ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ( Australia ) 
ಕ್ರಿಕೆಟ್

ಆಸ್ಟ್ರೇಲಿಯಾ ಕ್ರಿಕೆಟ್​ ಅವನತಿ ಆರಂಭವಾಗಿದ್ದೇ ಭಾರತದ ಮಣ್ಣಿನಲ್ಲಿ ನಡೆದ ಆ ಒಂದು ಘಟನೆಯಿಂದ! ಅಂದು ನಡೆದಿದ್ದೇನು? Australia

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್​ನ ಲೀಗ್​ ಹಂತದಲ್ಲೇ ಹೊರಬಿದ್ದ ಆಸ್ಟ್ರೇಲಿಯಾ
  • ಆಸಿಸ್​ ಪಡೆ ಟೂರ್ನಿಯಿಂದ ಹೊರಬಿದ್ದಿರುವುದನ್ನು ಬೆರಗುಗಣ್ಣಿನಿಂದ ನೋಡುತ್ತಿರುವ ಕ್ರಿಕೆಟ್ ಜಗತ್ತು
  • ಆ ಒಂದು ಘಟನೆಯಿಂದಲೇ ಆಸ್ಟ್ರೇಲಿಯಾ ಕ್ರಿಕೆಟ್​ನ ಅವನತಿ ಆರಂಭವಾಯಿತು
ನವದೆಹಲಿ : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್​ನಲ್ಲಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಆಸ್ಟ್ರೇಲಿಯಾ ( Australia ) ವಿಫಲವಾಗಿದೆ. ಆಸ್ಟ್ರೇಲಿಯಾ ಹೆಸರು ಕೇಳಿದರೆ ಸಾಕು ಇತರೆ ರಾಷ್ಟ್ರದ ಕ್ರಿಕೆಟ್​ ತಂಡಗಳು ಹೆದರುವಂತಹ ಒಂದು ಕಾಲ ಇತ್ತು. ಆದರೆ, ಇದೀಗ ವಿಶ್ವಕಪ್​​ ಟೂರ್ನಿಯ ಲೀಗ್​ ಹಂತದಲ್ಲೇ ಆಸಿಸ್​ ಪಡೆ ಹೊರಬಿದ್ದಿರುವುದು ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ.
ಮಂಗಳವಾರ (ಫೆ.17) ಶ್ರೀಲಂಕಾದ ಕೊಲಂಬೊದಲ್ಲಿ ಗ್ರೂಪ್-ಬಿ ಭಾಗವಾಗಿ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿ, ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್​ನಿಂದ ಹೊರಬಿತ್ತು. ಇದಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದು ಆಸ್ಟ್ರೇಲಿಯಾ ತಂಡದ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರಿತು. ಕ್ರಿಕೆಟ್​ ಶಿಶು ಜಿಂಬಾಬ್ವೆ ವಿರುದ್ಧ ಆಸಿಸ್​ ಪಡೆ ಗೆದ್ದಿದದ್ದರೆ, ಸುಲಭವಾಗಿ ಸೂಪರ್​ 8 ಹಂತಕ್ಕೆ ಪ್ರವೇಶ ಪಡೆಯುತ್ತಿತ್ತು. ಆದರೆ, ಆ ಒಂದು ಸೋಲು ಆಸಿಸ್​ ಪಡೆಯನ್ನು ಟೂರ್ನಿಯಿಂದಲೇ ಹೊರದಬ್ಬಿದೆ.
ಇದರ ನಡುವೆ, ಆಸಿಸ್​ ತಂಡದ ಇಂದಿನ ಸ್ಥಿತಿ ಭಾರಿ ಚರ್ಚಗೆ ಗ್ರಾಸವಾಗಿದೆ. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್​ ಅನ್ನು ಆಳುತ್ತಿದ್ದ ಆಸ್ಟ್ರೇಲಿಯಾ, ಇಂದು ಇಂತಹ ಸ್ಥಿತಿಗೆ ಬರಲು ಕಾರಣ ಏನು? ಅದು ಕೂಡ ಕ್ರಿಕೆಟ್​ ಶಿಶುಗಳ ಮುಂದೆಯೇ ಸೋಲುವುದು ಅಂದರೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಚರ್ಚೆಗಳ ನಡುವೆ ಒಂದು ಹಳೆಯ ಘಟನೆಯನ್ನು ಕ್ರೀಡಾಭಿಮಾನಿಗಳು ಮೆಲಕು ಹಾಕುತ್ತಿದ್ದಾರೆ. ಈ ಒಂದು ಘಟನೆಯಿಂದಲೇ ಆಸ್ಟ್ರೇಲಿಯಾ ಕ್ರಿಕೆಟ್​ನ ಅವನತಿ ಆರಂಭವಾಯಿತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಾವುದು ಆ ಘಟನೆ? ಅಂದು ನಡೆದಿದ್ದಾರೂ ಏನು? ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಟ್ರೋಫಿ ಮೇಲೆ ಕಾಲಿಟ್ಟಿದ್ದೇ ಕಂಟಕ!

