ಐರ್ಲೆಂಡ್ ವಿರುದ್ಧ ಹೀನಾಯ ಸೋಲಿಗೆ ನಾವು ಮಾಡಿದ ಈ ತಪ್ಪೇ ಕಾರಣ... ಸತ್ಯ ಒಪ್ಪಿಕೊಂಡ ಶ್ರೇಯಸ್ ಅಯ್ಯರ್! Shreyas Iyer
- ಐರ್ಲೆಂಡ್ ಎದುರು ಮಂಡಿಯೂರಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್
- ಸೋಲಿನ ಬೆನ್ನಲ್ಲೇ ಬೌಲರ್‌ಗಳ ಕ್ಲಾಸ್ ತಗೊಂಡ ಕ್ಯಾಪ್ಟನ್ ಅಯ್ಯರ್
- ಇದು ನಮಗೊಂದು ದೊಡ್ಡ ಪಾಠ ಎಂದು ಸೋಲನ್ನು ಒಪ್ಪಿಕೊಂಡ ನಾಯಕ ಅಯ್ಯರ್
- ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಮರಳುವ ವಿಶ್ವಾಸದಲ್ಲಿ ಅಯ್ಯರ್ ಪಡೆ
Shreyas Iyer : ಇಂದು (ಜೂನ್ 26) ನಡೆದ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಟೀಮ್ ಇಂಡಿಯಾದ ಟಿ20 ನಾಯಕ ಶ್ರೇಯಸ್ ಅಯ್ಯರ್ ಪ್ರತಿಕ್ರಿಯೆ ನೀಡಿದ್ದು, ಈ ಸೋಲು ನಮಗೆ ಒಂದು ಅನುಭವವಾಗಿದ್ದು, ಇದರಿಂದ ತಂಡವು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಹೇಳಿದ್ದಾರೆ.
ಪಂದ್ಯದ ಪ್ರಸ್ತತಿ ವೇಳೆ ಮಾತನಾಡಿದ ಶ್ರೇಯಸ್ ಅಯ್ಯರ್, ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡು, ಮೊದಲ ಪಂದ್ಯದಲ್ಲೇ ಸೋಲುಂಡಿದ್ದು ಭಾರಿ ನಿರಾಶೆ ಮೂಡಿಸಿದೆ. ಪಂದ್ಯದ ಆರಂಭದಲ್ಲಿ ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಪಿಚ್‌ನಲ್ಲಿದ್ದ ಸ್ವಿಂಗ್ ಅನ್ನು ಸರಿಯಾಗಿ ಬಳಸಿಕೊಂಡು ವಿಕೆಟ್‌ಗಳನ್ನು ಕಸಿದುಕೊಂಡರು. ನಮಗೆ ಭರ್ಜರಿ ಆರಂಭವೇ ಸಿಕ್ಕಿತ್ತು. ಆದರೆ, ಮಧ್ಯದ ಓವರ್‌ಗಳಲ್ಲಿ ನಮ್ಮ ಬೌಲಿಂಗ್ ಉತ್ತಮವಾಗಿರಲಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದರು.
ಮಾತು ಮುಂದುವರಿಸಿದ ಅವರು, ಇಲ್ಲಿನ ಮೈದಾನದ ಬೌಂಡರಿಗಳು ತುಂಬಾ ಚಿಕ್ಕದಾಗಿವೆ ಎಂದು ನಮಗೆ ತಿಳಿದಿದ್ದರೂ ಸಹ, ಐರಿಶ್ ಬ್ಯಾಟರ್‌ಗಳು ನೇರ ಶಾಟ್‌ಗಳನ್ನು ಆಡಲು ಸುಲಭವಾಗುವಂತೆ ನಮ್ಮ ಬೌಲರ್‌ಗಳು ಬೌಲಿಂಗ್ ಮಾಡಿದರು. ಎದುರಾಳಿ ತಂಡಕ್ಕೆ ಸಿಕ್ಕ ಆರಂಭವನ್ನು ಗಮನಿಸಿದರೆ, ಒಂದು ವೇಳೆ ನಾವು ಅವರನ್ನು 140 ರನ್‌ಗಳಿಗೆ ನಿಯಂತ್ರಿಸಿದ್ದರೆ ನಮಗೆ ಆ ಗುರಿಯನ್ನು ಬೆನ್ನಟ್ಟುವುದು ತುಂಬಾ ಸುಲಭವಾಗುತ್ತಿತ್ತು ಎಂದು ಅಯ್ಯರ್ ಹೇಳಿದರು.
ದೀರ್ಘ ವಿರಾಮದ ನಂತರ ತಂಡವು ಕಣಕ್ಕಿಳಿದಿದ್ದರಿಂದ ಆಟಗಾರರು ಲಯ ತಪ್ಪಿದಂತೆ ಭಾಸವಾಯಿತು, ಆದರೆ ಇದನ್ನೇ ನೆಪವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದ ಅಯ್ಯರ್, ಕ್ರಿಕೆಟ್‌ನಲ್ಲಿ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ಕೇವಲ ಮೈದಾನಕ್ಕೆ ಕಾಲಿಟ್ಟ ತಕ್ಷಣ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರತಿ ಕ್ಷಣವೂ ಕಷ್ಟಪಡಬೇಕು, ಪ್ರಸ್ತುತ ಪರಿಸ್ಥಿತಿಯಲ್ಲಿ ಬದುಕಬೇಕು. ಎದುರಾಳಿಗೆ ಪೆಟ್ಟು ನೀಡುವ ಅವಕಾಶ ಸಿಕ್ಕಾಗ ಅದನ್ನು ಎಂದಿಗೂ ಬಿಟ್ಟುಕೊಡಬಾರದು. ಈ ಸೋಲು ನಮಗೊಂದು ದೊಡ್ಡ ಪಾಠ ಎಂದು ಅಯ್ಯರ್ ತಿಳಿಸಿದ್ದಾರೆ.
