- ನಿನ್ನೆ (ಏ.27) ನಡೆದ ಡಿಸಿ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ
- 19 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುವುದು ಸುಲಭದ ಮಾತಲ್ಲ
- ಯಾರೂ ಮಾಡದ ಅಪರೂಪದ ಸಾಧನೆ ವಿರಾಟ್ ಕೊಹ್ಲಿ ಹೆಸರಿಗೆ
- ಈ ವಿಶೇಷ ಗೌರವ ಸಾಧಿಸಿದ ಏಕೈಕ ಆಟಗಾರ 'ರನ್ ಮಷಿನ್'
Virat Kohli: ನಿನ್ನೆ (ಏ.27) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು. ಒಂದೆಡೆ, ಆರ್ಸಿಬಿಗೆ ಮತ್ತೊಂದು ಗೆಲುವಿನ ಸಂಭ್ರಮವಾದರೆ, ಅತ್ತ ಒಂದೇ ಫ್ರಾಂಚೈಸಿಗೆ 19 ವರ್ಷಗಳಿಂದ ಆಡುತ್ತಿರುವ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರಿಂದ ಬಂದ ಒಟ್ಟು ರನ್‌ಗಳ ಸಂಖ್ಯೆ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಕಳೆದ 19 ವರ್ಷಗಳಿಂದ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ವಿರಾಟ್ ಕೊಹ್ಲಿ, ಈ ಅಪರೂಪದ ಸಾಧನೆ ಮಾಡಿರುವುದು ಸದ್ಯ ಆರ್‌ಸಿಬಿ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಐಪಿಎಲ್‌ನಲ್ಲಿ 9,000 ರನ್ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಕೊಹ್ಲಿ ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 11 ರನ್‌ಗಳನ್ನು ಬಾರಿಸಿದ ಕೂಡಲೇ 9 ಸಾವಿರ ರನ್‌ಗಳ ಅಪರೂಪದ ದಾಖಲೆ ವಿರಾಟ್ ಹೆಸರಿಗೆ ಸೇರಿತು.
ಐಪಿಎಲ್ ಆರಂಭವಾದಾಗಿನಿಂದ (2008) ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಒಂದೇ ಫ್ರಾಂಚೈಸಿ ಪರ ರನ್‌ಗಳ ಹೊಳೆ ಹರಿಸಿರುವ ಕಿಂಗ್ ಕೊಹ್ಲಿ, ಆಡಿರುವ 267 ಇನ್ನಿಂಗ್ಸ್‌ಗಳಲ್ಲಿ ಒಟ್ಟು 9012 ರನ್‌ಗಳನ್ನು ಕಲೆಹಾಕಿದ್ದಾರೆ. ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಪಟ್ಟಿಯಲ್ಲಿ ವಿರಾಟ್ ಅಗ್ರಸ್ಥಾನದಲ್ಲಿದ್ದರೆ, ಅವರ ನಂತರದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಹಿಟ್‌ಮ್ಯಾನ್, 271 ಇನ್ನಿಂಗ್ಸ್‌ಗಳಲ್ಲಿ 7183 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಅಧಿಕ ರನ್ ಗಳಿಸಿದ ಆಟಗಾರರಿವರು
- ವಿರಾಟ್ ಕೊಹ್ಲಿ - 267 ಇನ್ನಿಂಗ್ಸ್, 9012 ರನ್
- ರೋಹಿತ್ ಶರ್ಮಾ - 271 ಇನ್ನಿಂಗ್ಸ್, 7183 ರನ್
- ಶಿಖರ್ ಧವನ್ - 221 ಇನ್ನಿಂಗ್ಸ್, 6769 ರನ್
- ಡೇವಿಡ್ ವಾರ್ನರ್ - 184 ಇನ್ನಿಂಗ್ಸ್, 6656 ರನ್
- ಕೆ.ಎಲ್. ರಾಹುಲ್ - 144 ಇನ್ನಿಂಗ್ಸ್, 5580 ರನ್
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 16.3 ಓವರ್‌ಗಳಲ್ಲಿ 75 ರನ್‌ಗೆ ಆಲೌಟ್ ಆಯಿತು. ಅಭಿಷೇಕ್ ಪೊರೆಲ್ (30 ರನ್, 33 ಎಸೆತಗಳಲ್ಲಿ 3 ಬೌಂಡರಿ), ಡೇವಿಡ್ ಮಿಲ್ಲರ್ (19 ರನ್, 18 ಎಸೆತಗಳಲ್ಲಿ 3 ಬೌಂಡರಿ), ಮತ್ತು ಕೈಲ್ ಜೇಮಿಸನ್ (12 ರನ್, 1 ಬೌಂಡರಿ, 13 ಎಸೆತಗಳಲ್ಲಿ 1 ಸಿಕ್ಸ್) ಮಾತ್ರ ಎರಡಂಕಿ ಗಳಿಸಿದರು. ಆರ್‌ಸಿಬಿ ಪರ ಕಮಾಲ್ ಮಾಡಿದ ಬೌಲರ್‌ಗಳಲ್ಲಿ ಜೋಶ್ ಹೇಜಲ್‌ವುಡ್ 4, ಭುವನೇಶ್ವರ್ ಕುಮಾರ್ 3, ರಸಿಕ್ ಸಲಾಂದಾರ್, ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ, ಕೇವಲ 6.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 76 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ದೇವದತ್ ಪಡಿಕ್ಕಲ್ (ಅಜೇಯ 34 ರನ್, 13 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (ಅಜೇಯ 23 ರನ್, 15 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್), ಮತ್ತು ಜಾಕೋಬ್ ಬೆಥೆಲ್ (20 ರನ್, 11 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ರಜತ್ ಪಡೆ ಪಂದ್ಯ ಗೆದ್ದು ಬೀಗಿತು,(ಏಜೆನ್ಸೀಸ್).