ಹಾಲಿ ಆರ್​ಸಿಬಿ ಎರಡಲ್ಲ, ಸತತ ಮೂರು ಐಪಿಎಲ್​ ಟ್ರೋಫಿ ಗೆಲ್ಲಬಲ್ಲ ತಂಡ! 
ಕ್ರಿಕೆಟ್

ಹಾಲಿ ಆರ್​ಸಿಬಿ ಎರಡಲ್ಲ, ಸತತ ಮೂರು ಐಪಿಎಲ್​ ಟ್ರೋಫಿ ಗೆಲ್ಲಬಲ್ಲ ತಂಡ!

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ "ರಾಯಲ್​ ಚಾಂಪಿಯನ್ಸ್​ ಬೆಂಗಳೂರು' (RCB) ತಂಡವಾಗಿ ವಿಜೃಂಭಿಸುತ್ತಿದೆ. ಈ ಹಿಂದೆ ಅನುಭವಿಸಿದ ನೋವು, ಅವಮಾನ, ಸೋಲುಗಳೆಲ್ಲ ಈಗ ಸಂಭ್ರಮ, ಸಮ್ಮಾನ ಮತ್ತು ವಿಜಯೋತ್ಸವವಾಗಿ ಪರಿವರ್ತನೆಯಾಗಿದೆ. ಒಂದೇ ಒಂದು ಪ್ರಶಸ್ತಿಗಾಗಿ (IPL) 18 ವರ್ಷಗಳ ಕಾಲ ಕಾದು ಕುಳಿತಿದ್ದ ತಂಡವೀಗ ಅವಳಿ ಪ್ರಶಸ್ತಿ ಗೆಲುವಿನ ಬೋನಸ್​ ಪಡೆದುಕೊಂಡಿದೆ. ಆದರೆ ಇದು ಇಷ್ಟಕ್ಕೇ ನಿಲ್ಲುವ ಲಕ್ಷಣವೂ ಇಲ್ಲ. ಮುಂದಿನ ವರ್ಷ ಮತ್ತೊಂದು ಪ್ರಶಸ್ತಿ ಗೆಲುವಿನೊಂದಿಗೆ ಹ್ಯಾಟ್ರಿಕ್​ ಸಾಧಿಸುವ ಸುವರ್ಣಾವಕಾಶವೂ ರಜತ್​ ಪಾಟೀದಾರ್​ ಬಳಗದ ಮುಂದಿದೆ. ಆರ್​ಸಿಬಿ ತಂಡ 19ನೇ ಆವೃತ್ತಿಯುದ್ದಕ್ಕೂ ಸಾಧಿಸಿದ ಪ್ರಾಬಲ್ಯ ಇದನ್ನು ನಿರೂಪಿಸುವಂತಿದೆ.

ಆರ್​ಸಿಬಿ 18ನೇ ಆವೃತ್ತಿಯಲ್ಲಿ ಕಪ್​ ಗೆಲುವಿನ ಬರ ನೀಗಿಸಿಕೊಂಡಿತು. 19ನೇ ಆವೃತ್ತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಾಂಪಿಯನ್​ ತಂಡದಂತೆಯೇ ಟೂರ್ನಿಯುದ್ದಕ್ಕೂ ಆಟವಾಡಿತು. ಅಲ್ಲದೆ ಎಲ್ಲ ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರಿಸಿತು. ರಜತ್​ ಪಾಟೀದಾರ್​ ಮುಂಚೂಣಿಯಲ್ಲಿ ನಿಂತು ತಂಡವನ್ನು ಸಮರ್ಥವಾಗಿ ನಿಭಾಯಿಸಿದರೆ, ವಿರಾಟ್​ ಕೊಹ್ಲಿ ತಂಡದ ಪ್ರಮುಖ ಶಕ್ತಿಯಾಗಿ ಮುಂದುವರಿದರು. ಯಾವುದೇ ಪ್ರಮುಖ ಲೋಪದೋಷ, ದೌರ್ಬಲ್ಯಗಳಿಲ್ಲದೆ ಸಂಪೂರ್ಣ ಪರಾಕ್ರಮ ಪ್ರದರ್ಶಿಸಿತು. ಟೂರ್ನಿಯಲ್ಲಿ ಆಡಿದ 10 ತಂಡಗಳ ಪೈಕಿ ಆರ್​ಸಿಬಿಯಷ್ಟು ಸಮತೋಲನ, ಸರ್ವಾಂಗೀಣ ಮತ್ತು ಬಲಿಷ್ಠವಾದ ತಂಡ ಬೇರಾವುದೂ ಕಾಣಿಸಲಿಲ್ಲ. ಉತ್ತಮ ಆರಂಭದ ಕೊರತೆ, ದುರ್ಬಲ ಮಧ್ಯಮ ಕ್ರಮಾಂಕ, ಬೌಲಿಂಗ್​ ವಿಭಾಗದಲ್ಲಿ ವೈಫಲ್ಯ, ಕಳಪೆ ಫೀಲ್ಡಿಂಗ್​ ವಿಭಾಗದಂಥ ಲೋಪಗಳು ಇತರ ಕೆಲ ತಂಡಗಳಲ್ಲಿ ಎದ್ದು ಕಾಣಿಸಿದವು.

