- ಶನಿವಾರ (ಏ.25) ನಡೆದ ಐಪಿಎಲ್ ಪಂದ್ಯಗಳಲ್ಲಿ ನಾಲ್ವರ ಪಾಲಾದ ಆರೆಂಜ್ ಕ್ಯಾಪ್
- ಐಪಿಎಲ್ ಇತಿಹಾಸದಲ್ಲೇ ಇದು ಮೊದಲು
- ಆರೆಂಜ್ ಕ್ಯಾಪ್ ಬದಲಿಸಿಕೊಂಡ ಆ ನಾಲ್ಕು ಬ್ಯಾಟರ್ಗಳು ಯಾರು?
IPL 2026: ನಿನ್ನೆ (ಏ.25) ನಡೆದ ಎರಡು 19ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಮನರಂಜನೆ ನೀಡಿತು. ಮೊದಲ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ ಅವರ ವಿನಾಶಕಾರಿ ಬ್ಯಾಟಿಂಗ್ (ಅಜೇಯ 152 ರನ್, 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್) ತಂಡದ ಮೊತ್ತವನ್ನು 264 ರನ್ ಗಳಿಸಲು ಸಹಾಯ ಮಾಡಿತು. ಆದರೆ, ಈ ಬೃಹತ್ ಗುರಿಯನ್ನು 7 ಬಾಲ್ ಬಾಕಿ ಇರುವಂತೆ ಪುಡಿಗಟ್ಟಿದ ಪಂಜಾಬ್ ಕಿಂಗ್ಸ್, 4 ವಿಕೆಟ್‌ಗಳ ನಷ್ಟಕ್ಕೆ ರೋಚಕ ಗೆಲುವು ಸಾಧಿಸಿತು.
ಇನ್ನು ಎರಡನೇ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ (103 ರನ್, 37 ಎಸೆತ, 5 ಬೌಂಡರಿ, 12 ಸಿಕ್ಸರ್‌ಗಳು) ಶತಕದಾಟ ತೋರಿದರು. ಇಷ್ಟಾದರೂ ತಂಡ ಕಲೆಹಾಕಿದ 228 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಶಾನ್ ಕಿಶನ್ (74 ರನ್, 31 ಎಸೆತ, 11 ಬೌಂಡರಿ, 3 ಸಿಕ್ಸರ್) ಮತ್ತು ಅಭಿಷೇಕ್ ಶರ್ಮಾ (57 ರನ್, 29 ಎಸೆತ, 11 ಬೌಂಡರಿ, 1 ಸಿಕ್ಸರ್) ಅರ್ಧಶತಕದಿಂದ ಸನ್‌ರೈಸರ್ಸ್ 18.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.
ಹಿಂದೆಂದೂ ನಡೆದಿಲ್ಲ...
ಎರಡು ಪಂದ್ಯಗಳಲ್ಲಿ ರನ್‌ಗಳ ಹೊಳೆಯೇ ಹರಿದುಬಂದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿತು. ಇದೇ ದಿನ, ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಒಂದು ಅಪರೂಪದ ಘಟನೆ ನಡೆದಿದ್ದು, ಮೈದಾನದಲ್ಲಿದ್ದ ಕ್ರಿಕೆಟ್ ಪ್ರಿಯರನ್ನು ಕೆಲ ಸಮಯ ತೀವ್ರ ಗೊಂದಲಕ್ಕೆ ದೂಡಿತು. ಇದಕ್ಕೆ ಕಾರಣ, ಅದು ಹೇಗೆ? ಒಂದೇ ದಿನದಲ್ಲಿ ನಾಲ್ಕು ಬಾರಿ ಅತ್ಯಧಿಕ ರನ್ ಗಳಿಸಿದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಬದಲಾಯಿತು ಎಂದು.
ಈ ಪಂದ್ಯಗಳಿಗೂ ಮುನ್ನ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೊಂದಿದ್ದರು. ಶನಿವಾರದ ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರಿಂದ ಬಂದ ಅದ್ಭುತ ಪ್ರದರ್ಶನದಿಂದ ಹೆಚ್ಚುವರಿ ರನ್ಗಳು ಅವರ ಪಾಲಾಯಿತು. ಹೀಗಾಗಿ, ಆರೆಂಜ್ ಕ್ಯಾಪ್ ಅವರಿಗೆ ಹಸ್ತಾಂತರವಾಯಿತು. ಎರಡನೇ ಪಂದ್ಯದಲ್ಲಿ ಆರ್ಆರ್ ಪರ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿದರು. ರಾಹುಲ್ ಬಳಿಯಿದ್ದ ಆರೆಂಜ್ ಕ್ಯಾಪ್ ನೇರವಾಗಿ ಬೇಬಿ ಬಾಸ್ ಮುಡಿಗೇರಿತು.
ಶತಕ ಬಾರಿಸಿದರೂ ವೈಭವ್ ಅವರ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಸನ್‌ರೈಸರ್ಸ್ ಪರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿ, 57 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. 24 ಗಂಟೆಯೊಳಗೆ ನಾಲ್ವರು ಆಟಗಾರರಿಗೆ ಅತ್ಯಧಿಕ ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಬದಲಾಗಿದ್ದು, ಐಪಿಎಲ್ ಇತಿಹಾಸದಲ್ಲಿಯೇ ಮೊದಲು.
ಈ ಸೀಸನ್ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ರನ್ ಗಳಿಸಿದ ಅಗ್ರ 5 ಬ್ಯಾಟರ್ಗಳಿವರು
1. ಅಭಿಷೇಕ್ ಶರ್ಮಾ - 8 ಪಂದ್ಯ, 380 ರನ್
2. ವೈಭವ್ ಸೂರ್ಯವಂಶಿ - 8 ಪಂದ್ಯ, 357 ರನ್
3. ಕೆ.ಎಲ್. ರಾಹುಲ್ - 7 ಪಂದ್ಯ, 357 ರನ್
4. ಹೆನ್ರಿಚ್ ಕ್ಲಾಸೆನ್ - 8 ಪಂದ್ಯ. 349 ರನ್
5. ವಿರಾಟ್ ಕೊಹ್ಲಿ - 7 ಪಂದ್ಯ, 328 ರನ್