಿಣ ತಾಲೀಮು ನಡೆಸುತ್ತಿದ್ದಾರೆ.
ಮಾರ್ಚ್ 28 ರಿಂದ ಆರಂಭವಾಗಲಿರುವ ಈ ಬಾರಿಯ ಐಪಿಎಲ್ನಲ್ಲಿ ಧೋನಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಫಿಟ್ನೆಸ್ ಮತ್ತು ಮ್ಯಾಚ್ ಸಿಮ್ಯುಲೇಶನ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಮಾರ್ಚ್ 30 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಧೋನಿ ಇಡೀ ಸೀಸನ್ ಪೂರ್ತಿ ಆಡಲಿ ಎಂದು ತಂಡದ ಮ್ಯಾನೇಜ್‌ಮೆಂಟ್ ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜನ್ಸೀಸ್).