ಕಳಪೆ ಆಟ ಮುಂದುವರಿಸಿದ ಸಿಎಸ್ಕೆ
CSK vs RCB: ನಿನ್ನೆ (ಏ.05) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 19ನೇ ಆವೃತ್ತಿಯ 11ನೇ ಪಂದ್ಯದಲ್ಲಿ ಆರ್ಸಿಬಿ 43 ರನ್ಗಳ ಭರ್ಜರಿ ಜಯ ಸಾಧಿಸಿತು. ಮತ್ತೊಂದೆಡೆ, ರುತುರಾಜ್ ಪಡೆಗೆ ಇದು ಸತತ ಮೂರನೇ ಹೀನಾಯ ಸೋಲು.
ಈ ಬಾರಿಯ ಐಪಿಎಲ್ 2026ರ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಂಡಿದೆಯೇ ಹೊರತು ಒಂದೇ ಒಂದು ಗೆಲುವು ನೋಡುವಲ್ಲಿ ಯಶಸ್ವಿಯಾಗಿಲ್ಲ. ತನ್ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 43 ರನ್‌ಗಳಿಂದ ಸೋತ ರುತುರಾಜ್ ಗಾಯಕ್ವಾಡ್ ಪಡೆ, ತಮ್ಮ ಅಪಾರ ಅಭಿಮಾನಿಗಳ ಬಳಗವನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ.
ಎಲ್ಲದರಲ್ಲೂ ಫ್ಲಾಪ್!
ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎಲ್ಲದರಲ್ಲೂ ತೀರ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ರುತುರಾಜ್ ಗಾಯಕ್ವಾಡ್ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವವನ್ನು ನೋಡುತ್ತಿಲ್ಲ. ಇದು ತಂಡದ ಸೋಲಿಗೆ ಮೂಲ ಕಾರಣ. ಇದರೊಟ್ಟಿಗೆ ಭಾರೀ ಭರವಸೆಯನ್ನು ಮೂಡಿಸಿದ್ದ ಸಂಜು ಸ್ಯಾಮ್ಸನ್ ಕೂಡ ಸತತವಾಗಿ ಫ್ಲಾಪ್ ಶೋ ಮುಂದುವರಿಸಿರುವುದು ಸಿಎಸ್ಕೆ ಅಭಿಮಾನಿಗಳನ್ನು ಮಂಕಾಗಿಸಿದೆ.
ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಅತ್ಯಂತ ಬಲಿಷ್ಠ ಫ್ರಾಂಚೈಸಿ ಎಂದೇ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇರೂರಿದೆ. ಹೀಗಿರುವಾಗ, ಅಂತಹ ಒಂದು ತಂಡದಿಂದಲೇ ಈ ಮಟ್ಟಿಗಿನ ಕಳಪೆ ಪ್ರದರ್ಶನ ಬರುತ್ತಿರುವುದು ಆರ್ಸಿಬಿ ಅಭಿಮಾನಿಗಳನ್ನು ಬಿಟ್ಟರೆ ಇನ್ಯಾರಿಂದಲೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಕ್ಯಾಚ್ ಬಿಡುವ ದುಬೆ, ಭರವಸೆಯ ಓಪನರ್ಗಳಿಂದಲೇ ಫ್ಲಾಪ್ ಶೋ. ಮತ್ತೊಂದೆಡೆ, ಬೌಲರ್ಗಳು ಕೂಡ ಕಮಾಲ್ ಮಾಡುತ್ತಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ, 14.2 ಕೋಟಿ ರೂ. ಕೊಟ್ಟು ಖರೀದಿಸಿದ ಆಟಗಾರನಿಗೆ ಬೌಲಿಂಗ್ ಮಾಡಲು ಅವಕಾಶ ಕೊಡದಿರುವುದು ಹಲವರಲ್ಲಿ ಗೊಂದಲ ಮೂಡಿಸಿದೆ.
ರವೀಂದ್ರ ಜಡೇಜಾರನ್ನು ರಾಜಸ್ಥಾನ ರಾಯಲ್ಸ್ಗೆ ಟ್ರೇಡ್ ಮಾಡಿದ ಸಿಎಸ್ಕೆ, ಅವರ ಸ್ಥಾನದಲ್ಲಿ ಮತ್ತೊಬ್ಬ ಆಲ್ರೌಂಡರ್ ನೋಡಲು ಬಯಸಿತು. ಹೀಗಾಗಿಯೇ, ಉತ್ತರ ಪ್ರದೇಶದ ಅನ್ಕ್ಯಾಪ್ಡ್ ಆಲ್ರೌಂಡರ್ ಪ್ರಶಾಂತ್ ವೀರ್ ಅವರನ್ನು ತಂಡಕ್ಕೆ ಕರೆದುಕೊಂಡಿತು. ಒಬ್ಬ ಎಡಗೈ ಸ್ಪಿನ್ನರ್ ಅನ್ನೇ ಖರೀದಿಸಿರುವ ಫ್ರಾಂಚೈಸಿ, ಅವರಿಂದ ಕೇವಲ ಬ್ಯಾಟಿಂಗ್ ಮಾಡಿಸುತ್ತಿದೆಯೇ ವಿನಃ ಬೌಲಿಂಗ್ ಮಾಡಲು ಅವಕಾಶ ಕೊಡುತ್ತಿಲ್ಲ. ಇದು ತಂಡದ ಸೋಲಿಗೆ ಇನ್ನೊಂದು ಬಲವಾದ ಕಾರಣ. ಅವಕಾಶ ಕೊಡದೆ ಹೀಗೆ ಆಡಿದರೆ, ಮುಂದಿನ ದಿನಗಳಲ್ಲಿ ಸಿಎಸ್ಕೆ ಶೀಘ್ರವೇ ಲೀಗ್ನಿಂದ ಹೊರಬೀಳುವುದು ಖಚಿತ,(ಏಜೆನ್ಸೀಸ್).