ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಮತ್ತು ಯಜುವೇಂದ್ರ ಚಾಹಲ್​ 
ಕ್ರಿಕೆಟ್

ಈ ಮಾತು ಹೇಳಿದ್ರೆ ಯಾರೂ ಒಪ್ಪುವುದಿಲ್ಲ... ಸಂಜುಗೆ ಫೈನಲ್​ ವಾರ್ನಿಂಗ್​ ಕೊಟ್ಟ ಚಾಹಲ್​​! Sanju Samson

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಸ್ಟಾರ್​ ಆಟಗಾರ ಸಂಜು ಸ್ಯಾಮ್ಸನ್ ವಿಫಲ
  • ಈವರೆಗೂ ನಾಲ್ಕು ಪಂದ್ಯಗಳು ನಡೆದಿದ್ದು, ನಾಲ್ಕರಲ್ಲೂ ತಮ್ಮ ಛಾಪು ಮೂಡಿಸಲು ಸೋತ ಸಂಜು
  • ಎಚ್ಚರಿಕೆ ಸಂದೇಶ ರವಾನಿಸಿದ ಸಂಜು ಅವರ ಟೀಮ್​ ಮೇಟ್​ ಹಾಗೂ ಸ್ನೇಹಿತ ಯಜುವೇಂದ್ರ ಚಾಹಲ್
ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ( Sanju Samson ),​ ಹೀನಾಯವಾಗಿ ವಿಫಲವಾಗಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಈವರೆಗೂ ನಾಲ್ಕು ಪಂದ್ಯಗಳು ನಡೆದಿದ್ದು, ನಾಲ್ಕರಲ್ಲೂ ತಮ್ಮ ಛಾಪು ಮೂಡಿಸಲು ಸಂಜು ಸೋತಿದ್ದಾರೆ. ಅದರಲ್ಲೂ ಮೂರನೇ ಟಿ20 ಪಂದ್ಯದಲ್ಲಿ ರನ್​ ಖಾತೆ ತೆರೆಯದೇ ಪೆವಲಿಯನ್​ಗೆ ಹಿಂತಿರುಗಿದರು. ಹೀಗಾಗಿ, ಸಂಜು ಎಲ್ಲೆಡೆ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಸಂಜು ಅವರ ಟೀಮ್​ ಮೇಟ್​ ಹಾಗೂ ಸ್ನೇಹಿತ ಯಜುವೇಂದ್ರ ಚಾಹಲ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸದ್ಯ ಸಂಜು ಸ್ಯಾಮ್ಸನ್​ ಅವರು ಬ್ಯಾಟಿಂಗ್​ನಲ್ಲಿ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅದರಲ್ಲೂ ಟಿ-20 ವಿಶ್ವಕಪ್‌ಗೂ ಮುನ್ನ ತಮಗೆ ಸಿಕ್ಕ ಸುವರ್ಣಾವಕಾಶಗಳನ್ನು ಕೈಚೆಲ್ಲಿದ್ದಾರೆ. ಹೀಗಾಗಿ, ಇದರ ಹೊಣೆಯನ್ನು ತಾವೇ ಹೊರಬೇಕೆಂದು ಚಾಹಲ್ ಬಹಿರಂಗವಾಗಿಯೇ ಹೇಳಿದ್ದಾರೆ.
ಸಂಜು ಅವರು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸಕ್ರಿಯರಾಗಿದ್ದಾರೆ. ಅವರಂತಹ ಸ್ಟಾರ್​ ಆಟಗಾರ ಒತ್ತಡದಲ್ಲಿ ಕಳಪೆ ಪ್ರದರ್ಶನ ನೀಡಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ವೈಫಲ್ಯವನ್ನು ಅವರು ಒಪ್ಪಿಕೊಳ್ಳಲೇಬೇಕು ಎಂದು ಜಿಯೋ ಹಾಟ್​ಸ್ಟಾರ್​ ಜತೆ ಮಾತನಾಡುವಾಗ ಚಾಹಲ್ ಹೇಳಿದರು.
