ಮೂರು ಬಾಲಿಗೆ ಮೂರು ವಿಕೆಟ್ ಕಿತ್ತರೂ ಹ್ಯಾಟ್ರಿಕ್ ಎಂದು ಪರಿಗಣಿಸಲಿಲ್ಲ! ಅಪರೂಪದ ಪ್ರಸಂಗ, ಹೀಗಿದೆ ಕಾರಣ...Hat-trick
- ಸದರ್ನ್ ಬ್ರೇವ್ ಎದುರು ಬರ್ಮಿಂಗ್ಹ್ಯಾಮ್ ತಂಡಕ್ಕೆ ರೋಚಕ ಸೋಲು
- ಲ್ಯೂಕ್ ವುಡ್ ಸತತ ಎರಡು ವಿಕೆಟ್ ಪಡೆದರೂ ತಪ್ಪಿದ ಹ್ಯಾಟ್ರಿಕ್
- ದ ಹಂಡ್ರೆಡ್ ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡಕ್ಕೆ ಮೊದಲ ಜಯ
- ಸದರ್ನ್ ಬ್ರೇವ್ ತಂಡದ ವಿರುದ್ಧ ಹನ್ನೆರಡು ರನ್ ಅಂತರದ ಸೋಲು ಕಂಡ ಫೀನಿಕ್ಸ್
Hat-trick : ಪ್ರಸ್ತುತ ನಡೆಯುತ್ತಿರುವ ದ ಹಂಡ್ರೆಡ್ 2026 ಟೂರ್ನಿಯಲ್ಲಿ ಸದರ್ನ್ ಬ್ರೇವ್ ಹಾಗೂ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ನಡುವಿನ ಪಂದ್ಯದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ಗಳು ಪತನಗೊಂಡರೂ ಬೌಲರ್ ಹ್ಯಾಟ್ರಿಕ್ ದಾಖಲಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಸದರ್ನ್ ಬ್ರೇವ್ ತಂಡದ ವೇಗಿ ಲ್ಯೂಕ್ ವುಡ್ ಪಂದ್ಯದ ಕೊನೆಯ ಐದು ಎಸೆತಗಳನ್ನು ಎಸೆದರು. ಅವರು ಇನ್ನಿಂಗ್ಸ್ನ 96 ಮತ್ತು 97ನೇ ಎಸೆತಗಳಲ್ಲಿ ಕ್ರಮವಾಗಿ ಬೆನ್ ಡ್ವಾರ್ಶುಯಿಸ್ ಮತ್ತು ಸ್ಕಾಟ್ ಕರ್ರಿ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಅವಕಾಶ ಸೃಷ್ಟಿಸಿದರು.
ಆದರೆ, 98ನೇ ಎಸೆತದಲ್ಲಿ ಸಾಕಿಬ್ ಮಹಮೂದ್ ರನ್ ಕದಿಯಲು ಯತ್ನಿಸಿದಾಗ, ಶಾರ್ಟ್ ಥರ್ಡ್ ಮ್ಯಾನ್ನಿಂದ ಆದಿಲ್ ರಶೀದ್ ನೇರ ಥ್ರೋ ಮೂಲಕ ಅವರನ್ನು ರನ್ ಔಟ್ ಮಾಡಿದರು. ಮೂರನೇ ವಿಕೆಟ್ ರನ್ ಔಟ್ ರೂಪದಲ್ಲಿ ಬಂದಿದ್ದರಿಂದ ಅದು ಬೌಲರ್ ಲ್ಯೂಕ್ ವುಡ್ ಅವರ ಖಾತೆಗೆ ಸೇರಲಿಲ್ಲ. ಹೀಗಾಗಿ ವೈಯಕ್ತಿಕ ಹ್ಯಾಟ್ರಿಕ್ ದಾಖಲಾಗಲಿಲ್ಲ. ಆದಾಗ್ಯೂ, ತಂಡವು ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದಿದ್ದರಿಂದ ಇದನ್ನು 'ತಂಡದ ಹ್ಯಾಟ್ರಿಕ್' ಎಂದು ಪರಿಗಣಿಸಲಾಯಿತು.
ಇನ್ನೂ ಪಂದ್ಯದ ವಿವರಕ್ಕೆ ಬರುವುದಾದರೆ, ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ 8 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು. ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ 34 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪರ ರಹಾನ್ ಅಹ್ಮದ್ 25 ರನ್ ನೀಡಿ 3 ವಿಕೆಟ್ ಪಡೆದರು. 129 ರನ್ಗಳ ಗುರಿ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಒಂದು ಹಂತದಲ್ಲಿ 47 ಎಸೆತಗಳಲ್ಲಿ 1 ವಿಕೆಟ್ 52 ರನ್ ಗಳಿಸಿತ್ತು. ಆದರೆ ನಂತರ ಸದರ್ನ್ ಬ್ರೇವ್ ಬೌಲರ್‌ಗಳು ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಮಾರ್ಕಸ್ ಸ್ಟೋನಿಸ್ ಬೌಲಿಂಗ್‌ನಲ್ಲೂ ತಮ್ಮ ಛಾಪು ಮೂಡಿಸಿದರು. ಅವರು 10 ಎಸೆತಗಳಲ್ಲಿ ಕೇವಲ 16 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು. ಜೋಫ್ರಾ ಆರ್ಚರ್ 20 ಎಸೆತಗಳಲ್ಲಿ 21 ರನ್ ನೀಡಿ 1 ವಿಕೆಟ್ ಪಡೆದರು. ಲ್ಯೂಕ್ ವುಡ್ 3 ವಿಕೆಟ್ ಕಬಳಿಸಿದರು. ಪರಿಣಾಮವಾಗಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವು 100 ಎಸೆತಗಳಲ್ಲಿ 9 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಸದರ್ನ್ ಬ್ರೇವ್ 12 ರನ್‌ಗಳಿಂದ ಗೆದ್ದು ಈ ಸೀಸನ್‌ನಲ್ಲಿ ತನ್ನ ಮೊದಲ ಜಯ ಸಾಧಿಸಿತು. ಸತತ ಮೂರು ಪಂದ್ಯಗಳನ್ನು ಸೋತಿದ್ದ ಈ ತಂಡ ಈಗ ಗೆಲುವಿನ ಹಳಿಗೆ ಮರಳಿದೆ, (ಏಜೆನ್ಸೀಸ್).