ಹೌದು, ಮಿಚೆಲ್ ಮಾರ್ಷ್ 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಟ್ರೋಫಿ ಮೇಲೆ ಕಾಲಿಟ್ಟು ಪೋಸ್ ನೀಡಿದ್ದರು. ಇದಾದ ನಂತರ ಐಸಿಸಿ ಟೂರ್ನಿಗಳಲ್ಲಿ ಆಸೀಸ್ ಸತತವಾಗಿ ಎಡವುತ್ತ ಬಂದಿದೆ. 2024ರ ಟಿ20 ವಿಶ್ವಕಪ್‌, 2025ರ ಚಾಂಪಿಯನ್ಸ್ ಟ್ರೋಫಿ, 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲೂ ಆಸಿಸ್​ ಮುಗ್ಗರಿಸಿತು. ಟ್ರೋಫಿ ಮೇಲೆ ಕಾಲಿಟ್ಟಿದ್ದು ಅಂದು ಭಾರಿ ವಿವಾದಕ್ಕೆ ಗುರಿಯಾಯಿತು. ಪವಿತ್ರ ಎಂದು ಪರಿಗಣಿಸುವ ಟ್ರೋಫಿ ಮೇಲೆ ಕಾಲುಗಳನ್ನು ಇಟ್ಟು ಅಹಂಕಾರ ತೋರಿದ್ದು, ಇಂದಿನ ಆಸ್ಟ್ರೇಲಿಯಾದ ಹೀನಾಯ ಸ್ಥಿತಿಗೆ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಏನೆಂದರೆ, ಅಂದು ಟ್ರೋಫಿಯ ಮೇಲೆ ಕಾಲಿಟ್ಟ ಅದೇ ಮಿಚೆಲ್​ ಮಾರ್ಷ್ ಇಂದು ಆಸಿಸ್​ ತಂಡದ ನಾಯಕ.

7ನೇ ಬಾರಿ ಮೊದಲ ಸುತ್ತಿನಲ್ಲೇ ನಿರ್ಗಮನ

ಸಾಮಾನ್ಯವಾಗಿ ಐಸಿಸಿ ಟೂರ್ನಿಗಳಲ್ಲಿ ಪ್ರಾಬಲ್ಯ ಮೆರೆಯುವ ಆಸೀಸ್ ತಂಡ, ಮೊದಲ ಸುತ್ತಿನಲ್ಲೇ ಹೊರಬಿದ್ದ 7ನೇ ದೃಷ್ಟಾಂತ ಇದಾಗಿದೆ. ಅಲ್ಲದೆ, ಟಿ20 ವಿಶ್ವಕಪ್‌ನಲ್ಲಿ 2009ರ ಆವೃತ್ತಿಯ ನಂತರ ಮೊದಲ ಬಾರಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದೆ. ಆಸೀಸ್ ಈ ಹಿಂದೆ 1983, 1992ರ ಏಕದಿನ ವಿಶ್ವಕಪ್‌ನಲ್ಲಿ ಮತ್ತು 2013, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಈ ಹಿಂದೆ ಆಸೀಸ್ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಐಸಿಸಿ ಟೂರ್ನಿಗಳಲ್ಲಿ ಭಾರತ (1983, 2013) ಅಥವಾ ಪಾಕಿಸ್ತಾನ (1992, 2009, 2017) ತಂಡಗಳೇ ಪ್ರಶಸ್ತಿ ಹಂಚಿಕೊಂಡಿರುವುದು ವಿಶೇಷ!

ರಿಕಿ ಪಾಂಟಿಂಗ್​ ಬೇಸರ

ಆಸ್ಟ್ರೇಲಿಯಾದಂತಹ ಅಗ್ರ ತಂಡವು ಸೂಪರ್ 8ಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗದಿರುವುದು ತುಂಬಾ ದುರಾದೃಷ್ಟಕರ. ಗಾಯಗಳಿಂದಾಗಿ ಅನೇಕ ಆಟಗಾರರು ತಂಡದಿಂದ ಹೊರಗುಳಿದಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ನಾನು ಭಾವಿಸುತ್ತೇನೆ. ಕೆಲವು ಆಟಗಾರರು ತಂಡದಿಂದ ಹೊರಗುಳಿದಿದ್ದರೂ ತಂಡವು ಉತ್ತಮ ಕ್ರಿಕೆಟ್ ಆಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಈ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಮತ್ತೆ ಪುಟಿದೇಳಬೇಕು. ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಆಸೀಸ್ ತಂಡವು ಬಲವಾದ ಪುನರಾಗಮನವನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಿಕ್ಕಿ ಪಾಂಟಿಂಗ್​ ವಿಶ್ವಾಸ ವ್ಯಕ್ತಪಡಿಸಿದರು, (ಏಜೆನ್ಸೀಸ್​).