ಐಪಿಎಲ್​ 2026 
ಕ್ರಿಕೆಟ್

ಆರ್​ಸಿಬಿ ನಂಬರ್​ 1... ಅಗ್ರ 4 ಸ್ಥಾನಕ್ಕೆ 8 ತಂಡಗಳ ಬಿರುಸಿನ ಪೈಪೋಟಿ! ಹೀಗಿದೆ ಪ್ಲೇಆಫ್​ ಲೆಕ್ಕಾಚಾರ | ​IPL Playoffs Scenario

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ 19ನೇ ಆವೃತ್ತಿಯ ಪ್ಲೇಆಫ್ ರೇಸ್​ನಲ್ಲಿ 8 ತಂಡಗಳು
  • ಪ್ಲೇಆಫ್ ರೇಸ್​ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್​, ಎಲ್​ಎಸ್​ಜಿ
  • ಐಪಿಎಲ್​ ಅಂಕಪಟ್ಟಿಯ ಅಗ್ರ 4 ಸ್ಥಾನಗಳಿಗೆ 8 ತಂಡಗಳ ಬಿರುಸಿನ ಪೈಪೋಟಿ
IPL Playoffs Scenario: ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯು ಕ್ರಿಕೆಟ್​ ಪ್ರಿಯರಿಗೆ ಭಾರೀ ಮನರಂಜನೆ ನೀಡುತ್ತಿದೆ ಎಂಬುದಕ್ಕೆ ನಿನ್ನೆ (ಮೇ.10) ನಡೆದ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವೇ ಸಾಕ್ಷಿ.
ಕೊನೆಯ ಬಾಲ್​ವರೆಗೂ ತಲುಪಿದ ಪಂದ್ಯದಲ್ಲಿ ಆರ್​ಸಿಬಿ ರೋಚಕ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಈ ಮೂಲಕ ತಾವು ಪ್ಲೇಆಫ್​ಗೆ ಲಗ್ಗೆಯಿಡುವುದು ಬಹುತೇಕ ಖಚಿತ ಎಂದು ಉಳಿದ 7 ತಂಡಗಳಿಗೆ ಪರೋಕ್ಷವಾಗಿ ಸವಾಲು ಹಾಕಿದೆ. ಈ ನಿಟ್ಟಿನಲ್ಲಿ ಸದ್ಯ ಪ್ಲೇಆಫ್ ರೇಸ್ ಇನ್ನೂ ಕುತೂಹಲಕಾರಿಯಾಗಿದ್ದು, ಅಗ್ರ ನಾಲ್ಕು ಸ್ಥಾನಗಳಲ್ಲಿ ಯಾವ ತಂಡಗಳು ಇರಲಿದೆ? ಯಾರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದರ ಲೆಕ್ಕಾಚಾರ ಹೀಗಿದೆ ಗಮನಿಸಿ.

ಅಗ್ರ ಸ್ಥಾನದಲ್ಲಿ ಆರ್​ಸಿಬಿ

ಪ್ರಸ್ತುತ 11 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. +1.103 ನಿವ್ವಳ ರನ್ ರೇಟ್​ ಹೊಂದಿದ್ದು, ಇದು ಇತರ ತಂಡಗಳಿಗಿಂತ ಉತ್ತಮವಾಗಿದೆ. ಆದರೂ, ಪ್ಲೇಆಫ್ ಸ್ಥಾನ ಅಧಿಕೃತವಾಗಿ ಖಚಿತಪಡಿಸಲು ಇನ್ನೂ ಎರಡು ಗೆಲುವುಗಳ ಅಗತ್ಯವಿದೆ. ಸಾಮಾನ್ಯವಾಗಿ ಪ್ಲೇಆಫ್‌ಗೆ ಲಗ್ಗೆಯಿಡಲು 16 ಪಾಯಿಂಟ್ಸ್​ ಬೇಕು. ಹೀಗಾಗಿ, ಒಂದು ಪಂದ್ಯ ಗೆದ್ದರೂ ಸಾಕು. ಎರಡೂ ಮ್ಯಾಚ್​ಗಳನ್ನು ಆರ್‌ಸಿಬಿ ಗೆದ್ದರೆ, ಅಗ್ರ 2ರಲ್ಲಿ ಸ್ಥಾನ ಪಡೆದು ನೇರವಾಗಿ ಕ್ವಾಲಿಫೈಯರ್-1ಗೆ ಅರ್ಹತೆ ಪಡೆಯುವ ಅವಕಾಶವಿದೆ.

