ಕೊಹ್ಲಿಗೆ ಸವಾಲು ಹಾಕಬಲ್ಲ ಆಟಗಾರ ಯಾರಾದ್ರೂ ಇದ್ದರೆ ಅದು ಈತ ಮಾತ್ರ... ಇರ್ಫಾನ್ ಪಠಾಣ್ ಅಚ್ಚರಿ ಹೇಳಿಕೆ! Virat Kohli
- ವಿರಾಟ್ ಕೊಹ್ಲಿ ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ
- ಕಿಂಗ್ ಎಂದೇ ಕರೆಸಿಕೊಳ್ಳುವ ಕೊಹ್ಲಿಗೆ ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗವಿದೆ
- ಐಪಿಎಲ್‌ನಲ್ಲಿ ಅನಭಿಷಿಕ್ತ ದೊರೆಯಂತೆ ಮರೆಯುತ್ತಿರುವ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ
- ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಡಿರುವ ಮಾತುಗಳು ಇದೀಗ ಎಲ್ಲರ ಗಮನ ಸೆಳೆದಿದೆ
ನವದೆಹಲಿ: ವಿರಾಟ್ ಕೊಹ್ಲಿ ( Virat Kohli ) ಈ ಹೆಸರಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ. ದಾಖಲೆಗಳ ಸರದಾರ, ರನ್ ಮೆಷಿನ್, ಚೇಸ್ ಮಾಸ್ಟರ್ ಹಾಗೂ ಕ್ರಿಕೆಟ್ ಲೋಕದ ಕಿಂಗ್ ಎಂದೇ ಕರೆಸಿಕೊಳ್ಳುವ ಕೊಹ್ಲಿ, ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಕ್ರೀಸ್ಗೆ ಬಂದರೆ, ಎದುರಾಳಿ ಬೌಲರ್ಗಳ ಬೆವರಿಳಿಸೋ ಈ ಕ್ಲಾಸಿಕ್ ಬ್ಯಾಟರ್, ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಇಡೀ ತಂಡಕ್ಕೆ ಉತ್ಸಾಹದ ಚಿಲುಮೆಯಾಗಿರುತ್ತಾರೆ. ಫಿಟ್ನೆಸ್ನಲ್ಲಂತೂ ಎರಡು ಮಾತೇ ಇಲ್ಲ. ಹಿರಿಯ ಆಟಗಾರನಾಗಿದ್ದರೂ ಇಂದಿಗೂ ಯುವಕರು ನಾಚುವಂತೆ ಬ್ಯಾಟ್ ಬೀಸುವ ಕೊಹ್ಲಿ, ಮೈದಾನದಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸುತ್ತಿದ್ದಾರೆ. ಇಂಥಾ ದಿಗ್ಗಜ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಡಿರುವ ಮಾತುಗಳು ಇದೀಗ ಎಲ್ಲರ ಗಮನ ಸೆಳೆದಿದೆ.
ಅಂದಹಾಗೆ, ವಿರಾಟ್ ಕೊಹ್ಲಿ ಐಪಿಎಲ್ ಶುರುವಾದಾಗಿನಿಂದ ಒಂದೇ ತಂಡಕ್ಕೆ ಆಡುತ್ತಿರುವ ಏಕೈಕ ಆಟಗಾರ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಐಪಿಎಲ್ ಹುಟ್ಟಿದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಕರ್ನಾಟಕದ ದತ್ತು ಪುತ್ರನೆಂದು ಕರೆಯಲಾಗುತ್ತದೆ. ಐಪಿಎಲ್‌ನಲ್ಲಿ ಅನಭಿಷಿಕ್ತ ದೊರೆಯಂತೆ ಮರೆಯುತ್ತಿರುವ ಕೊಹ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಮತ್ತೊಂದು ಮೈಲುಗಲ್ಲನ್ನು ಕೊಹ್ಲಿ ತಲುಪಿದ್ದಾರೆ.
ಹೌದು, ನಿನ್ನೆ ತಮ್ಮ ತವರು ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 9000 ರನ್‌ಗಳ ಮೈಲುಗಲ್ಲು ತಲುಪಿದರು. ಐಪಿಎಲ್ ಇತಿಹಾಸದಲ್ಲೇ 9 ಸಾವಿರ ರನ್ ಪೂರೈಸಿದ ಏಕೈಕ ಆಟಗಾರ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 23 ರನ್ ಬಾರಿಸುವ ಮೂಲಕ ಇಂಥಾ ಐತಿಹಾಸಿಕ ಸಾಧನೆಗೆ ಭಾಜನರಾದರು.
ಕೊಹ್ಲಿಯ ಈ ಸಾಧನೆಯನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಕೊಂಡಾಡಿದ್ದಾರೆ. ತಮ್ಮ ಎಕ್ಸ್ನಲ್ಲಿ ಬರೆದುಕೊಂಡಿರುವ ಪಠಾಣ್, ವಿರಾಟ್ ಕೊಹ್ಲಿಗೆ ಯಾರಾದರೂ ಸವಾಲು ಹಾಕಲು ಸಾಧ್ಯವಾದರೆ, ಅದು ಬೇರೆ ಯಾರೂ ಅಲ್ಲ ಕೊಹ್ಲಿಯೇ. ಕೊಹ್ಲಿ ಬಿಟ್ಟು ಬೇರೆ ಯಾರೂ ಕೊಹ್ಲಿಗೆ ಸರಿಸಾಟಿ ಆಗಲಾರರು. ಅದಕ್ಕಾಗಿಯೇ ಐಪಿಎಲ್‌ನಲ್ಲಿ 9,000 ರನ್‌ಗಳ ಈ 'ಮೌಂಟ್ ಎವರೆಸ್ಟ್' ಅವರಿಗೆ ಕೇವಲ ಒಂದು ಮೆಟ್ಟಿಲಾಗಿದ್ದು, ಅದು ಎಂದಿಗೂ ಅವರ ಅಂತಿಮ ಗುರಿಯಲ್ಲ ಎಂದು ಪಠಾಣ್ ಹೇಳಿದ್ದಾರೆ.
ಅಂದಹಾಗೆ, ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಆರ್‌ಸಿಬಿ, ಉತ್ತಮ ರನ್ ರೇಟ್ ಹೊಂದಿದೆ. ಈವರೆಗೂ ಎಂಟು ಪಂದ್ಯಗಳಾಡಿರುವ ಆರ್‌ಸಿಬಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ಎಂಟು ಪಂದ್ಯಗಳಿಂದ ಐದು ಸೋಲುಗಳೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ, (ಏಜೆನ್ಸೀಸ್).