ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್
- ಐಪಿಎಲ್ ಶುರುವಿಗೂ ಮುನ್ನವೇ ಧೋನಿ ನಿವೃತ್ತಿ ಬಗ್ಗೆ ಮಾತು
- ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್
ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ದಿಗ್ಗಜ ಕ್ರಿಕೆಟಿಗ, ಅಭಿಮಾನಿಗಳ ನೆಚ್ಚಿನ 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಇದೀಗ ಐಪಿಎಲ್ 19ನೇ ಆವೃತ್ತಿಯಲ್ಲಿ ತಮ್ಮ ಅಭಿಮಾನಿಗಳ ಎದುರು ಬರಲು ಸಜ್ಜಾಗಿದ್ದಾರೆ. 44ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ, ಐದು ಬಾರಿ ಸಿಎಸ್ಕೆ ತಂಡವನ್ನು ಚಾಂಪಿಯನ್ಸ್ ಪಟ್ಟಕ್ಕೇರಿಸಿದ್ದು ಇತಿಹಾಸ. ಸದ್ಯ ನಾಯಕತ್ವದಿಂದ ಹಿಂದೆ ಸರಿದಿರುವ ಧೋನಿ, ಫ್ಯಾನ್ಸ್ಗಳ ಆಸೆಗೆ ಮಣಿದು ಮತ್ತೊಂದು ವರ್ಷ ಯುವ ಕ್ರಿಕೆಟಿಗರೊಡನೆ ಪೈಪೋಟಿಗಿಳಿಯಲು ಐಪಿಎಲ್ ಕಣಕ್ಕಿಳಿಯುತ್ತಿರುವುದು ವಿಶೇಷ.
ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಸೀಸನ್ ಆಡುತ್ತಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು, ಸೋಮವಾರ (ಮಾ.30) ಗುವಾಹಟಿಯ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೂರನೇ ಐಪಿಎಲ್ ಪಂದ್ಯಕ್ಕೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕಾರಣ, ಧೋನಿ.
ಸದಾ ಇನ್ನೊಂದು ವರ್ಷ, ಮತ್ತೊಂದು ಸೀಸನ್ ಆಡುವಂತೆ ಮಾಹಿಯನ್ನು ಪ್ರೀತಿಯಿಂದ ಕೇಳಿಕೊಳ್ಳುವ ಫ್ಯಾನ್ಸ್ಗೆ ಅವರ ನಿವೃತ್ತಿ ಬಗ್ಗೆ ಯಾರಾದರೂ ಉಸಿರೆತ್ತಿದರೆ ಕಿಂಚಿತ್ತು ಇಷ್ಟವಾಗಲ್ಲ. ಪ್ರತಿಬಾರಿ ಧೋನಿಯ ಐಪಿಎಲ್ ಇದೇ ಕೊನೆ ಎನ್ನುವುದು ಫೈನಲ್ ಹತ್ತಿರವಾಗುತ್ತಿದ್ದಂತೆ ಚರ್ಚೆಗೆ ಬರುತ್ತೆ. ಆದರೆ, ಈ ಬಾರಿ ಮೊದಲೇ ಬಂದಿರುವುದು ಆಶ್ಚರ್ಯ. ಅದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ್ ಇರ್ಫಾನ್ ಪಠಾಣ್ ಅವರ ಬಾಯಿಂದ ಅನ್ನೋದು ಗಮನಾರ್ಹ.
ಸಿಎಸ್ಕೆಗೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿರುವ ಸಂಜು ಸ್ಯಾಮ್ಸನ್ ಆಗಮನವನ್ನು ಮುಂದಿಟ್ಟು ಮಾತನಾಡಿದ ಪಠಾಣ್, ಧೋನಿ ಅವರನ್ನು ಹೋಲುವ ಎಲ್ಲ ಕ್ವಾಲಿಟಿ ಸ್ಯಾಮ್ಸನ್ ಅವರಲ್ಲಿದೆ. ಈ ವರ್ಷ ಧೋನಿ ಅವರ ಕಡೆಯ ಐಪಿಎಲ್ ಸೀಸನ್. ಇದು ಕೊನೆಯದಾಗಿ ದಿಗ್ಗಜ ಕ್ರಿಕೆಟಿಗನಿಗೆ ಬೀಳ್ಕೊಡುವ ಸಮಯ. ಇದಕ್ಕೆ ಒಂದಷ್ಟು ಬೆಳವಣಿಗೆಗಳೇ ಪುಷ್ಠಿ ಎಂದು ಹೇಳಿದರು.
ಈಗ ಚೆನ್ನೈ ಸೆಟ್ಅಪ್ ನೋಡಿದರೆ, ಸಾಕಷ್ಟು ಬದಲಾವಣೆ ಆಗಿದೆ. ಸಿಎಸ್ಕೆ ಪರ ಮುಂದಿನ ಐದು ವರ್ಷ ಆಡುವಂತಹ ವಿಕೆಟ್ ಕೀಪರ್-ಬ್ಯಾಟರ್ ಅನ್ನೇ ತಂಡಕ್ಕೆ ತರಲಾಗಿದೆ. ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಫ್ರಾಂಚೈಸಿ ಈ ನಿರ್ಧಾರವನ್ನು ಕೈಗೊಂಡಿದೆ ಅನಿಸುತ್ತಿದೆ. ಸಂಜು ಸ್ಯಾಮ್ಸನ್ ಮುಂದಿನ ಸಿಎಸ್ಕೆ ಮುಖವಾಣಿ. ಧೋನಿ ಈಗ ಬ್ಯಾಟನ್ ಅನ್ನು ತಮ್ಮಷ್ಟೇ ಪ್ರಭಾವ ಬೀರುವ ಹಾಗೂ ಅಭಿಮಾನಿಗಳೊಂದಿಗೆ ಉತ್ತಮ ಸಂಬಂಧ, ಸಂಪರ್ಕ ಹೊಂದುವ ವ್ಯಕ್ತಿಗೆ ಪಾಸ್ ಮಾಡಲು ನೋಡುತ್ತಿದ್ದಾರೆ. ಪ್ರಸ್ತುತ, ಸಂಜು ಎಂಟ್ರಿ ನೋಡಿದರೆ, ಅವರೇ ಸೂಕ್ತ ಎಂದು ಮಾಹಿ ಬ್ಯಾಟನ್ ಕೊಟ್ಟರೂ ಆಶ್ಚರ್ಯವಿಲ್ಲ. ನನ್ನ ಪ್ರಕಾರ, ನಿವೃತ್ತಿಗೆ ಇದು ಅವರಿಗೆ ಸೂಕ್ತ ಸಮಯ ಎಂದರು,(ಏಜೆನ್ಸೀಸ್).