- ಆಡಿರುವ ಮೂರು ಪಂದ್ಯದಲ್ಲಿಯೂ ಹೀನಾಯ ಸೋಲು
- ಹರಾಜಿನಲ್ಲಿ ಯಾರನ್ನು, ಎಷ್ಟು ಹಣಕ್ಕೆ ಖರೀದಿ ಮಾಡಬೇಕು ಅನ್ನೋ ಲೆಕ್ಕಾಚಾರ ಗೊತ್ತಿಲ್ಲ
- 75 ಲಕ್ಷ ರೂ. ಕೊಟ್ಟ ಆಟಗಾರನಿಂದ ಬರುತ್ತಿರುವ ಇನ್ನಿಂಗ್ಸ್, ಇತರರಿಂದ ಇಲ್ಲ
CSK: ನಿನ್ನೆ (ಏ.05) ಬೆಂಗಳೂರಿನ ಎಂ.ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲುಂಡಿತು. 43 ರನ್ಗಳಿಂದ ಸೋತ ಸಿಎಸ್ಕೆಗೆ ಬೌಲರ್ಗಳು ಮತ್ತು ಬ್ಯಾಟರ್ಗಳ ಬೇಜವಾಬ್ದಾರಿ ಆಟವೇ ಕ್ರಿಕೆಟ್ ಅಭಿಮಾನಿಗಳ ಟೀಕೆ, ಆಕ್ರೋಶಕ್ಕೆ ಕಾರಣವಾಯಿತು.
ಆರ್ಸಿಬಿ ಬ್ಯಾಟರ್ಗಳು ಹಿಗ್ಗಾಮುಗ್ಗಾ ಸಿಕ್ಸರ್ಗಳನ್ನು ಬಾರಿಸಲು ಬಿಟ್ಟ ಸಿಎಸ್ಕೆ ಬೌಲರ್ಗಳು, ಕೇವಲ 3 ವಿಕೆಟ್ ಪಡೆಯಲಷ್ಟೇ ಸಫಲರಾದರು. ಇನ್ನು ಬೆಂಗಳೂರು ಪಡೆ ನೀಡಿದ 251 ರನ್ಗಳ ಬೃಹತ್ ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಎಂದಿನಂತೆ ಬ್ಯಾಟರ್ಗಳಿಂದ ಅದೇ ಕಳಪೆ ಪ್ರದರ್ಶನ ಮುಂದುವರಿಯಿತು. ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಕೇವಲ ಒಂದಂಕಿಗೆ ಪೆವಿಲಿಯನ್ನತ್ತ ಮುಖಮಾಡಿದ್ದು, ಅಭಿಮಾನಿಗಳ ಭರವಸೆಯನ್ನು ಕುಸಿಯುವಂತೆ ಮಾಡಿತು.
ಪವರ್ಪ್ಲೇನಲ್ಲೇ ಮೂರ್ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಪರದಾಡಿದ ಚೆನ್ನೈ ಪಡೆಗೆ ಬೆನ್ನೆಲುಬಾಗಿ ನಿಂತಿದ್ದು 75 ಲಕ್ಷ ರೂ.ಗೆ ಖರೀದಿಸಿದ ಸರ್ಫರಾಜ್ ಖಾನ್. ಸತತ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಸಿಎಸ್ಕೆಗೆ ಸರ್ಫರಾಜ್ ಒಬ್ಬರೇ, ಸತತವಾಗಿ ಹೆಚ್ಚು ರನ್ಗಳ ಕೊಡುಗೆ ನೀಡಿರುವುದು ಎಂಬುದು ಇಲ್ಲಿ ಗಮನಾರ್ಹ. ತಂಡದ ಬ್ಯಾಟಿಂಗ್ ಲೈನ್ಅಪ್ಗೆ ದೊಡ್ಡ ಶಕ್ತಿ ಆಗಿರುವುದು ಮಿಡಲ್ ಆರ್ಡರ್ನ ಸರ್ಫರಾಜ್ ಖಾನ್. ಅಲ್ಲಿಗೆ ಫ್ರಾಂಚೈಸಿ ಮಾಡಿದ ಎಡವಟ್ಟು ಈಗ ಹಲವರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ. 28 ಕೋಟಿ ರೂ. ಕೊಟ್ಟು ಇಬ್ಬರನ್ನು ಖರೀದಿಸಿದ ಸಿಎಸ್ಕೆಗೆ, 75 ಲಕ್ಷ ರೂ. ಆಟಗಾರನಿಂದ ಬರುತ್ತಿರುವ ಪ್ರದರ್ಶನವನ್ನು ಉಳಿದ ಇಬ್ಬರಿಂದ ತೆಗೆಸುವುದು ಕಷ್ಟಸಾಧ್ಯವಾಗಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಸರ್ಫರಾಜ್ ಖಾನ್, 99 ರನ್ಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ. ಅಲ್ಲಿಗೆ, ತಂಡದ ಪರ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ ಆಗಿದ್ದಾರೆ. ಭಾರತೀಯ ಟೆಸ್ಟ್ ಕ್ರಿಕೆಟ್ ಹಾಗೂ ದೇಶಿಯ ಕ್ರಿಕೆಟ್ನಲ್ಲಿ ತನ್ನ ಪ್ರತಿಭೆಯನ್ನು ಈಗಾಗಲೇ ಸಾಬೀತುಪಡಿಸಿರುವ ಸರ್ಫರಾಜ್ಗೆ ಕೇವಲ 75 ಲಕ್ಷ ರೂ. ಕೊಟ್ಟು ಖರೀದಿ ಮಾಡಿರುವ ಸಿಎಸ್ಕೆ, ಅದೇ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಗೆ ಬರೋಬ್ಬರಿ 24.2 ಕೋಟಿ ರೂ. ನೀಡಿ ಖರೀದಿಸಿದೆ. ಇಲ್ಲೇ ಆಗಿರೋದು ದೊಡ್ಡ ಎಡವಟ್ಟು.
14.20+ 14 ಕೋಟಿ ರೂ. ಕೊಟ್ಟು ಈ ಇಬ್ಬರನ್ನು ಕರೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಯಾವ ಲೆಕ್ಕಾಚಾರದಲ್ಲಿ ಇಷ್ಟೊಂದು ಹಣವನ್ನು ನೀಡಿ, ಅವರನ್ನು ಆಯ್ಕೆ ಮಾಡಿಕೊಂಡಿತು ಎಂಬ ಪ್ರಶ್ನೆ ಸದ್ಯ ಫ್ರಾಂಚೈಸಿ ಹಾಗೂ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇಷ್ಟು ದುಬಾರಿ ಹಣವನ್ನು ಕೊಟ್ಟಿರುವ ಸಿಎಸ್ಕೆ, ಪ್ರಶಾಂತ್ ವೀರ್ ಅವರಿಂದ ಇಲ್ಲಿಯವರೆಗೆ ಒಂದೇ ಒಂದು ಓವರ್ ಕೂಡ ಬೌಲಿಂಗ್ ಮಾಡಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ,(ಏಜೆನ್ಸೀಸ್).