ಎಸ್​ಆರ್​ಎಚ್, ಟೈಟನ್ಸ್​​ಗೆ 2 ಗೆಲುವು

ಸನ್‌ರೈಸರ್ಸ್ ಹೈದರಾಬಾದ್ 14 ಅಂಕಗಳನ್ನು ಹೊಂದಿದ್ದರೂ ನಿವ್ವಳ ರನ್ ರೇಟ್‌ನಲ್ಲಿ (+0.737) ಆರ್‌ಸಿಬಿಗಿಂತ ಹಿಂದಿದೆ. ಹೀಗಿರುವಾಗ, ಆಡಲಿರುವ ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ, ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಮೇ.22ರಂದು ಆರ್‌ಸಿಬಿ ವಿರುದ್ಧದ ಪಂದ್ಯವು ಅಗ್ರ 2 ಸ್ಥಾನಗಳ ಮೇಲೆ ನಿರ್ಣಾಯಕ ಪರಿಣಾಮ ಬೀರುವ ಸಾಧ್ಯತೆಯಿದೆ. ಗುಜರಾತ್ ಟೈಟಾನ್ಸ್ ಕೂಡ 14 ಅಂಕಗಳೊಂದಿಗೆ ಕಣದಲ್ಲಿದೆ. ಗಿಲ್​ ಪಡೆಯದ್ದು ರನ್ ರೇಟ್ (+0.228) ಕಡಿಮೆಯಾಗಿದ್ದು, ಇನ್ನೂ ಎರಡು ಗೆಲುವುಗಳು ಬೇಕೇ ಬೇಕಿದೆ. ಮೇ.12ರಂದು ನಡೆಯಲಿರುವ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯ ಗುಜರಾತ್‌ಗೆ ನಿರ್ಣಾಯಕ ಎಂಬುದು ಗಮನಾರ್ಹ.

ಪಂಜಾಬ್​ಗೆ ಗೆಲುವು ಮುಖ್ಯ

ಪಂಜಾಬ್ ಕಿಂಗ್ಸ್ ಪ್ರಸ್ತುತ ಅತ್ಯಂತ ಅನುಕೂಲಕರ ಸ್ಥಾನದಲ್ಲಿರುವ ತಂಡವಾಗಿದೆ. 10 ಪಂದ್ಯಗಳಲ್ಲಿ 13 ಅಂಕಗಳನ್ನು ಗಳಿಸಿರುವ ಪಂಜಾಬ್ ಇನ್ನೂ ನಾಲ್ಕು ಪಂದ್ಯಗಳನ್ನು ಆಡಲಿದೆ. ಇದು ಅವರಿಗೆ ಪ್ಲಸ್​! ಇವುಗಳಲ್ಲಿ ಎರಡರಲ್ಲಿ ಗೆದ್ದರೆ, ತಂಡಕ್ಕೆ 17 ಅಂಕಗಳು ಸಿಗಲಿದೆ. ಆಗ ಪ್ಲೇಆಫ್‌ಗೆ ಎಂಟ್ರಿ ಕೊಡುವುದು ಇನ್ನಷ್ಟು ಸುಲಭವಾಗಲಿದೆ ಮತ್ತು ಸ್ಥಾನ ಬಹುತೇಕ ಖಚಿತವಾಗಲಿದೆ.