ಇದೇ ತಂಡವನ್ನು ಮುಂದಿನ ಆವೃತ್ತಿಗೂ ಉಳಿಸಿಕೊಳ್ಳುವ ಅವಕಾಶ ಆರ್​ಸಿಬಿ ಮ್ಯಾನೇಜ್​ಮೆಂಟ್​ ಮುಂದಿದೆ. ಯಾಕೆಂದರೆ ಮುಂದಿನ ವರ್ಷವೂ ಮಿನಿ ಹರಾಜು ಮಾತ್ರ ನಡೆಯಲಿದೆ. ಮೆಗಾ ಹರಾಜು ಇರುವುದು 2028ಕ್ಕೆ. ಹೀಗಾಗಿ ಆರ್​ಸಿಬಿ ಈ ಬಾರಿ ಉತ್ತಮ ನಿರ್ವಹಣೆ ತೋರಿದ ಎಲ್ಲ ಆಟಗಾರರನ್ನು ಮುಂದಿನ ಆವೃತ್ತಿಗೂ ರಿಟೇನ್​ ಮಾಡಿಕೊಳ್ಳಬಹುದು. ಅಲ್ಲದೆ ಮುಂದಿನ ಆವೃತ್ತಿಗೆ ಮುನ್ನ ಮಿನಿ ಹರಾಜಿನಲ್ಲಿ ಇನ್ನಷ್ಟು ಭರವಸೆಯ ಆಟಗಾರರನ್ನು ಸೇರಿಸಿಕೊಂಡು ಬಲಿಷ್ಠವಾಗುವ ಅವಕಾಶವೂ ಇದೆ. ಹೀಗಾಗಿ ಈಗಿನ ಆರ್​ಸಿಬಿ ತಂಡ ಒಂದು-ಎರಡಲ್ಲ, ಸತತ ಮೂರು ಕಪ್​ ಗೆಲ್ಲುವ ಸಾಮರ್ಥ್ಯವಿರುವ ತಂಡವೆಂದು ಧೈರ್ಯವಾಗಿ ಹೇಳಬಹುದು.

18 ವರ್ಷಗಳ ಕಾಲ ಕಾದು ಕುಳಿತಿದ್ದು ಕೇವಲ ಒಂದು ಟ್ರೋಫಿಗಾಗಿ ಅಲ್ಲ ಎಂಬ ಸಂದೇಶವನ್ನು ಆರ್​ಸಿಬಿ ಈಗಾಗಲೆ ರವಾನಿಸಿದೆ. ಜತೆಗೆ ಈ ಬಾರಿ ಫೈನಲ್​ ಸಹಿತ ಟೂರ್ನಿಯುದ್ದಕ್ಕೂ ಪ್ರದರ್ಶಿಸಿದ ಆಲ್ರೌಂಡ್​, ಪ್ರಭುತ್ವದ ಆಟ ಮುಂದಿನ ಆವೃತ್ತಿಗೂ ಇತರ ತಂಡಗಳಿಗೆ ಎಚ್ಚರಿಕೆಯ ಗಂಟೆ ಎನಿಸಿದೆ.