ಸಂಜು ಅವರು ಐಪಿಎಲ್ ಮತ್ತು ಟೀಮ್​ ಇಂಡಿಯಾಗಾಗಿ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಅವರು ಒತ್ತಡ ಎಂಬ ಪದದ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಸರಣಿಯಲ್ಲಿ ನಾಲ್ಕು ಅವಕಾಶಗಳನ್ನು ಪಡೆಯುವುದು ಸಣ್ಣ ಸಾಧನೆಯಲ್ಲ. ಒಂದು ಅಥವಾ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುವುದು ಸಾಮಾನ್ಯ, ಆದರೆ ಇದು ಅದನ್ನೂ ಮೀರಿದ್ದು ಎಂದು ಚಾಹಲ್ ಹೇಳಿದ್ದಾರೆ.
ಅಂದಹಾಗೆ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಅವರ ಇದುವರೆಗಿನ ಪ್ರದರ್ಶನ ತುಂಬಾ ನಿರಾಶಾದಾಯಕವಾಗಿದೆ. ಏಕದಿನ ಮತ್ತು ಟೆಸ್ಟ್ ನಾಯಕ ಶುಭಮಾನ್ ಗಿಲ್ ಬದಲಿಗೆ ಸಂಜು ಅವರಿಗೆ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವಕಾಶ ನೀಡಲಾಯಿತು. ಆದರೆ, ಕಿವೀಸ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಸಂಜು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಮೊದಲ ಪಂದ್ಯದಲ್ಲಿ 10 ರನ್ ಗಳಿಸಿದ್ದ ಸಂಜು, ಎರಡನೇ ಪಂದ್ಯದಲ್ಲಿ ಆರು ರನ್ ಗಳಿಸಿ ಔಟಾದರು ಮತ್ತು ಮೂರನೇ ಪಂದ್ಯದಲ್ಲಿ ಶೂನ್ಯ ಗಳಿಸಿದರು. ಮೊದಲ ಪಂದ್ಯದಲ್ಲಿ ವೇಗಿ ಕೈಲ್ ಜೇಮಿಸನ್​, ಸಂಜು ಅವರನ್ನು ಔಟ್ ಮಾಡಿದರೆ, ಇತರ ಎರಡು ಪಂದ್ಯಗಳಲ್ಲಿ ಮ್ಯಾಟ್ ಹೆನ್ರಿ ವಿಕೆಟ್ ಪಡೆದರು. ವಿಶಾಖಪಟ್ಟಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ, 15 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 24 ರನ್ ಗಳಿಸಿದರು ಆದರೆ, ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಸಂಜು ಔಟ್ ಆದ ರೀತಿಯನ್ನು ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಜನರು ಟೀಕಿಸಿದರು.
ಇದರ ನಡುವೆ, ಇಶಾನ್ ಕಿಶಾನ್ ಅವರ ಭರ್ಜರಿ ಫಾರ್ಮ್​ನಿಂದಾಗಿ ಸಂಜು ಅವರ ವಿಶ್ವಕಪ್ ಕನಸಿನ ಮೇಲೆ ಕರಿ ನೆರಳು ಬೀರುತ್ತಿದೆ. ಗಾಯದ ಕಾರಣ ಇಶಾನ್ ಕಿಶಾನ್​, ನಾಲ್ಕನೇ ಪಂದ್ಯದಲ್ಲಿ ಆಡಲಿಲ್ಲ. ಆದರೆ, ನಾಳೆ ತಿರುವನಂತಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಶಾನ್ ಮರಳಿದರೆ, ಸಂಜು ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂಜುಗೆ ತನ್ನನ್ನು ತಾನು ಸರಿಪಡಿಸಿಕೊಳ್ಳಲು ಈಗ ಹೆಚ್ಚು ಸಮಯವಿಲ್ಲ. ಇನ್ನೊಂದೆಡೆ ಇಶಾನ್ ಕಿಶನ್ ಮರಳಲು ಸಿದ್ಧವಾಗಿದ್ದಾರೆ. ಐದನೇ ಟಿ20 ಪಂದ್ಯ ಸಂಜು ಅವರ ವೃತ್ತಿಜೀವನದ ಅತ್ಯಂತ ನಿರ್ಣಾಯಕ ಪಂದ್ಯವಾಗಿರುತ್ತದೆ ಎಂದು ಚಾಹಲ್​ ಹೇಳಿದ್ದಾರೆ, (ಏಜೆನ್ಸೀಸ್​).