ಚೆನ್ನೈಗೆ ಕನಿಷ್ಠ ಎರಡು ಗೆಲುವು

ಐದು ಬಾರಿಯ ಚಾಂಪಿಯನ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಕಠಿಣ ಪರಿಸ್ಥಿತಿಯಲ್ಲಿದೆ. ಪ್ರಸ್ತುತ 12 ಅಂಕಗಳನ್ನು ಹೊಂದಿರುವ ಸಿಎಸ್​ಕೆ, ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಲೇಬೇಕು. ತಂಡದ ನಿವ್ವಳ ರನ್ ರೇಟ್​ (+0.185) ಕಡಿಮೆ ಇರುವುದರಿಂದ ಎರಡು ಪಂದ್ಯದಲ್ಲಿ ಹೆಚ್ಚಿನ ರನ್​ನಿಂದ ಗೆದ್ದರೆ ಉತ್ತಮ. ಇಲ್ಲವೇ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದು ಪ್ಲೇಆಫ್​ ಸ್ಥಾನ ಖಚಿತಪಡಿಸಿಕೊಳ್ಳಬಹುದು.

ರಾಜಸ್ಥಾನಕ್ಕೆ ಒತ್ತಡ

ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದ ರಾಜಸ್ಥಾನ ರಾಯಲ್ಸ್ ಇದೀಗ ಸರಣಿ ಸೋಲುಗಳನ್ನು ಅನುಭಿಸಿದೆ. 12 ಅಂಕಗಳೊಂದಿಗೆ ಸಿಎಸ್‌ಕೆ ಜೊತೆ ಸಮನಾಗಿರುವ ಆರ್​ಆರ್​ನ ನಿವ್ವಳ ರನ್ ರೇಟ್​ (+0.082) ಕಡಿಮೆಯಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲುಗಳನ್ನು ಅನುಭವಿಸಿದ ನಂತರ ತಂಡದ ಮೇಲಿನ ಒತ್ತಡ ಹೆಚ್ಚಾಗಿದೆ. ಸಿಎಸ್‌ಕೆ ಜೊತೆಗೆ ರಾಜಸ್ಥಾನ ಅಗ್ರ 4ನೇ ನಾಲ್ಕನೇ ಸ್ಥಾನಕ್ಕಾಗಿ ಹೋರಾಡುವ ಸಾಧ್ಯತೆಯಿದೆ.

ಕೆಕೆಆರ್​ ಪರಿಸ್ಥಿತಿ ಜಟಿಲ

ಕೋಲ್ಕತ್ತಾ ನೈಟ್ ರೈಡರ್ಸ್ ಪರಿಸ್ಥಿತಿ ಈಗ ಇನ್ನಷ್ಟು ಜಟಿಲವಾಗಿದೆ. ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ, ಅವರ ಪ್ಲೇಆಫ್ ಕನಸು ಈಡೇರಲಿದೆ. ಆಗ 17 ಅಂಕಗಳೊಂದಿಗೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅಕಸ್ಮಾತ್​ ಒಂದೇ ಒಂದು ಸೋಲನ್ನು ಎದುರಿಸಿದರೂ, ಮನೆಗೆ ಹೋಗುವುದಂತು ಬಹುತೇಕ ಖಚಿತ.

ಡೆಲ್ಲಿ ಡೌಟ್​

ಡೆಲ್ಲಿ ಕ್ಯಾಪಿಟಲ್ಸ್‌ನ ಪರಿಸ್ಥಿತಿ ಕೂಡ ಕಷ್ಟಕರವೇ. ತಂಡದ ನಿವ್ವಳ ರನ್ ರೇಟ್​ (-1.154) ಪ್ರಸ್ತುತ ಕಳಪೆಯಾಗಿದೆ. ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದರೆ ಮಾತ್ರ ಪ್ಲೇಆಫ್​ ಕನಸು ಈಡೇರುವ ಸಾಧ್ಯತೆಗಳಿವೆ,(ಏಜೆನ್ಸೀಸ್).