ಇದೇ ವೇಳೆ, ಗಾಯದಿಂದ ಚೇತರಿಸಿಕೊಂಡು ಬಂದು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಮತ್ತು ದೇಶಿ ಕ್ರಿಕೆಟ್‌ನಿಂದ ತಮಗೆ ಚೆನ್ನಾಗಿ ಪರಿಚಯವಿರುವ ಶಿವಂ ದುಬೆ ಅವರ ಪ್ರದರ್ಶನವನ್ನು ಅಯ್ಯರ್ ಶ್ಲಾಘಿಸಿದ್ದಾರೆ. ಈ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಆದಷ್ಟು ಬೇಗ ಮರೆತು, ಮುಂದಿನ ಪಂದ್ಯದಲ್ಲಿ ಸಂಪೂರ್ಣ ಶಕ್ತಿ ಹಾಗೂ ಹೊಸ ತಂತ್ರಗಳೊಂದಿಗೆ ಬಲಿಷ್ಠವಾಗಿ ಪುನರಾಗಮನ ಮಾಡಲಿದ್ದೇವೆ ಎಂಬ ವಿಶ್ವಾಸವನ್ನು ಭಾರತ ತಂಡದ ನಾಯಕ ವ್ಯಕ್ತಪಡಿಸಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಐರ್ಲೆಂಡ್ ಪರ ನಾಯಕ ಲೋರ್ಕನ್ ಟಕರ್ ಜವಾಬ್ದಾರಿಯುತ ಆಟವಾಡಿ 36 ಎಸೆತಗಳಲ್ಲಿ 50 ರನ್ ಬಾರಿಸಿದರೆ, ಗರೆಥ್ ಡೆಲಾನಿ ಕೇವಲ 32 ಎಸೆತಗಳಲ್ಲಿ 49 ರನ್ ಸಿಡಿಸಿ ತಂಡದ ಮೊತ್ತ 180ರ ಗಡಿ ದಾಟಲು ನೆರವಾದರು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಹರ್ಷಿತ್ ರಾಣಾ 24 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಸಿದುಕೊಂಡರು. ಶಿವಂ ದುಬೆ ಒಂದು ವಿಕೆಟ್ ಕಬಳಿಸಿದರು.
183 ರನ್‌ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಯುವ ಓಪನರ್ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ನೀಡಿದರು. ಕೇವಲ 20 ಎಸೆತಗಳನ್ನು ಎದುರಿಸಿದ ಅಭಿಷೇಕ್ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 50 ರನ್ ಚಚ್ಚಿ ಔಟಾದರು. ಆದರೆ, ಇವರ ನಿರ್ಗಮನದ ಬೆನ್ನಲ್ಲೇ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೋಟೆಯು ಇಸ್ಪೀಟ್ ಎಲೆಗಳಂತೆ ಕುಸಿಯಲಾರಂಭಿಸಿತು.
ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 5 ರನ್ ಹಾಗೂ ಇಶಾನ್ ಕಿಶನ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಬಂದ ತಿಲಕ್ ವರ್ಮಾ (19) ಹಾಗೂ ಶಿವಂ ದುಬೆ (25) ಅಲ್ಪಕಾಲ ಹೋರಾಟ ನಡೆಸಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡ 18.5 ಓವರ್‌ಗಳಲ್ಲಿ ಕೇವಲ 148 ರನ್‌ಗಳಿಗೆ ಸರ್ವಪತನ ಕಂಡು ಭಾರಿ ಸೋಲನ್ನು ಅನುಭವಿಸಿತು.
ಐರ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಮ್ಯಾಥ್ಯೂ ಹಂಫ್ರೇಸ್ ಮತ್ತು ಮ್ಯಾಥ್ಯೂ ಹೊಲಾರ್ಡ್ ತಲಾ 3 ವಿಕೆಟ್ ಪಡೆಯುವ ಮೂಲಕ ಭಾರತೀಯ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಜೈ ಮೂಂದ್ರ 2 ವಿಕೆಟ್ ಪಡೆದರೆ, ಲಿಯಾಮ್ ಮ್ಯಾಕಾರ್ತಿ ಹಾಗೂ ಗರೆಥ್ ಡೆಲಾನಿ ತಲಾ ಒಂದು ವಿಕೆಟ್‌ಗಳನ್ನು ಪಡೆಯುವ ಮೂಲಕ ಐರ್ಲೆಂಡ್‌ನ ಐತಿಹಾಸಿಕ 34 ರನ್‌ಗಳ ಗೆಲುವಿಗೆ ಪ್ರಮುಖ ಕಾರಣರಾದರು. ಈ ಸೋಲು ನಾಯಕನಾಗಿ ಪಾದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಅವರ ಮುಂದಿನ ನಾಯಕತ್ವದ ಹಾದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ, (ಏಜೆನ್ಸೀಸ್).